ಆನೇಕಲ್: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಅವಶ್ಯಕತೆಯಿದೆ. ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಲು ಕಾರ್ಯಕರ್ತರು ಸಂಕಲ್ಪ ಮಾಡಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಚಂದಾಪುರದಲ್ಲಿ ಆಯೋಜಿಸಿದ್ದ ರೈತ, ವೈದ್ಯ ಮತ್ತು ಕಾರ್ಮಿಕರೊಂದಿಗೆ ಸಂವಾದ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
'ಮತ ಮೊದಲು ಸೇವೆ ನಿರಂತರ’ ಎಂಬ ಧ್ಯೇಯದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನೇತ್ರದಾನ, ಅಂಗಾಂಗ ದಾನ ಒಬ್ಬ ಮನುಷ್ಯ ಜೀವ ಉಳಿಸುತ್ತದೆ. ಅದೇ ರೀತಿ ಮತದಾನ ದೇಶವನ್ನು ಬಲಿಷ್ಠಗೊಳಿಸಬಹುದಾಗಿದೆ. ಹಾಗಾಗಿ ಯುವ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಹೇಳಿದರು.
ಇದೊಂದು ಮಹತ್ವದ ಚುನಾವಣೆ. ದೇಶದಲ್ಲಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಪಕ್ಷ ಗೆಲ್ಲಲಿದೆ. ಈ ಮೂಲಕ ಆರೋಗ್ಯಕರ ಭಾರತ ನಿರ್ಮಾಣವಾಗಲಿದೆ. ನರೇಂದ್ರ ಮೋದಿ ಅವರು ಆರ್ಥಿಕವಾಗಿ ಹಿಂದುಳಿದವರನ್ನು ಸಮಾಜದ ಮುನ್ನೆಲೆಗೆ ತರಬೇಕು ಎಂಬ ಉದ್ದೇಶ ಹೊಂದಿದ್ದಾರೆ. ತಮ್ಮ ಯೋಜನೆಗಳ ಮೂಲಕ ಪ್ರತಿಯೊಬ್ಬರಿಗೂ ಸೌಲಭ್ಯ ಕಲ್ಪಿಸಿದ್ದಾರೆ ಎಂದರು.
ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಉತ್ತಮವಾದ ಸ್ಪಂದನೆ ದೊರೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಆದ ಕನಸು ಕಂಡಿದ್ದೇನೆ. ರೈಲು ನಿಲ್ದಾಣ ಅಭಿವೃದ್ಧಿ, ಶಾಶ್ವತ ನೀರಾವರಿ, ಹೈಟೆಕ್ ರಸ್ತೆ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಬೇಕಿದೆ. ಇದಕ್ಕಾಗಿ ಜನ ಅಧಿಕಾರ ನೀಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಬಿ.ಬಿ.ಐ.ಮುನಿರೆಡ್ಡಿ ಮಾತನಾಡಿ, ಆನೇಕಲ್ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಈ ಕ್ಷೇತ್ರಕ್ಕೆ ಬಿಜೆಪಿ ಹೈಕಮಾಂಡ್ ಹೃದಯವಂತ ವೈದ್ಯರನ್ನು ಅಭ್ಯರ್ಥಿಯಾಗಿ ಘೋಷಿಸಿರುವುದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ ಎಂದರು.
ಚಂದಾಪುರ ಪುರಸಭೆ ಸದಸ್ಯ ಸೋಮಶೇಖರರೆಡ್ಡಿ, ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜುಗೌಡ, ಹಾಪ್‌ಕಾಮ್ಸ್ ನಿರ್ದೇಶಕ ಮುತ್ತೂರು ನಾರಾಯಣಪ್ಪ, ಎನ್.ಎಸ್.ಪ್ರಭು, ನಾಗನಾಯಕನಹಳ್ಳಿ ರಾಧಾಕೃಷ್ಣ, ಜಿಗಣಿ ಪುನೀತ್, ನಾಗೇಶ್ ರೆಡ್ಡಿ, ಸತೀಶ್, ಶಶಿಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.