ADVERTISEMENT

ತುರ್ತು ಸಮಸ್ಯೆಗೆ ಇ-–ಸಂಜೀವಿನಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 3:35 IST
Last Updated 27 ಏಪ್ರಿಲ್ 2021, 3:35 IST
ಇ–ಸಂಜೀವಿನಿ
ಇ–ಸಂಜೀವಿನಿ   

ದೊಡ್ಡಬಳ್ಳಾಪುರ: ದೇಶಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತು ಆರೋಗ್ಯ ಸಮಸ್ಯೆಗಳಿಗೆ ರೋಗಿಗಳು ಆಸ್ಪತ್ರೆಗೆ ಮತ್ತು ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವುದು ಕಷ್ಟವಾಗಿದೆ. ಸಾರ್ವ
ಜನಿಕರಿಗೆ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಇ-ಸಂಜೀವಿನಿ ಯೋಜನೆಯನ್ನು ಜಾರಿಗೆ ತಂದಿದ್ದು, ಜಿಲ್ಲೆಯ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.

ಸಾಮಾನ್ಯ ಕೆಮ್ಮು, ನೆಗಡಿ, ಜ್ವರ ಮತ್ತು ಇತರೆ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಕುಳಿತು ವೈದ್ಯರಿಂದ ಚಿಕಿತ್ಸೆ ಪಡೆಯಲು ಇ-ಸಂಜೀವಿನಿ ಆ್ಯಪ್ ಬಳಸಬಹುದಾಗಿದೆ. ವೈದ್ಯರನ್ನು ಮೊಬೈಲ್‌ನಲ್ಲಿ ಸಂಪರ್ಕಿಸಲು ತಮ್ಮ ಮೊಬೈಲ್‌ನಲ್ಲಿನ ಗೂಗಲ್‌ನಲ್ಲಿ ಇ-ಸಂಜೀವಿನಿ ಒಪಿಡಿ ಎಂದು ನಮೂದಿಸಿ, ರಿಜಿಸ್ಟರ್ ಆಗಬೇಕು. ನಂತರ ವೆಬ್ ವಿಡಿಯೊ ಮೂಲಕ ಸಂಪರ್ಕಕ್ಕೆ ಬರುವ ವೈದ್ಯರು ಕಾಯಿಲೆ ಕುರಿತು ವಿವರವಾಗಿ ವಿಚಾರಣೆ ನಡೆಸಿ, ಕಾಯಿಲೆಗೆ ಚಿಕಿತ್ಸೆ ಬರೆದು ಕೊಡಲಿದ್ದಾರೆ. ಆ ಮೂಲಕ ಆಸ್ಪತ್ರೆಯ ಕದತಟ್ಟದೇ, ಇದ್ದಲ್ಲಿಯೇ ರೋಗಕ್ಕೆ ಚಿಕಿತ್ಸೆ ಪಡೆಯಬಹುದಾಗಿದೆ. ಕೊರೊನಾ ಸೋಂಕು ತಡೆಗಟ್ಟುವ ಸಲುವಾಗಿ ಸರ್ಕಾರ ಸಾರ್ವಜನಿಕರಿಗೆ ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ಜನತೆಯಲ್ಲಿ ಮನವಿ ಮಾಡಿಕೊಳ್ಳಲಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಆರೋಗ್ಯದ ತೊಂದರೆಗಳಿಗೆ ಮನೆಯಲ್ಲಿ ಕುಳಿತು ಚಿಕಿತ್ಸೆ ಪಡೆಯಲು, ಕೇಂದ್ರ ಆರೋಗ್ಯ ಮಂತ್ರಾಲಯ,ರಾಷ್ಟ್ರೀಯ ಟೆಲಿಸಮಾಲೋಚನಾ ಸೇವೆ(ನ್ಯಾಷನಲ್ ಟೆಲಿಕನ್ಸಲ್‌ಟೇಷನ್ ಸರ್ವೀಸ್) ಎಂಬ ಹೆಸರಿನಲ್ಲಿ ಲಿಂಕ್‌ನ ಆ್ಯಪ್ ಸಿದ್ಧಪಡಿಸಿದೆ.

ಟೆಲಿ ಸಮಾಲೋಚನಾ ಸೇವೆ ಪಡೆಯಲು ಮೊಬೈಲ್ ಅಥವಾ ಕಂಪ್ಯೂಟರ್‌ನ ಗೂಗಲ್‌ನಲ್ಲಿ ಇ-ಸಂಜೀವಿನಿ ಒಪಿಡಿ ಎಂಬುದಾಗಿ ಟೈಪಿಸಿದಾಗ, ಕೇಂದ್ರ ಆರೋಗ್ಯ ಸಚಿವಾಲಯದ ಮುಖ್ಯ ಪುಟ ತೆರೆದುಕೊಳ್ಳಲಿದೆ, ಇದರಲ್ಲಿ ಪೇಷೆಂಟ್ ರಿಜಿಸ್ಟ್ರೇಷನ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿದರೆ ನಿಮಗೊಂದು ಒಟಿಪಿ ನಂಬರ್ ಬರಲಿದೆ, 6 ಒಟಿಪಿ ನಂಬರ್‌ ಅನ್ನು ದಾಖಲಿಸಿದ ನಂತರ ರಿಜಿಸ್ಟ್ರೇಷನ್ ಅಪ್ಲಿಕೇಷನ್ ಒಂದು ತೆರೆದುಕೊಳ್ಳುತ್ತದೆ.

ADVERTISEMENT

ವಿಡಿಯೊಕಾಲ್‌ನಲ್ಲಿ ಸಂಪರ್ಕಕ್ಕಾಗಿ ರೋಗಿಯ ಹೆಸರು, ಲಿಂಗ, ವಯಸ್ಸನ್ನು ಮೊಬೈಲ್ ನಂಬರ್, ವಿಳಾಸವನ್ನು ನಮೂದಿಸಿ ಲಾಗಿನ್ ಆಗಬೇಕು. ಈ ವೇಳೆ ಟೋಕನ್ ನಂಬರ್ ಬರಲಿದ್ದು, ಆ ನಂಬರ್ ನೀಡಿ ವೈದ್ಯರನ್ನು ವಿಡಿಯೊ ಕಾಲ್ ಮೂಲಕ ಸಂಪರ್ಕಿಸಬಹುದಾಗಿದೆ. ಈ ಸೇವೆಯು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಲಭ್ಯವಿರುತ್ತದೆ ಹಾಗೂ ಒಮ್ಮೆ ನೋಂದಣಿಯಾದ ನಂತರ ಪುನಃ ನೋಂದಣಿಯಾಗುವ ಅಗತ್ಯವಿಲ್ಲ. ವಿಡಿಯೊಕಾಲ್ ಮೂಲಕವೇ ವೈದ್ಯರು ರೋಗಿಗಳೊಂದಿಗೆ ಸಮಾಲೋಚಿಸಿ,ಚಿಕಿತ್ಸೆಗೆ ಔಷಧ ಬರೆದು ಕೊಡಲಿದ್ದು, ಜಿಲ್ಲೆಯ ಜನತೆ ಇ-ಸಂಜೀವಿನಿ ಆ್ಯಪ್‌ನ ಉಪಯೋಗವನ್ನು ಪಡೆಯಬೇಕು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.