ದೊಡ್ಡಬಳ್ಳಾಪುರ ತಾಲ್ಲೂಕಿನ ಮಚ್ಚೇನಹಳ್ಳಿ ಮಾರಮ್ಮ ದೇವಾಲಯ ಆವರಣದಲ್ಲಿ ನಡೆದ ಸಭೆಯಲ್ಲಿ ರೈತರು ‘ನಮ್ಮ ಊರು ನಮಗಿರಲಿ’ ಘೋಷಣೆ ಮೊಳಗಿಸಿದರು
ಸಾಸಲು(ದೊಡ್ಡಬಳ್ಳಾಪುರ): ತಾಲ್ಲೂಕಿನ ಲಕ್ಕೇನಹಳ್ಳಿಯಲ್ಲಿ ಎತ್ತಿನಹೊಳೆ ಉದ್ದೇಶಿತ ಜಲಾಶಯದಿಂದ ಹಳ್ಳಿಗಳು ಮುಳುಗಡೆಯಾಗಲಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ. ‘ನಮ್ಮ ಊರು ನಮಗಿರಲಿ’ ಎಂದು ಮುಳುಗಡೆಗೆ ಒಳಗಾಗುತ್ತಿರುವ ಗ್ರಾಮದ ರೈತರು ಘೋಷಣೆ ಕೂಗಿದರು.
ಚಿಕ್ಕಬಳ್ಳಾಪುರ–ಕೋಲಾರಕ್ಕೆ ಎತ್ತಿನಹೊಳೆ ನೀರು ಒದಗಿಸುವ ಜಲಾಶಯ ನಿರ್ಮಾಣದಿಂದ ಮುಳುಗಡೆ ಆಗಲಿರುವ ಗ್ರಾಮಗಳ ರೈತರು ಮಚ್ಚೇನಹಳ್ಳಿ ಮಾರಮ್ಮ ದೇವಾಲಯ ಆವರಣದಲ್ಲಿ ನಡೆದ ಸಭೆಯಲ್ಲಿ ನಮ್ಮ ಊರು–ಭೂಮಿಯನ್ನು ಬಿಟ್ಟು ಕೊಡುವುದಿಲ್ಲ ಎಂದು ಎಲ್ಲರೂ ಒಮ್ಮತ ತೀರ್ಮಾನ ಕೈಗೊಂಡರು.
‘ಪುನರ್ವಸತಿ ಹೆಸರಿನಲ್ಲಿ ಸರ್ಕಾರ ನೀಡುವ ಅಂಗೈ ಅಗಲದ ಭೂಮಿ, ಮನೆ ಬೇಡ. ನಮ್ಮ ಹಳ್ಳಿಗಳಲ್ಲೇ ನಾವು ಜೀವನ ನಡೆಸುತ್ತೇವೆ. ನಾವು ಹುಟ್ಟಿ ಬೆಳೆದ ಜಾಗವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ಯೋಜನೆಗಳ ಹೆಸರಲ್ಲಿ ಭೂಮಿ ಕಸಿದುಕೊಂಡು ನಮ್ಮನ್ನು ಅನಾಥರನ್ನಾಗಿ ಮಾಡಬೇಡಿ’ ಒಕ್ಕೊರಲಿನಿಂದ ಜನರು ಹೇಳಿದರು.
ಲಕ್ಕೇನಹಳ್ಳಿಯಲ್ಲಿ ಜಲಾಶಯ ನಿರ್ಮಾಣ ಮಾಡಿದರೆ ಸುಮಾರು 2.45 ಟಿಎಂಸಿ ನೀರು ಶೇಖರಣೆಯಾಗುತ್ತದೆ. ಇದರಿಂದ ಶ್ರೀರಾಮನಹಳ್ಳಿ, ದಾಸರಪಾಳ್ಯ, ಶಿಂಗೇನಗಳ್ಳಿ, ಗಾಣದಾಳು, ಹನುಮಂತಯ್ಯನಪಾಳ್ಯ, ನರಸಾಪುರ, ಲಕ್ಕೇನಹಳ್ಳಿ ಗ್ರಾಮಗಳು ಸಂಪೂರ್ಣ ಮುಳುಗಡೆಯಾಗುತ್ತವೆ. 2,673 ಎಕರೆ ಫಲವತ್ತಾದ ಜಮೀನು ನಾಶವಾಗುತ್ತದೆ ಎಂದರು.
ಈಗಾಗಲೇ ರೈತರ ಜಮೀನುಗಳಲ್ಲಿ ಎತ್ತಿನಹೊಳೆ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ. ಈ ಜಮೀನಿಗೆ ಸರ್ಕಾರದಿಂದ ಒಂದು ಗುಂಟೆಗೆ ₹1.42 ಲಕ್ಷ ಪರಿಹಾರ ನೀಡಬೇಕೆಂದು ಆದೇಶವಿದೆ. ಆದರೆ ರೈತರಿಗೆ ಕೇವಲ ₹83 ಸಾವಿರ ಮಾತ್ರ ನೀಡಿ ಉಳಿದ ಹಣವನ್ನು ಮಧ್ಯವರ್ತಿಗಳು ಲಪಟಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಎತ್ತಿನಹೊಳೆ ಯೋಜನೆಗೆ ನಮ್ಮ ವಿರೋಧ ಇಲ್ಲ. ಆದರೆ ಲಕ್ಕೇನಹಳ್ಳಿಯಲ್ಲಿ ಡ್ಯಾಂ ನಿರ್ಮಾಣ ಮಾಡುವುದಕ್ಕೆ ನಮ್ಮ ವಿರೋಧ ಇದೆ. ನಮ್ಮ ಪ್ರಾಣವಾದರೂ ಬಿಡುತ್ತೇವೆ ಇಲ್ಲಿ ಡ್ಯಾಂ ನಿರ್ಮಾಣ ಮಾಡುವುದಕ್ಕೆ ಅವಕಾಶ ನೀಡುದಿಲ್ಲ.ಜಲಾಶಯ ನಿರ್ಮಾಣದಿಂದ ಮುಳಗಡೆಯಾಗುವ ಗ್ರಾಮಗಳ ಗ್ರಾಮಸ್ಥರು
ದಾಸರಪಾಳ್ಯ ರಾಮಣ್ಣ, ವಕೀಲರಾದ ನರಸಿಂಹಗೌಡ, ಸಾಸಲು ಗ್ರಾಮ ಪಂಚಾಯಿತಿ ಅಧ್ಯಕ್ಷ ನಂದಿನಿಪ್ರಸನ್ನ,ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದರಾಜ್,ಮುಖಂಡರಾದ ಲಕ್ಕಣ್ಣ ಸೇರಿದಂತೆ ಉದ್ದೇಶಿತ ಎತ್ತಿನಹೊಳೆ ಜಲಾಶಯ ನಿರ್ಮಾಣದಿಂದ ಮುಳುಗಡೆಗೆ ಒಳಗಾಗುತ್ತಿರುವ ಗ್ರಾಮಗಳ ರೈತರು ಇದ್ದರು.
₹30 ಕೋಟಿಗೂ ಅಧಿಕ ವಹಿವಾಟು
ಸಾಸಲು ಹೋಬಳಿಯಲ್ಲಿ 1200 ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. 1400 ಎಕರೆ ಪ್ರದೇಶದಲ್ಲಿ ತರಕಾರಿ ಜೋಳ ರಾಗಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲಾಗುತ್ತದೆ. ವಾರ್ಷಿಕ ₹20 ಕೋಟಿಗೂ ಹೆಚ್ಚು ಅಡಿಕೆ ವಹಿವಾಟು ನಡೆಯುತ್ತಿದೆ. ₹10 ಕೋಟಿಗೂ ಹೆಚ್ಚು ರಾಗಿ ಜೋಳ ತರಕಾರಿ ಸೇರಿದಂತೆ ಇತರೆ ಬೆಳೆಗಳ ವಹಿವಾಟು ನಡೆಯುತ್ತದೆ ಎಂದು ರೈತರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.