ADVERTISEMENT

ಶಿಕ್ಷಣ ಭವಿಷ್ಯ ರೂಪಿಸುವ ಸಾಧನ: ಶಾಸಕ ಬಿ. ಶಿವಣ್ಣ

ಆನೇಕಲ್ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಟ್ಯಾಬ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 3:35 IST
Last Updated 24 ಜೂನ್ 2021, 3:35 IST
ಆನೇಕಲ್‌ನ ಡಾ.ಎಸ್. ಗೋಪಾಲರಾಜು ಪ್ರಥಮದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಾಸಕ ಬಿ. ಶಿವಣ್ಣ ಟ್ಯಾಬ್‌ ವಿತರಿಸಿದರು
ಆನೇಕಲ್‌ನ ಡಾ.ಎಸ್. ಗೋಪಾಲರಾಜು ಪ್ರಥಮದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಾಸಕ ಬಿ. ಶಿವಣ್ಣ ಟ್ಯಾಬ್‌ ವಿತರಿಸಿದರು   

ಆನೇಕಲ್:ವ್ಯಕ್ತಿಯ ಭವಿಷ್ಯ ರೂಪಿಸುವ ಪ್ರಮುಖ ಸಾಧನ ಶಿಕ್ಷಣ. ಹಾಗಾಗಿ, ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸಲು ಸತತ ಅಧ್ಯಯನ, ಶ್ರಮ ಮತ್ತು ಶಿಸ್ತನ್ನು ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಶಾಸಕ ಬಿ. ಶಿವಣ್ಣ ತಿಳಿಸಿದರು.

ಪಟ್ಟಣದ ಡಾ.ಎಸ್‌. ಗೋಪಾಲರಾಜು ಪ್ರಥಮದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡಲಾದ ಟ್ಯಾಬ್‌ ವಿತರಿಸಿ ಅವರು ಮಾತನಾಡಿದರು.

ಕೊರೊನಾದಿಂದಾಗಿ ಆನ್‌ಲೈನ್‌ ಶಿಕ್ಷಣ ಅನಿವಾರ್ಯವಾಗಿದೆ. ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಸರ್ಕಾರ ಪದವಿ ವ್ಯಾಸಂಗ ಮಾಡುತ್ತಿರುವ 110 ವಿದ್ಯಾರ್ಥಿಗಳಿಗೆ ಟ್ಯಾಬ್‌ಗಳನ್ನು ನೀಡಿದೆ ಎಂದರು.

ADVERTISEMENT

ಟ್ಯಾಬ್‌ಗಳಲ್ಲಿ ಉಪನ್ಯಾಸಕರು ತರಗತಿಗಳ ಪಠ್ಯ ವಿಷಯ ನೀಡಿದ್ದಾರೆ. ಇವುಗಳಲ್ಲದೇ ಆನ್‌ಲೈನ್‌ ಮೂಲಕ ಮಾಹಿತಿಯನ್ನು ತಿಳಿಸಿಕೊಡುತ್ತಾರೆ. ಹಾಗಾಗಿ ಇವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಕೊರೊನಾದಿಂದಾಗಿ ಉಂಟಾಗಿರುವ ಶೈಕ್ಷಣಿಕ ವ್ಯತ್ಯಾಸವನ್ನು ಸರಿದೂಗಿಸಿಕೊಳ್ಳಲು ಟ್ಯಾಬ್‌ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಪದವಿ ನಂತರ ವಿದ್ಯಾರ್ಥಿ ಹಲವಾರು ಅವಕಾಶಗಳಿವೆ. ನಾಗರಿಕ ಸೇವಾ ಪರೀಕ್ಷೆ ಬರೆಯಬಹುದು. ಇದಕ್ಕಾಗಿ ಸಮರ್ಪಕ ಸಿದ್ಧತೆ ಮಾಡಿಕೊಳ್ಳಬೇಕು. ಪದವಿಯ ಅಧ್ಯಯನ ಪ್ರಮಾಣ ಪತ್ರಕ್ಕೆ ಸೀಮಿತವಾಗಬಾರದು. ಪದವಿ ಪಡೆದ ನಂತರ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ಟೌನ್‌ ಕಾಂಗ್ರೆಸ್‌ ಅಧ್ಯಕ್ಷ ಜಿ. ಗೋಪಾಲ್‌, ಪುರಸಭಾ ಸದಸ್ಯರಾದ ಮುನಾವರ್, ಮಹಾಂತೇಶ್, ಜಿಎಂಆರ್‌ ಎಲೈಟ್‌ ಅಕಾಡೆಮಿಯ ಜಿ. ಮುನಿರಾಜು, ಮುಖಂಡರಾದ ಪ್ರಕಾಶ್, ದಿನೇಶ್, ರವಿಶಾಸ್ತ್ರಿ, ಕೃಷ್ಣಂರಾಜು, ವೆಂಕಟೇಶ್, ಕಾಲೇಜಿನ ಪ್ರಾಚಾರ್ಯ ಡಾ.ರಾಮಕೃಷ್ಣ ಹಾಜರಿದ್ದರು.

ಶ್ರದ್ಧಾಂಜಲಿ ಸಭೆ: ಇತ್ತೀಚೆಗೆ ನಿಧನರಾದ ಅನಿವಾಸಿ ಭಾರತೀಯ ಮತ್ತು ಆನೇಕಲ್‌ ಸರ್ಕಾರಿ ಪದವಿ ಕಾಲೇಜಿನ ಕಟ್ಟಡ ದಾನಿಗಳಾದ ಡಾ.ಎಸ್‌. ಗೋಪಾಲರಾಜು ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.