
ಆನೇಕಲ್: ಎರಡು ಮರಿಯಾನೆ ಸೇರಿದಂತೆ ಹತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಸೋಮವಾರ ಬೆಳಗ್ಗೆ ತಾಲ್ಲೂಕಿನ ಮೆಣಸಿಗನಹಳ್ಳಿ, ಸಿಂಗಸಂಗ್ರ ಬಳಿ ಕಾಣಿಸಿಕೊಂಡಿದೆ.
ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಒಂದೇ ತಿಂಗಳಿನಲ್ಲಿ ನಾಲ್ಕನೇ ಬಾರಿಗೆ ಕಾಡಾನೆಗಳು ಹಿಂಡು ಕಾಣಿಸಿಕೊಂಡಿದೆ.
ಆಹಾರ ಅರಸಿಕೊಂಡು ಬಂದ ಕಾಡಾನೆಗಳು ಮೊದಲು ತೆಲಗರಹಳ್ಳಿ ಸಮೀಪ ಕಾಣಿಸಿಕೊಂಡವು. ನಂತರ ಮೆಣಸಿಗನಹಳ್ಳಿ, ಸಿಂಗಸಂಗ್ರ ಕೆರೆಯಲ್ಲಿ ಪ್ರತ್ಯಕ್ಷವಾದವು. ನಾಲ್ಕೈದು ತಾಸಿಗೂ ಹೆಚ್ಚು ನೀಲಗಿರಿ ತೋಪಿನಲ್ಲಿ ನಿಂತಲ್ಲೇ ನಿಂತಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಹೊಡೆದು ನೀಲಗಿರಿ ತೋಪಿನಿಂದ ಆನೆಗಳು ಆಚೆ ತರಲು ಪ್ರಯತ್ನಿಸಿದರೂ ಯಾವುದೇ ಉಪಯೋಗವಾಗಲಿಲ್ಲ.
ಅರಣ್ಯ ಇಲಾಖೆಯ ಸಿಬ್ಬಂದಿಗೆ ಕಾಡಾನೆ ಓಡಿಸುವ ಕಾರ್ಯಕ್ಕಿಂತ ಅವುಗಳನ್ನು ನೋಡಲು ಸೇರಿದ್ದ ಜನರನ್ನು ನಿಭಾಯಿಸುವುದೇ ಬಹುದೊಡ್ಡ ಸವಾಲಾಗಿತ್ತು. ಕಾಡಾನೆ ನೋಡಲು ತಂಡೋಪತಂಡವಾಗಿ ಬಂದ ಯುವಕರು ಚಿತ್ರವಿಚಿತ್ರವಾಗಿ ಕೇಕೆ ಹಾಕಿ ಆನೆಗಳನ್ನು ರೇಗಿಸಿದರು. ಇದರಿಂದ ರೊಚ್ಚಿಗೆದ್ದ ಕಾಡಾನೆಗಳು ಘೀಳಿಡುತ್ತ ಜನರತ್ತ ನುಗ್ಗಿ ಬಂದವು. ಸಿಟ್ಟಿನಲ್ಲಿ ಮರವೊಂದಕ್ಕೆ ಗುದ್ದಿ ಜನರಿಗೆ ಎಚ್ಚರಿಕೆ ನೀಡಿದವು. ಸಿಟ್ಟಿನಲ್ಲಿ ಕಾಡಾನೆಗಳು ತಮ್ಮತ್ತ ನುಗ್ಗಲು ಮುಂದಾಗುತ್ತಿದ್ದಂತೆಯೇ ಗುಂಪು ಓಟ ಕಿತ್ತಿತ್ತು.
ಸಂಜೆ 7ರವರೆಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾಡಾನೆ ಹಿಂಡನ್ನು ಕಾಡಿಗಟ್ಟಲು ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನೆ ಆಗಲಿಲ್ಲ. ಹೀಗಾಗಿ ಕಾರ್ಯಾಚರಣೆ ಮುಂದುವರೆದಿದೆ.
ಅರಣ್ಯ ಇಲಾಖೆಯ ಶಿವರಾಜು, ಮುನಿನಾಯಕ, ಲಿಂಗಯ್ಯ, ಚಿನ್ನಸ್ವಾಮಿ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.