
ಹಾರೋಹಳ್ಳಿ: ಸಂಕ್ರಾಂತಿ ಹಬ್ಬ ಆಚರಣೆಗೆಂದು ಆನೇಕಲ್ ಅರಣ್ಯ ಪ್ರದೇಶದಲ್ಲಿರುವ ದೇವಸ್ಥಾನಕ್ಕೆ ಗ್ರಾಮದವರೊಂದಿಗೆ ತೆರಳಿದ್ದ ಯುವಕನ ಶವ 13 ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ಥಳಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
ಹಾರೋಹಳ್ಳಿ ತಾಲ್ಲೂಕಿನ ಕಲ್ಲನಕುಪ್ಪೆ ಸಮೀಪದ ಗ್ರಾಮ ಭೀಮೇಗೌಡನದೊಡ್ಡಿ ನಿವಾಸಿ ಶಶಿಕುಮಾರ್ (28) ಮೃತ ಯುವಕ. ಆನೆ ತುಳಿತಕ್ಕೊಳಗಾಗಿ ಯುವಕ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಏನಿದು ಘಟನೆ: ಹಾರೋಹಳ್ಳಿಯ ಭೀಮೇಗೌಡನದೊಡ್ಡಿ ಗ್ರಾಮಸ್ಥರು ಸಂಕ್ರಾಂತಿ ಆಚರಣೆಗೆಂದು ಜ. 14ರ ಸಂಜೆ ಕಾಡಿನಲ್ಲಿರುವ ಶಂಕರೇಶ್ವರ ದೇವಸ್ಥಾನಕ್ಕೆ ತೆರಳಿದ್ದಾರೆ. ಮರುದಿನ ಬೆಳಿಗ್ಗೆ ಕೆಲಸದ ಕಾರಣ ಯುವಕನೊಬ್ಬನೇ ಮನೆಗೆ ಹೋಗುತ್ತೇನೆ ಎಂದು ಮರಳಿ ಬಂದಿದ್ದಾನೆ. ಈ ವೇಳೆ ದಾರಿ ತಪ್ಪಿದ ಯುವಕ ಕಾಡಿನಲ್ಲಿ ದಿಕ್ಕು ತೋಚದಾಗಿ ತಮಿಳುನಾಡಿನ ಥಳಿ ಅರಣ್ಯಪ್ರದೇಶದೊಳಗೆ ಹೋಗಿದ್ದು ಈ ವೇಳೆ ಯುವಕ ಆನೆ ತುಳಿತಕ್ಕೊಳಪಟ್ಟಿದ್ದಾನೆ ಎನ್ನಲಾಗಿದೆ. ಮರಣೋತ್ತರ ವರದಿ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.
ಯುವಕ ಕಾಣೆಯಾಗಿರುವ ಬಗ್ಗೆ ಹಾರೋಹಳ್ಳಿ ಪೊಲೀಸ್ ಠಾಣೆ, ಥಳಿ ಪೊಲೀಸ್ ಠಾಣೆಗೂ ಸಹ ಶಶಿಕುಮಾರ್ ಅವರ ಪೋಷಕರು ದೂರು ನೀಡಿದ್ದರು. ಇದೀಗ ಯುವಕನ ಶವ ಪತ್ತೆಯಾಗಿದೆ.
ಸಂಕ್ರಾಂತಿ ಆಚರಣೆಗೆ ಅರಣ್ಯದೊಳಗಿರುವ ಶಂಕರೇಶ್ವರ ದೇವಸ್ಥಾನಕ್ಕೆ ಗ್ರಾಮಸ್ಥರೆಲ್ಲರೂ ಕೂಡಿ ತೆರಳುವುದು ವಾಡಿಕೆ. ಆದರೆ ಗ್ರಾಮಸ್ಥರು ಹಬ್ಬ ಆಚರಣೆಗೆ ತೆರಳುತ್ತಾರೆ ಎಂಬ ವಿಷಯ ಅರಿತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅವಘಡಕ್ಕೆ ಕಾರಣ. ಇಲಾಖೆ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮಕೈಗೊಂಡು ಯುವಕನ ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ಭೀಮೇಗೌಡನದೊಡ್ಡಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಥಳಿ ಅರಣ್ಯ ಪ್ರದೇಶದಲ್ಲಿ ಶವ ದೊರೆತ ಕಾರಣದಿಂದ ತಮಿಳುನಾಡಿನ ಥಳಿಯ ಸರ್ಕಾರಿ ಆಸ್ಪತ್ರೆಯಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವವನ್ನು ಒಪ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.