ADVERTISEMENT

ತನಿಖೆಗೆ ವಿಶೇಷ ತಂಡ ರಚನೆ: 164 ಎಕರೆ ಜಮೀನಿಗೆ ನಕಲಿ ದಾಖಲೆ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 8:44 IST
Last Updated 17 ಏಪ್ರಿಲ್ 2021, 8:44 IST
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌ ನಕಲಿ ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌ ನಕಲಿ ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು   

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ನಡೆದಿರುವ 164 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಠಿಗೆ ಸಂಬಂಧಿಸಿದಂತೆ ನಡೆದಿರುವ ಅಕ್ರಮಗಳ ಕುರಿತು ವಿವಿಧ ಠಾಣೆಗಳಲ್ಲಿ 25 ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೈಗಾರಿಕಾ ಪ್ರದೇಶಕ್ಕೆ ಸಮೀಪದ ರಘುನಾಥಪುರ,ಶಿವಪುರ ಗ್ರಾಮಗಳಲ್ಲಿ ಜೀವಂತವಾಗಿರುವ ವ್ಯಕ್ತಿಗಳಿಗೆ ಮೃತ ಪಟ್ಟಿದ್ದಾರೆ ಎಂದು ಮರಣ ಪ್ರಮಾಣ ಪತ್ರ ಪಡೆದು ಅಕ್ರಮವಾಗಿ ಖಾತೆ ಬದಲಾವಣೆ ಮಾಡಿಕೊಂಡು ಜಮೀನು ಮಾರಾಟ ಮಾಡಲಾಗಿದೆ’ ಎಂದರು.

‘ಸಾಸಲು ಹೋಬಳಿಯ ತೋಡಲಬಂಡೆ ಗ್ರಾಮದಲ್ಲಿ ರುದ್ರಪ್ಪ ಎಂಬುವವರು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ಮುತ್ತುರಾಯಪ್ಪ ಎಂಬುವವರಿಗೆ ಸೇರಿದ್ದ ಜಮೀನನ್ನು ತನ್ನದು ಎಂದು ವಂಶವೃಕ್ಷ ಮಾಡಿಸಿಕೊಂಡಿದ್ದಾರೆ. ಗ್ರಾಮದ ಹತ್ತು ಜನ ಸಾಕ್ಷಿಗಳ ನಕಲಿಸಹಿಗಳನ್ನು ಹಾಕುವ ಮೂಲಕ ಅಕ್ರಮವಾಗಿ ತಮ್ಮ ಹೆಸರಿಗೆ ಖಾತೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಒಂದೊಂದು ಜಮೀನು ಪ್ರಕರಣದಲ್ಲೂ ಒಂದೊಂದು ರೀತಿಯ ಅಕ್ರಮಗಳು ನಡೆದಿವೆ. ತಾಲ್ಲೂಕಿನಲ್ಲಿ ವಿವಿಧ ಯೋಜನೆಗಳಿಗೆ ಭೂಸ್ವಾಧೀನ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಕಲಿ ದಾಖಲೆಗಳ ಸೃಷ್ಠಿ ಮಿತಿ ಮೀರಿದೆ. ಜಮೀನುಗಳಿಗೆ ಅಕ್ರಮ ದಾಖಲೆಗಳನ್ನುಸೃಷ್ಟಿಸುವಲ್ಲಿ ತಾಲ್ಲೂಕಿನಲ್ಲಿ ಮೂರು ಗುಂಪುಗಳು ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ನಕಲಿ ದಾಖಲೆ ಹೊಂದಿರುವ ಜಮೀನು ಮಾರಾಟ, ಖರೀದಿಯಲ್ಲಿ ರೌಡಿಶೀಟರ್‌ಗಳು, ಬೆಂಗಳೂರು ಮೂಲದ ರಿಯಲ್‌ಎಸ್ಟೇಟ್‌ ಕಂಪನಿಯೊಂದು ಸಕ್ರಿಯವಾಗಿದೆ. ಈ ಬಗ್ಗೆಯು ತನಿಖೆಯಲ್ಲಿ ಬೆಳಕಿಗೆ ಬಂದಿದೆ’ ಎಂದರು.

ADVERTISEMENT

ವಿಶೇಷ ತಂಡ: ತಾಲ್ಲೂಕಿನಲ್ಲಿ ಜಮೀನುಗಳಿಗೆ ಅಕ್ರಮ ದಾಖಲೆಸೃಷ್ಟಿ ಪ್ರಕರಣಗಳು ಹೆಚ್ಚಾಗಿರುವ ಕುರಿತಂತೆ ಶೀಘ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷಕ್ಷೆ ಕೊಡಿಸುವ ಸಲುವಾಗಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಗಣೇಶ್‌, ಡಿವೈಎಸ್‌ಪಿ ಟಿ.ರಂಗಪ್ಪ, ಸರ್ಕಲ್‌ ಇನ್‌ಸ್ಪೆಕ್ಟರ್‌ ಎಂ.ಬಿ.ನವೀನ್‌ಕುಮಾರ್‌,ಸತೀಶ್‌ ಸೇರಿದಂತೆ 10 ಜನ ಸಿಬ್ಬಂದಿ ಒಳಗೊಂಡ ವಿಶೇಷ ತಂಡ ರಚಿಸಲಾಗಿದೆ ಎಂದರು.

ಕಂದಾಯ ಇಲಾಖೆ ಅಧಿಕಾರಿಗಳು ನಕಲಿ ದಾಖಲೆಗಳಸೃಷ್ಟಿಯಲ್ಲಿ ಶಾಮೀಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ಇಲಾಖಾ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಕುರಿತಂತೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ, ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪತ್ರ ಬರೆದು ಕೋರಲಾಗಿದೆ. ದೊಡ್ಡಬಳ್ಳಾಪುರ ಉಪನೋಂದಣಿ ಅಧಿಕಾರಿಗಳು ನೀಡಿದ್ದದೂರಿನ ಮೇರೆಗೆ ಇಲ್ಲಿಯವರೆಗೆ ನಕಲಿ ದಾಖಲೆಸೃಷ್ಟಿಯಲ್ಲಿ ಭಾಗಿಯಾಗಿರುವ ಕಂದಾಯ ಇಲಾಖೆ ಹೊರಗುತ್ತಿಗೆ ನೌಕರರನ್ನು ಬಂಧಿಸಲಾಗಿದೆ. ಜಿಲ್ಲಾಧಿಕಾರಿಗಳು ನೀಡುವ ವರದಿಯನ್ನು ಆಧರಿಸಿ ಕಂದಾಯ ಇಲಾಖೆ ನೌಕರರನ್ನು ಬಂಧಿಸಲಾಗುವುದು ಎಂದರು.

ಜಮೀನುಗಳಿಗೆ ನಕಲಿ ದಾಖಲೆಸೃಷ್ಟಿಯ ಬಯಲಿಗೆ ತಂದ ಡಿವೈಎಸ್‌ಪಿ ಟಿ.ರಂಗಪ್ಪ ಸೇರಿದಂತೆ ಪೊಲೀಸರ ತಂಡಕ್ಕೆ ಕೇಂದ್ರವಲಯ ಐಜಿಪಿ ಅವರು ನಗದುಬಹುಮಾನ ಘೋಷಣೆ ಮಾಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಗಣೇಶ್‌, ಡಿವೈಎಸ್‌ಪಿ ಟಿ.ರಂಗಪ್ಪ, ಸರ್ಕಲ್‌ ಇನ್‌ಸ್ಪೆಕ್ಟರ್‌ ಎಂ.ಬಿ.ನವೀನ್‌ಕುಮಾರ್‌, ಇನ್‌ಸ್ಪೆಕ್ಟರ್‌ ಸತೀಶ್‌, ಸಬ್‌ಇನ್‌ಸ್ಪೆಕ್ಟರ್‌ ಮಂಜುನಾಥ್‌,ಗಜೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.