
ಆನೇಕಲ್: ತಾಲ್ಲೂಕಿನ ಹಾರಗದ್ದೆ ಗ್ರಾಮ ಪಂಚಾಯಿತಿಯವರು ಕಸ ಸುರಿಯುವ ಜಾಗದಲ್ಲಿ ಕಾರ್ಖಾನೆಯವರು ಕಣ್ತಪ್ಪಸಿ ತ್ಯಾಜ್ಯ ಸುರಿಯುತ್ತಿರುವುದರಿಂದ ಜಾಗದ ಸಾಮರ್ಥ್ಯ ಮೀತಿ ಮೀರಿ ಹೋಗಿದೆ. ಕಾರ್ಖಾನೆ ತ್ಯಾಜ್ಯ ಸಾಮಾನ್ಯ ಕಸದೊಂದಿಗೆ ಕೊಳೆತು ಭೂ, ಅಂರ್ತಜಲ ಮಾಲಿನ್ಯವಾಗುತ್ತಿದೆ. ಇಲ್ಲಿಂದ ಹೊರ ಹೊಮ್ಮುವ ದುರ್ನಾತದಿಂದ ಸತ್ತಮುತ್ತಲಿನ ಗ್ರಾಮಸ್ಥರ ಬದುಕು ದುಸ್ತರವಾಗಿದೆ.
ಕಸ ವಿಲೇವಾರಿ ಘಟಕಕ್ಕೆ ಪಂಚಾಯಿತಿಯಿಂದ ನಿರ್ದಿಷ್ಟ ಜಾಗ ಗುರುತಿಸಿಲ್ಲ. ಹೀಗಾಗಿ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಗ್ರಾಮಗಳ ತ್ಯಾಜ್ಯವನ್ನು ಮಾದಪಟ್ಟಣ-ವಡ್ಡರಪಾಳ್ಯದ ರಸ್ತೆ ಸಮೀಪದ ಒಂದು ಎಕರೆ ಪ್ರದೇಶದಲ್ಲಿ ನಾಲ್ಕು ವರ್ಷಗಳಿಂದ ವಿಲೇವಾರಿ ಮಾಡಲಾಗುತ್ತಿದೆ. ಆದರೆ ಇತ್ತೀಚಿನ ತಿಂಗಳಲ್ಲಿ ಸುತ್ತಮುತ್ತಲಿನ ಕಾರ್ಖಾನೆಗಳು ನಿಯಮ ಬಾಹಿರವಾಗಿ ತ್ಯಾಜ್ಯವನ್ನು ಇಲ್ಲಿ ತಂದು ಸುರಿಯುತ್ತಿವೆ.
ಪಂಚಾಯಿತಿ ಘಟಕದಲ್ಲಿ ಮಣ್ಣು ತೆಗೆದು ಕಸ ಸುರಿದು ಮತ್ತೆ ಮಣ್ಣು ಮುಚ್ಚಲಾಗುತ್ತಿದೆ. ಆದರೆ ಕಾರ್ಖಾನೆಯವರು ನಿತ್ಯ ಕಸ ಸುರಿದು ಹೋಗುತ್ತಿರುವುದರಿಂದ ಕಸದ ರಾಶಿ ಬೆಟ್ಟದಂತೆ ಬೆಳೆಯುತ್ತದೆ. ಜಾಗದ ಕೊರತೆ ನಿವಾರಣೆಗೆ ಕಸದ ರಾಶಿಗಳಿಗೆ ನಿಯಮ ಬಾಹಿರವಾಗಿ ಬೆಂಕಿ ಹಚ್ಚಲಾಗುತ್ತಿದ್ದು, ಇಡೀ ವಾತಾವರಣವೇ ಮಲಿನಗೊಂಡಿದೆ. ಜತೆಗೆ ಅಸ್ತಮಾ, ಶ್ವಾಸಕೋಶ ಸಮಸ್ಯೆ ಇರುವವರು, ಹಿರಿಯರು ಮತ್ತು ಮಕ್ಕಳಿಗೆ ಭಾರಿ ತೊಂದರೆಯಾಗುತ್ತಿದೆ.
ರಾತ್ರಿ ಸಮಯದಲ್ಲಿ ಕಾರ್ಖಾನೆಯವರು ತ್ಯಾಜ್ಯ ಸುರಿಯಲಾಗುತ್ತಿದೆ. ಈ ವಿಷಯ ಪಂಚಾಯಿತಿಗೆ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಘಟಕದ 100–200 ಮೀಟರ್ ಅಂತರದಲ್ಲೇ ಮಾದಪಟ್ಟಣ-ವಡ್ಡರಪಾಳ್ಯ ನಿವಾಸಿಗಳ ಗೋಳು ಹೇಳ ತೀರಾದಾಗಿದೆ. ಸಮರ್ಥ್ಯ ಮೀರಿದರೂ ಅಲ್ಲೇ ಕಸ ವಿಲೇವಾರಿ ಮಾಡುತ್ತಿರುವುದರಿಂದ ಇಡೀ ವಾತಾವರಣವೇ ಕಲುಷಿತವಾಗಿ ಸ್ಥಳೀಯ ಗ್ರಾಮಸ್ಥರ ನೆಮ್ಮದಿ ಕಸಿದಿದೆ. ಮಾದಪಟ್ಟಣ-ವಡ್ಡರಪಾಳ್ಯದ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಓಡಾಡಬೇಕು.
ಕಸ ವಿಲೇವಾರಿ ಘಟಕದ ಅತಿಥಿಗಳಾದ ನಾಯಿ, ಕತ್ತೆಗಳ ಕಾಟದಿಂದ ರಸ್ತೆಯಲ್ಲಿ ಸುಗಮ ಸಂಚಾರಕ್ಕೂ ಅಡ್ಡಿಯಾಗಿದೆ.
ಕಸದ ರಾಶಿಗೆ ಬೆಂಕಿ ಇಡುವುದರಿಂದ ಕೆಟ್ಟ ವಾಸನೆ ಬರುತ್ತದೆ. ಇಲ್ಲಿ ವಾಸ ಮಾಡುವುದೇ ಕಷ್ಟವಾಗಿದೆ. ಅಪಾರ್ಟ್‌ಮೆಂಟ್ ಬಡಾವಣೆ ನಿವಾಸಿ ಗೋಳು ಹೇಳ ತೀರದಾಗಿದೆ.
-ಚಂದ್ರಪ್ಪ ಸ್ಥಳೀಯ
ಕಸ ಸುರಿಯುತ್ತಿರುವ ಪ್ರದೇಶದ ಸುತ್ತಲೂ ಇರುವ ನೂರಾರು ಮನೆಗಳವರು ನೆಮ್ಮದಿಯಾಗಿ ಊಟ ನಿದ್ರೆ ಮಾಡಲು ಆಗುತ್ತಿಲ್ಲ.
-ಉಮೇಶ್ ಸ್ಥಳೀಯ
ಹಾರಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಾಗ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಮುಂದಿನ ಒಂದು ತಿಂಗಳಲ್ಲಿ ಘಟಕ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಲಾಗುವುದು.
- ಮುನಿರಂಗಪ್ಪ ಪಿಡಿಓ ಹಾರಗದ್ದೆ ಗ್ರಾ.ಪಂ.
ಎದುರಾಗಿದೆ ಆಪತ್ತು
ಸಾಮಾನ್ಯ ಕಸ ಮತ್ತು ಕಾರ್ಖಾನೆ ತ್ಯಾಜ್ಯ ಒಟ್ಟಿಗೆ ಕೊಳೆತೆ ದ್ರವ ಬಿಡುಗಡೆಯಾಗುತ್ತಿದ್ದು ಕೊಳಚೆ ರಾಜಕಾಲುವೆಗಳಿಗೆ ಸೇರುತ್ತಿವೆ. ಇದರಿಂದ ಹಾರಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳು ಮಾಲಿನ್ಯವಾಗುತ್ತಿದೆ. ಕಸ ಸುರಿಯುವ ಜಾಗದಲ್ಲಿ ಪ್ರತಿ ನಿತ್ಯ ರಾಸುಗಳು ಕೊಕ್ಕರೆಗಳು ಸೇರಿದಂತೆ ವಿವಿಧ ಪ್ರಾಣಿ ಪಕ್ಷಿಗಳಿವೆ. ಮನೆಗಳಿಂದ ಸಂಗ್ರಹಿಸಿ ತಂದು ಸುರಿದಿರುವ ಕಸ ತಿನ್ನುತ್ತವೆ. ಆದರೆ ಈ ಕಸದ ಜೊತೆಗೆ ಕಾರ್ಖಾನೆ ತ್ಯಾಜ್ಯವನ್ನು ಪ್ರಾಣಿಗಳು ತಿನ್ನುವುದರಿಂದ ಅವುಗಳ ಪ್ರಾಣಕ್ಕೆ ಕುತ್ತು ಬಂದಿದೆ. ಒಂದೆಡೆ ಸಮರ್ಥ್ಯ ಮೀರಿ ಕಸ ವಿಲೇವಾರಿ ಮತ್ತೊಂದು ಕಾರ್ಖಾನೆ ತ್ಯಾಜ್ಯ ಸುರಿದು ಬೆಂಕಿ ಹಚ್ಚುತ್ತಿರುವುದು. ಇದರಿಂದ ಇಡೀ ಪ್ರದೇಶ ಕಲುಷಿತವಾಗಿದೆ. ಭೂ ವಾಯು ಮತ್ತು ಅಂತರ್ಜಲ ಮಾಲಿನ್ಯ ಹೆಚ್ಚಾಗಿ ಆಪತ್ತು ಎದುರಾಗಿದೆ. ಪರಿಸರ ಮಾಲಿನ್ಯ ತಡೆಗಟ್ಟಲು ಹಾಗೂ ಇಲ್ಲಿನ ನಿವಾಸಿಗಳು ನೆಮ್ಮದಿ ಜೀವನ ನಡೆಸಬೇಕಾದರೆ ಇಲ್ಲಿ ತ್ಯಾಜ್ಯ ಸುರಿಯುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು. ಕಸ ಸುರಿಯುವ ಕಾರ್ಖಾನೆಯವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದಷ್ಟು ಬೇಗ ಕಸ ವಿಲೇವಾರಿ ಘಟಕ ಆರಂಭಿಸಬೇಬೇಕೆಂಬುದು ಸ್ಥಳೀಯರು ಒತ್ತಾಯ. *** ನಿತ್ಯ ನರಕಯಾತನೆ ರಾತ್ರಿ ಸಮಯದಲ್ಲಿ ಟ್ರಾಕ್ಟರ್‌ಗಳಲ್ಲಿ ಬಂದು ಕಸ ಸುರಿದು ಬೆಂಕಿ ಹಾಕಲಾಗುತ್ತಿದೆ. ಇದರಿಂದ ಬರುವ ಹೊಗೆಯಿಂದಾಗಿ ಪ್ರತಿನಿತ್ಯ ನರಕ ಯಾತನೆ ಅನುಭವಿಸಬೇಕಾಗಿದೆ. ಕಸದ ವಾಸನೆ ಮತ್ತು ಹೊಗೆಯಿಂದಾಗಿ ಅಲರ್ಜಿ ಅಸ್ತಮಾ ಹೆಚ್ಚಾಗುತ್ತಿದೆ. ಜಲಮೂಲಗಳು ಸಹ ಮಲಿನವಾಗುತ್ತಿದೆ. ಚಂದ್ರಶೇಖರ್ ಸ್ಥಳೀಯ ದುರ್ವಾಸನೆಯೊಂದಿಗೆ ಬದುಕು ಕಸ ಸುರಿಯುವ ಪ್ರದೇಶದ 150ಮೀಟರ್ ವ್ಯಾಪ್ತಿಯಲ್ಲಿಯೇ ಅಪಾರ್ಟ್‌ಮೆಂಟ್‌ಗಳಿವೆ ವಸತಿ ಪ್ರದೇಶವಿದೆ. ಮನೆಯಲ್ಲಿ ಏರ್‌ಪ್ರೆಶ್‌ನರ್ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಇಲ್ಲವೇ ದುರ್ನಾತದೊಂದಿಗೆ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.ರವಿಕುಮಾರ್ ಸ್ಥಳೀಯ ನಿವಾಸಿ
ನಿಗಾ ವಹಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಕೆ
ಹಾರಗದ್ದೆ ಗ್ರಾಮ ಪಂಚಾಯಿತಿಗೆ ಘನ ತ್ಯಾಜ್ಯ ವಿಲೇವಾರಿ ಘಟಕ ಇಲ್ಲದಿದ್ದರೂ ಹಸಿ ಮತ್ತು ಒಣಕಸ ವಿಂಗಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಪಂಚಾಯಿತಿ ಕಸದೊಂದಿಗೆ ಕಾರ್ಖಾನೆಗಳ ಕಸ ಸೇರುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಹಾಗಾಗಿ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಹಾರಗದ್ದೆ ಪಂಚಾಯಿತಿ ಪಿಡಿಓ ಮುನಿರಂಗಪ್ಪ ತಿಳಿಸಿದ್ದಾರೆ. ಖಾಸಗಿ ಕಂಪನಿ ಹಾಗೂ ಕಾರ್ಖಾನೆಗಳಿಂದ ಕಸ ವಿಲೇವಾರಿಗೆ ಗುತ್ತಿಗೆ ಪಡೆದಿರುವವರು ಕಸ ವಿಲೇವಾರಿಗೆ ಪಂಚಾಯಿತಿ ಗುರುತಿಸಿರುವ ಜಾಗದಲ್ಲಿ ಕಸ ಸುರಿಯುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಲಾವುದು. ಇದಕ್ಕಾಗಿ ನಿಗಾವಹಿಸಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.