ADVERTISEMENT

ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ: ಮುಝಾಮಿಲ್ ಸಾಬ್

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 14:17 IST
Last Updated 2 ಫೆಬ್ರುವರಿ 2020, 14:17 IST
ಸೂಲಿಬೆಲೆ ಉರ್ದು ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಪುಟಾಣಿ ಮಕ್ಕಳಿಂದ ನೃತ್ಯ ಪ್ರದರ್ಶನ
ಸೂಲಿಬೆಲೆ ಉರ್ದು ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಪುಟಾಣಿ ಮಕ್ಕಳಿಂದ ನೃತ್ಯ ಪ್ರದರ್ಶನ   

ಸೂಲಿಬೆಲೆ: ಪೋಷಕರು, ಶಿಕ್ಷಕರು, ಶಾಲೆಯ ಜವಾಬ್ದಾರಿ ತೆಗೆದುಕೊಂಡ ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಜತೆಗೆ ವಿದ್ಯಾರ್ಥಿಯ ಪರಿಶ್ರಮ ಇದ್ದರೆ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಸೋಫಾ ದಿನಿಯಾತ್ ಫೌಂಡೇಶನ್ ಅಧ್ಯಕ್ಷ ಮುಝಾಮಿಲ್ ಸಾಬ್ ಹೇಳಿದರು.

ಸೂಲಿಬೆಲೆ ಉರ್ದು ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

‘ಶಿಕ್ಷಣದಿಂದ ಅಲ್ಪಸಂಖ್ಯಾತರು ವಂಚಿತರಾಗುತ್ತಿದ್ದಾರೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾವಂತರನ್ನಾಗಿ ಮಾಡಿ ಸದೃಢ ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂದು ಪೋಷಕರಿಗೆ ಕರೆ ನೀಡಿದರು.

ADVERTISEMENT

ತಾಲ್ಲೂಕು ಟಿಎಪಿಸಿಎಂಎಸ್ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ ಮಾತನಾಡಿ, ‘ಸೂಲಿಬೆಲೆ ಪಟ್ಟಣದಲ್ಲಿ ಹಿಂದೆ ಉರ್ದು ಪ್ರೌಢಶಾಲೆಯಿಲ್ಲದೆ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಸಂಸದ ಬಿ.ಎನ್.ಬಚ್ಚೇಗೌಡ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಉರ್ದು ಪ್ರೌಢಶಾಲೆ ಸ್ಥಾಪನೆಯಾಯಿತು. ಇಂದು ಇಲ್ಲಿನ ಅನೇಕ ಹೆಣ್ಣು ಮಕ್ಕಳು ಉನ್ನತ ವ್ಯಾಸಂಗ ಪಡೆಯುತ್ತಿರುವುದು ಹರ್ಷದ ವಿಚಾರ’ ಎಂದರು.

ಪ್ರೌಢಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಇನಾಯತ್ ಪಾಷ ಮಾತನಾಡಿ, ‘ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳು ಇರುವ ಸರ್ಕಾರಿ ಮಾದರಿ ಶಾಲೆಯಾಗಿದ್ದು, ಪ್ರಾಥಮಿಕ ಮತ್ತು ಪ್ರೌಢಶಾಲೆಯಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು 12 ಕೊಠಡಿಗಳಿವೆ. ತುರ್ತಾಗಿ ಇನ್ನೂ 6 ಕೊಠಡಿಗಳ ಅವಶ್ಯಕತೆಯಿದ್ದು, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ’ ಎಂದರು.

ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಇಮ್ರಾನ್ ಪಾಷ ಮಾತನಾಡಿ, ‘ನಮ್ಮ ಶಾಲೆಯಲ್ಲಿ ಎಲ್.ಕೆ.ಜಿ ಮತ್ತು ಯುಕೆಜಿ ತರಗತಿಗಳನ್ನು ನಡೆಸುತ್ತಿದ್ದು, ಒಬ್ಬ ವಿದ್ಯಾರ್ಥಿಯಿಂದ ಕನಿಷ್ಠ ಶುಲ್ಕ ಪಡೆದು, ಯೂನಿಫಾರಂ, ಪುಸ್ತಕ, ನೋಟ್ ಬುಕ್, ಶೂ ಮತ್ತಿತರ ಸಾಮಗ್ರಿಗಳನ್ನು ಹಾಗೂ ಶಿಕ್ಷಕರ ಸಂಬಳವನ್ನು ನೀಡುತ್ತಿದ್ದೇವೆ ಇದಕ್ಕೆ ಕಾರಣ ಎಸ್.ಡಿ.ಎಂ.ಸಿ ಪದಾಧಿಕಾರಿಗಳ ಸಹಾಯ ಮತ್ತು ಪ್ರೋತ್ಸಾಹ’ ಎಂದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷ ಮರವೆ ಕೃಷ್ಣಪ್ಪ, ಎಸಿ ಪದಾಧಿಕಾರಿಗಳಾದ ಸೈಯದ್ ಮಹಬೂಬ್, ಎಸ್.ಕೆ.ರಿಜ್ವಾನ್, ಚಾಂದ್ ಪಾಷ, ನವಾಝ್ ಪಾಷ, ಆಯಿಷಾ, ಜಬೀನ್ ತಾಜ್, ಮಿಸ್ಬಾ ತಾಜ್, ರೇಷ್ಮಾ, ಎಂ.ಡಿ. ರಫಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.