ADVERTISEMENT

ಶಿಕ್ಷಣ ವ್ಯವಸ್ಥೆಯಲ್ಲಿ ತಾಂತ್ರಿಕ ಬದಲಾವಣೆ ಅಗತ್ಯ: ಸಂಸದ ಯದುವೀರ ಒಡೆಯರ್‌

ಅಂತರರಾಷ್ಟ್ರೀಯ ಶಾಲಾ ನಾಯಕರ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 2:28 IST
Last Updated 14 ಸೆಪ್ಟೆಂಬರ್ 2025, 2:28 IST
ಆನೇಕಲ್‌ನ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಶಾಲಾ ನಾಯಕರ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತಿತರರು ಭಾಗವಹಿಸಿದ್ದರು
ಆನೇಕಲ್‌ನ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಶಾಲಾ ನಾಯಕರ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತಿತರರು ಭಾಗವಹಿಸಿದ್ದರು   

ಆನೇಕಲ್: ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ. ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ತಾಂತ್ರಿಕ ಬದಲಾವಣೆಗಳು ಮತ್ತು ನವೀನ ತಂತ್ರಜ್ಞಾನಗಳ ಬಗ್ಗೆ ಶೈಕ್ಷಣಿಕ ಸಂಸ್ಥೆಗಳು ಕ್ರಿಯಾ ಯೋಜನೆ ರೂಪಿಸಬೇಕು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

ಪಟ್ಟಣದ ಅಲಯನ್ಸ್‌ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಶಾಲಾ ನಾಯಕರ ಸಮ್ಮೇಳನ – 2025ರ ಸಮಾರೋಪದಲ್ಲಿ ಶನಿವಾರ ಮಾತನಾಡಿದರು.

ವಿದ್ಯಾರ್ಥಿಗಳನ್ನು ಭವಿಷ್ಯಕ್ಕೆ ಸಜ್ಜುಗೊಳಿಸಬೇಕಾದ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ.  ಶಿಕ್ಷಣ ವ್ಯವಸ್ಥೆಯಲ್ಲಿ ಸ್ವದೇಶಿ ಜ್ಞಾನ ಅವಶ್ಯಕ ಎಂದರು.

ADVERTISEMENT

ಇತಿಹಾಸ ಅಧ್ಯಯನ ಮಾಡಿದವರು ಮಾತ್ರ ಇತಿಹಾಸ ಸೃಷ್ಠಿಸಬಹುದಾಗಿದೆ. ಇತಿಹಾಸದ ಅಧ್ಯಯನಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಪಾಶ್ಚಿಮಾತ್ಯಕ್ಕಿಂತ ಹೆಚ್ಚಿನ ಐತಿಹಾಸಿಕತೆ ಭಾರತದಲ್ಲಿದೆ ಎಂದು ತಿಳಿಸಿದರು.

ಅಲಯನ್ಸ್‌ ವಿಶ್ವವಿದ್ಯಾಲಯದ ಸಹ ಕುಲಪತಿ ಅಭಯ್‌ ಛೆಬ್ಬಿ, ಅಂತರರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಲು ಶಾಲಾ ನಾಯಕರ ಸಮ್ಮೇಳನ ಆಯೋಜಿಸಲಾಗಿದೆ. ವಿವಿಧ ರಾಜ್ಯಗಳ 152 ಕಾಲೇಜುಗಳ ಮುಖ್ಯಸ್ಥರ ಸಮ್ಮೇಳನದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.

ಕೃತಕ ಬುದ್ಧಿಮತ್ತೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ವ್ಯಾಪಿಸಿದೆ. ಶಿಕ್ಷಣ, ಕಾನೂನು, ವೈದ್ಯಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೃತಕ ಬುದ್ಧಿಮತ್ತೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಸಮ್ಮೇಳನದಲ್ಲಿ ಶಿಕ್ಷಣದಲ್ಲಿ ತಂತ್ರಜ್ಞಾನದ ಮಹತ್ವ, ತಂತ್ರಜ್ಞಾನ ಪರಂಪರೆ, ನವೀನ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಣದಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಚರ್ಚೆಗಳು ನಡೆದವು.

ಅಲಯನ್ಸ್‌ ವಿಶ್ವವಿದ್ಯಾಲಯದ ರಿಜಿಸ್ಟರ್‌ ಜನರಲ್‌ ಸುರೇಖಾ ಶೆಟ್ಟಿ, ರಿಜಿಸ್ಟರ್‌ ಪ್ರಿಸ್ಲಿ ಶಾನ್‌, ರೇ ಟೈಟಸ್‌, ಅಲಯನ್ಸ್‌ ಕಾನೂನು ಕಾಲೇಜಿನ ಶ್ಯಾಮ್‌ ಕಿಶೋರ್‌, ಬಿ.ಕೆ.ಬಿರ್ಲಾ ಸೆಂಟರ್‌ ಆಫ್‌ ಎಜುಕೇಷನ್‌ನ ಡಾ.ರಾಜೀವ್‌ ಕುಮಾರ್‌ ಚೌಹಾಣ್‌, ಡಾನ್‌ ಬೋಸ್ಕೋ ಶಾಲೆಯ ರಾಜೀವ್‌ ಅಗರ್‌ವಾಲ್‌, ಕೆ.ಆರ್‌.ಮಂಗಲಂ ವರ್ಡ್‌ ಸ್ಕೂಲ್‌ನ ಡಾ.ಜ್ಯೋತಿ ಗುಪ್ತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.