ADVERTISEMENT

ಆನೆ ಸುವರ್ಣಳಿಗೆ 10ನೇ ಹೆರಿಗೆ ಸಿಸೇರಿಯನ್‌: ಜನಿಸಿದ ಮರಿ ಗರ್ಭದಲ್ಲಿಯೇ ಸಾವು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2023, 6:43 IST
Last Updated 21 ಏಪ್ರಿಲ್ 2023, 6:43 IST
ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ಸುವರ್ಣಳನ್ನು ಪರೀಕ್ಷಿಸುತ್ತಿರುವ ಉದ್ಯಾನದ ವೈದ್ಯಕೀಯ ತಂಡ
ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ಸುವರ್ಣಳನ್ನು ಪರೀಕ್ಷಿಸುತ್ತಿರುವ ಉದ್ಯಾನದ ವೈದ್ಯಕೀಯ ತಂಡ   

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಸುವರ್ಣ ಹೆಸರಿನ ಹೆಣ್ಣಾನೆಗೆ ಗುರುವಾರ ಶಸ್ತ್ರ ಚಿಕಿತ್ಸೆ ಮೂಲಕ ಪ್ರಸವ ಮಾಡಿಸಲಾಗಿದ್ದು, ತಾಯಿಯ ಗರ್ಭದಲ್ಲೇ ಮರಿ ಮೃತಪಟ್ಟಿದೆ.

ಸುವರ್ಣಗೆ ಜನಿಸಿದ ಹತ್ತನೇ ಮರಿ ಇದಾಗಿತ್ತು. ಮರಿಯು ತಾಯಿಯ ಗರ್ಭದಲ್ಲೇ ಸತ್ತು ಹೋಗಿತ್ತು. ಇದರಿಂದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಮರಿಯನ್ನು ಹೊರತೆಗೆದರು.

49 ವರ್ಷದ ಆನೆ ಸುವರ್ಣ, ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಒಂಬತ್ತು ಮರಿಗಳಿಗೆ ಜನ್ಮ ನೀಡಿದ್ದು, ಅವು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿಯೇ ಬೆಳೆದಿವೆ. ಸಾಮಾನ್ಯವಾಗಿ 23-24 ತಿಂಗಳಿಗೆ ಆನೆ ಮರಿ ಹಾಕುತ್ತದೆ. ಪ್ರಸ್ತುತ ಸುವರ್ಣ ಗರ್ಭ ಧರಿಸಿ ಅಂದಾಜು 23 ತಿಂಗಳಿಗೂ ಹೆಚ್ಚು ಅವಧಿಯಾಗಿತ್ತು. ಕಳೆದ ಎರಡು ದಿನಗಳಿಂದ ಆನೆ ಪ್ರಸವ ವೇದನೆ ಅನುಭವಿಸುತ್ತಿತ್ತು. ಮರಿಯ ಕಾಲುಗಳು ಹಿಮ್ಮುಖವಾಗಿದ್ದರಿಂದ ಹೆರಿಗೆಗೆ ತೊಂದರೆಯಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ADVERTISEMENT

ಈ ಹಿನ್ನೆಲೆಯಲ್ಲಿ ತಜ್ಞ ವೈದ್ಯರಾದ ಡಾ.ಕೃಷ್ಣಮೂರ್ತಿ, ಡಾ.ಹೊನ್ನಪ್ಪ, ಡಾ.ವಸಂತ್‌ಶೆಟ್ಟಿ, ಡಾ.ಉಮಾಶಂಕರ್‌, ಡಾ.ವಿಜಯಕುಮಾರ್‌, ಡಾ.ಮಂಜುನಾಥ್‌ ವೈದ್ಯರ ತಂಡವು ಚರ್ಚೆ ನಡೆಸಿ, ಅರವಳಿಕೆಗೆ ಒಳಪಡಿಸಿ ಶಸ್ತ್ರಚಿಕಿತ್ಸೆ ಮೂಲಕ ಮರಿಯನ್ನು ಹೊರ ತೆಗೆಯಲಾಗಿದೆ. ತಾಯಿ ಸುವರ್ಣಳನ್ನು ವೈದ್ಯರು ಆರೈಕೆ ಮಾಡುತ್ತಿದ್ದಾರೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸುನೀಲ್‌ ಪನ್ವಾರ್‌ ತಿಳಿಸಿದ್ದಾರೆ.

ಉದ್ಯಾನದ ವೈದ್ಯ ಡಾ.ಉಮಾಶಂಕರ್‌ ಮಾತನಾಡಿ, ಸುವರ್ಣ ಆನೆಅಪರೂಪದ ಆನೆಯಾಗಿದೆ. ಸಾಮಾನ್ಯವಾಗಿ ಆನೆಗಳು 3-4 ಮರಿಗಳನ್ನು ಹಾಕುತ್ತವೆ. ಆದರೆ ಸುವರ್ಣ 10 ಮರಿಗಳಿಗೆ ಜನ್ಮ ನೀಡಿರುವುದು ದಾಖಲೆಯಾಗಿದೆ ಎಂದರು.

ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ಸುವರ್ಣ, ವನಿತಾ, ಶಿವ, ಗೋಕುಲ, ವನಶ್ರೀ, ಗಜೇಂದ್ರ, ಶ್ರೀರಾಮ, ಭವಾನಿ, ಸುರೇಶ, ಸುಧಾ ಎಂಬ ಆನೆಗಳಿಗೆ ಜನ್ಮ ನೀಡಿದ್ದಾಳೆ. ಒಂದು ಆನೆ ಮೈಸೂರು ಮೃಗಾಲಯದಲ್ಲಿದೆ. ವನಿತಾ ಮತ್ತು ಗೋಕುಲ ಮೃತಪಟ್ಟಿವೆ. ಉಳಿದ ಆರು ಮರಿಗಳು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿವೆ.

ಮೃತಪಟ್ಟ ಆನೆಮರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.