ಹೊಸಕೋಟೆ: ಸಂಚಾರ ದಟ್ಟಣೆ ಮತ್ತು ತುರ್ತು ಸಂದರ್ಭದಲ್ಲಿ ರಕ್ತ, ಔಷಧ ಮತ್ತು ಚಿಕಿತ್ಸೆ ಪರಿಕರಗಳನ್ನು ಡ್ರೋನ್ ಮೂಲಕ ಕ್ಷಣಾರ್ಧದಲ್ಲಿ ಪೂರೈಸಲು ಏರ್‌ಬೌಂಡ್ ಕಂಪನಿಯ ಯೋಜನೆಯೊಂದು ಸಿದ್ಧಗೊಂಡಿದೆ.
ಇದಕ್ಕಾಗಿ ಬೆಂಗಳೂರಿನ ನಾರಾಯಣ ಹೆಲ್ತ್ ಸೆಂಟರ್ ಜತೆ ಪ್ರಾಯೋಗಿಕವಾಗಿ ಕಂಪನಿ ಮೂರು ತಿಂಗಳ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಭಾಗವಾಗಿ ಮಂಗಳವಾರ ತಾಲ್ಲೂಕಿನ ಸೊಂಪುರ ಗ್ರಾಮದಲ್ಲಿರುವ ಏರ್‌ಬೌಂಡ್ ಕಂಪನಿಯ ಪ್ರಾದೇಶಿಕ ಕಚೇರಿಯಲ್ಲಿ ಡ್ರೋನ್ ಹಾರಾಟ ಪ್ರದರ್ಶನ ನಡೆಯಿತು.
ಬೆಂಗಳೂರು ನಗರದಲ್ಲಿ ಭಾರಿ ಸಂಖ್ಯೆಯ ವಾಹನ ಸಂಚಾರ ಮತ್ತು ಜನದಟ್ಟಣೆಯಿಂದ ಅಪಘಾತ ಸಂಭವಿಸುತ್ತಲೇ ಇರುತ್ತವೆ. ಸರಿಯಾದ ಸಮಯಕ್ಕೆ ವೈದ್ಯಕೀಯ ನೆರವು, ಔಷಧ, ರಕ್ತ, ಚಿಕಿತ್ಸೆ ಸಿಕ್ಕರೆ ಎಷ್ಟೋ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯ. ಆದರೆ, ವಾಹನ ದಟ್ಟಣೆಯಿಂದ ಸರಿಯಾದ ಸಮಯಕ್ಕೆ ಔಷಧ ಮತ್ತು ರಕ್ತ ತಲುಪಿಸಲಾಗದೆ ಎಷ್ಟೋ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಕಂಪನಿ ಸಂಸ್ಥಾಪಕ ಮತ್ತು ಸಿಇಒ ನಮನ್ ಪುಷ್ಪ್ ವಿವರಿಸಿದರು.
ಅದಕ್ಕಾಗಿಯೇ ಕಂಪನಿ ‘ಪೈಲೆಟ್ ಪ್ರಾಜೆಕ್ಟ್’ ಕೈಗೆತ್ತಿಕೊಂಡಿದ್ದು ನಾರಾಯಣ ಹೆಲ್ತ್ ಸೆಂಟರ್ ಜೊತೆ ಮೂರು ತಿಂಗಳ ಪ್ರಾಯೋಗಿಕ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ಸದ್ಯ ದಿನಕ್ಕೆ ಹತ್ತು ಬಾರಿ ವೈದ್ಯಕೀಯ ಅಗತ್ಯಗಳಾದ ರಕ್ತದ ಮಾದರಿ, ಪರೀಕ್ಷಾ ಕಿಟ್ ಮತ್ತು ಔಷಧಗಳನ್ನು ಡ್ರೋನ್ ಮೂಲಕ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಪೂರ್ಣ ಸ್ವದೇಶಿ ನಿರ್ಮಿತ ಡ್ರೋನ್‌ಗಳು 2 ರಿಂದ 25 ಕೆ.ಜಿವರೆಗೂ ತೂಕವಿದ್ದು, ಕನಿಷ್ಠ ಒಂದು ಕೆ.ಜಿ ತೂಕದ ವೈದ್ಯಕೀಯ ಪರಿಕರ ಸಾಗಿಸಬಲ್ಲವು. ತಾಸಿಗೆ 40 ಕಿ.ಮೀ ವೇಗದಲ್ಲಿ 100 ಮೀಟರ್ ಎತ್ತರದಲ್ಲಿ 60 ಕಿ.ಮೀ ವಿಸ್ತೀರ್ಣದಲ್ಲಿ ಸಂಚರಿಸಬಲ್ಲವು. ಪೈಬರ್ ಕಾರ್ಬನ್ ಅಂಶ ಹೆಚ್ಚಾಗಿರುವ ಕಾರಣ ಮಳೆ, ಚಳಿ, ಗಾಳಿ ಮತ್ತು ಬಿಸಿಲಿನಂಥ ವಿವಿಧ ಹವಾಮಾನ ಪರಿಸ್ಥಿತಿಗಳಲ್ಲಿ ಹಾರಾಟ ಮಾಡುವ ಸಾಮರ್ಥ್ಯ ಹೊಂದಿವೆ ಎಂದು ತಿಳಿಸಿದರು.
ಏರ್‌ಬೌಂಡ್ ಜತೆ ಪಾಲುದಾರಿಕೆ ಒಪ್ಪಂದ ವೈದ್ಯಕೀಯ ವಿತರಣೆ ವೇಗ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸಲಿದೆ ಎಂದು ನಾರಾಯಣ ಹೆಲ್ತ್ ಸೆಂಟರ್ ಸಂಸ್ಥಾಪಕ ಅಧ್ಯಕ್ಷ ಡಾ.ದೇವಿ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
ಒಂದು ಕಿ.ಮೀಗೆ ₹10 ಶುಲ್ಕ
ಅತಿ ಕಡಿಮೆ ವೆಚ್ಚದಲ್ಲಿ ಜನರಿಗೆ ವೈದ್ಯಕೀಯ ಸೇವೆ ನೀಡುವ ಉದ್ದೇಶದೊಂದಿಗೆ ಸದ್ಯ ಒಂದು ಕಿ.ಮೀಗೆ ₹10 ಶುಲ್ಕ ನಿಗದಿ ಮಾಡಲು ಕಂಪನಿ ಚಿಂತನೆ ನಡೆಸಿದೆ. ಡ್ರೋನ್ ಮೂಲಕ ಸರಕು ಸಾಗಣೆ ಮಾಡುವ ಈ ಯೋಜನೆಗೆ ಹುಂಬಾ ವೆಂಚರ್ಸ್ ಲೈಟ್‌ಸ್ಪೀಡ್ ಟೆಸ್ಲಾ ಅಂಡುರಿಲ್ ಮತ್ತು ಏಥರ್ ಎನರ್ಜಿಯಂಥ ಸಂಸ್ಥೆಗಳು ಹೂಡಿಕೆ ಮಾಡಿವೆ. ಇದುವರೆಗೂ ₹76 ಕೋಟಿ ನಿಧಿ ಸಂಗ್ರಹವಾಗಿದೆ. ಏರ್‌ಬೌಂಡ್ ಕಂಪನಿಯು ಒಟ್ಟು ₹88 ಕೋಟಿಗೂ ಅಧಿಕ ಹಣ ಸಂಗ್ರಹಿಸಲು ಕ್ರಿಯಾಯೋಜನೆ ರೂಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.