ದೇವನಹಳ್ಳಿ: ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕುಡಿಯುವ ನೀರು ಮತ್ತು ಕೃಷಿಯ ಭದ್ರತೆಗಾಗಿ ಮೂರು ದಶಕಗಳಿಂದ ನಡೆಯುತ್ತಿರುವ ನೀರಾವರಿ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಅಕ್ಟೋಬರ್ 2 ಗುರುವಾರ ಬೆಳಗ್ಗೆ 10ಕ್ಕೆ ಚಿಕ್ಕಬಳ್ಳಾಪುರ ಕೆಇಬಿ ಸಮುದಾಯ ಭವನದಲ್ಲಿ ‘ಜಲಾಗ್ರಹ’ ಜಂಟಿ ಕ್ರಿಯಾ ಸಮಿತಿಗೆ ಚಾಲನೆ ನೀಡಲಾಗುವುದು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆಂಜನೇಯ ರೆಡ್ಡಿ ತಿಳಿಸಿದರು.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ 30 ವರ್ಷಗಳಲ್ಲಿ ಸರ್ಕಾರ ಸುಮಾರು ₹30 ಸಾವಿರ ಕೋಟಿ ಖರ್ಚು ಮಾಡಿದ್ದರೂ ಜನರಿಗೆ ಸುರಕ್ಷಿತ ನೀರು ಒದಗಿಸಲು ವಿಫಲವಾಗಿದೆ’ ಎಂದು ದೂರಿದರು.
‘ಅಂತರ್ಜಲದಲ್ಲಿ ವಿಕಿರಣಪೂರಿತ ಯುರೇನಿಯಂ ಪತ್ತೆಯಾಗಿದ್ದು, ಇದು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುವ ಅಪಾಯವನ್ನು ಹುಟ್ಟು ಹಾಕಿದೆ. ಇದರ ಜೊತೆಗೆ ಬೆಂಗಳೂರಿನ ತ್ಯಾಜ್ಯ ನೀರನ್ನು ಸರಿಯಾಗಿ ಸಂಸ್ಕರಿಸದೆ ಕೆರೆಗಳಿಗೆ ಹರಿಸುತ್ತಿರುವುದು ನೀರಿನ ಮೂಲಗಳನ್ನು ಮತ್ತಷ್ಟು ಕಲುಷಿತಗೊಳಿಸುತ್ತಿದೆ’ ಎಂದು ಆರೋಪಿಸಿದರು.
ಸರ್ಕಾರ ನೀಡಿರುವ ಸುಳ್ಳು ಭರವಸೆಗಳಿಂದ ಬೇಸತ್ತು, ಹೋರಾಟವನ್ನು ತೀವ್ರಗೊಳಿಸಲು ತೆಲಂಗಾಣ ಮಾದರಿ ಚಳವಳಿಗೆ ನಿರ್ಧರಿಸಲಾಗಿದೆ ಎಂದು ಹೇಳಿದರು.
ಚಳವಳಿಯಲ್ಲಿ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಈ ಹೋರಾಟವನ್ನು ಗ್ರಾಮ ಮಟ್ಟಕ್ಕೆ ಕೊಂಡೊಯ್ಯಲಾಗುವುದು. ರಾಜಕೀಯ ಚಳವಳಿ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಆರೋಗ್ಯಕರ ನಾಳೆಗಾಗಿ ಈ ಜೀವಪರ ಹೋರಾಟಕ್ಕೆ ಪ್ರಜ್ಞಾವಂತರೆಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಳ್ಳೂರು ಹರೀಶ್, ಜಿ.ಜಿ.ಹಳ್ಳಿ ನಾರಾಯಣಸ್ವಾಮಿ, ಕಾರಳ್ಳಿ ಶ್ರೀನಿವಾಸ್, ಚೀಮಾಚನಹಳ್ಳಿ ರಮೇಶ್, ನಲ್ಲಪ್ಪನಹಳ್ಳಿ ನಂಜಪ್ಪ ಸೇರಿದಂತೆ ಇತರರು ಹಾಜರಿದ್ದರು.
ಬೆಂಗಳೂರಿನ ತ್ಯಾಜ್ಯ ನೀರಿಗೆ ಕಡ್ಡಾಯವಾಗಿ ತ್ರಿ-ಹಂತದ ಶುದ್ಧೀಕರಣ ಮಾಡುವುದುಕೃಷ್ಣಾ ನದಿ ಪಾಲಿನ ನೀರನ್ನು ಹರಿಸಿ ಜಿಲ್ಲೆಗಳಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವುದುವಿಶೇಷ ಪ್ಯಾಕೇಜ್ ಘೋಷಿಸಿ ಕೆರೆಗಳ ಪುನಶ್ಚೇತನ ಹಾಗೂ ನದಿಗಳ (ಉತ್ತರ ಪಿನಾಕಿನಿ ದಕ್ಷಿಣ ಪಿನಾಕಿನಿ ಇತ್ಯಾದಿ) ಪುನರುಜ್ಜೀವನಕ್ಕೆ ಒತ್ತು ನೀಡುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.