ADVERTISEMENT

138 ಎಕರೆಗೆ ನಕಲಿ ದಾಖಲೆ ಸೃಷ್ಟಿ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 1:47 IST
Last Updated 13 ನವೆಂಬರ್ 2020, 1:47 IST
ಪೊಲೀಸರು ವಶಕ್ಕೆ ಪಡೆದಿರುವ ಕಂಪ್ಯೂಟರ್‌ ಸೇರಿದಂತೆ ವಿವಿಧ ದಾಖಲೆಗಳನ್ನು ವೀಕ್ಷಣೆ ಮಾಡಿದ ಕೇಂದ್ರ ವಲಯ ಐಜಿಪಿ ಸಿಮಂತ್‌ ಕುಮಾರ್‌ ಸಿಂಗ್‌
ಪೊಲೀಸರು ವಶಕ್ಕೆ ಪಡೆದಿರುವ ಕಂಪ್ಯೂಟರ್‌ ಸೇರಿದಂತೆ ವಿವಿಧ ದಾಖಲೆಗಳನ್ನು ವೀಕ್ಷಣೆ ಮಾಡಿದ ಕೇಂದ್ರ ವಲಯ ಐಜಿಪಿ ಸಿಮಂತ್‌ ಕುಮಾರ್‌ ಸಿಂಗ್‌   

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 138 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೊಡ್ಡಬಳ್ಳಾಪುರ, ಕೆಂಗೇರಿ, ಚಿಕ್ಕಜಾಲ ಸೇರಿದಂತೆ ಹಲವು ಕಡೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿರುವ ಕೃತ್ಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಕೇಂದ್ರ ವಲಯ ಐಜಿಪಿ ಸಿಮಂತ್‌ ಕುಮಾರ್‌ ಸಿಂಗ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಕಲಿ ದಾಖಲೆ ಸೃಷ್ಟಿಯಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳಾದ ಪ್ರಸನ್ನಕುಮಾರ್‌, ಬಸವರಾಜು, ಉಮೇಶ್‌, ಜಯಲಕ್ಷ್ಮಮ್ಮ ಅವರನ್ನು ಬಂಧಿಸಲಾಗಿದೆ. ಇಲ್ಲಿಯವರೆಗೆ ಆರೋಪಿಗಳ ವಿರುದ್ಧ 6 ಪ್ರಕರಣ ದಾಖಲಾಗಿವೆ. ಇವುಗಳ ಪೈಕಿ ಒಂದು ದೂರನ್ನು ದೊಡ್ಡಬಳ್ಳಾಪುರದ ಉಪ ನೋಂದಣಾಧಿಕಾರಿ ನೀಡಿದ್ದಾರೆ’ ಎಂದರು.

ADVERTISEMENT

ಬಂಧಿತರಿಂದ ಕಂಪ್ಯೂಟರ್, ಸ್ಕ್ಯಾನರ್‌‌ ಸೇರಿದಂತೆ ವಿವಿಧ ಮಹತ್ವದ ದಾಖಲೆಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಸರ್ಕಾರಕ್ಕೆ ವರದಿ: ‘ಸುಮಾರು ₹100 ಕೋಟಿ ಬೆಲೆ ಬಾಳುವ ಭೂಮಿಗೆ ದಾಖಲೆಗಳನ್ನು ಸೃಷ್ಟಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಇದೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಲಾಗಿದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗುವುದು’ ಎಂದು ಸಿಮಂತ್ ಕುಮಾರ್‌ ಸಿಂಗ್‌ ತಿಳಿಸಿದರು.

ವಂಚನೆಗೆ ಒಳಗಾಗಿರುವ ಭೂಮಿಯ ಮಾಲೀಕರು ಪೊಲೀಸರಿಗೆ ದೂರು ನೀಡಬಹುದು ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಗಣೇಶ್‌, ಡಿವೈಎಸ್‌ಪಿ ಟಿ.ರಂಗಪ್ಪ, ಸರ್ಕಲ್‌ ಇನ್‌ಸ್ಪೆಕ್ಟರ್‌ ಎಂ.ಬಿ.ನವೀನ್‌ಕುಮಾರ್‌, ಸಬ್‌ಇನ್‌ಸ್ಪೆಕ್ಟರ್‌ ಗಜೇಂದ್ರ, ಸೋಮಶೇಖರ್‌ ಇದ್ದರು.

ಕಚೇರಿ ಸಿಬ್ಬಂದಿಯೂ ಶಾಮೀಲು!

ನಕಲಿ ಭೂದಾಖಲೆ ಸೃಷ್ಟಿ ಪ್ರಕರಣದಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಯ ಸಿಬ್ಬಂದಿ ಸೇರಿದಂತೆ ಹಲವಾರು ಜನ ಭಾಗಿಯಾಗಿರುವ ಶಂಕೆ ಇದೆ.

ಇಲ್ಲಿಯವರೆಗಿನ ತನಿಖೆಯಲ್ಲಿ ದಾಖಲೆಗಳನ್ನು ಮಾತ್ರ ವಶಕ್ಕೆ ಪಡೆದು ಪರಿಶೀಲಿಸಲಾಗಿದೆ. ನಕಲಿ ದಾಖಲೆಗಳು ಯಾರಿಗೆ ಸೇರಿವೆ ಎನ್ನುವುದರ ಆಧಾರದ ಮೇಲೆ ಮತ್ತಷ್ಟು ಜನರ ವಿರುದ್ದ ದೂರು ದಾಖಲಿಸಿ, ಬಂಧಿಸಲಾಗುವುದು ಎಂದು ಸಿಂಗ್‌ ಹೇಳಿದ್ದಾರೆ.

ವಿಶೇಷ ತಂಡ ರಚನೆ

ರಾಜ್ಯದಲ್ಲಿಯೇ ಇದೊಂದು ವಿಶೇಷ ಪ್ರಕರಣ. ಹೀಗಾಗಿ ತನಿಖೆಗೆ ವಿಶೇಷ ತಂಡ ರಚಿಸಿಸಲಾಗುವುದು ಎಂದು ಸಿಮಂತ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ಈವರೆಗಿನ ತನಿಖೆಯ ಪ್ರತಿ ಹಂತವನ್ನು ಚಿತ್ರೀಕರಣ ಮಾಡಲಾಗಿದೆ. ಅಲ್ಲದೆ ಸರ್ಕಾರಿ ಅಧಿಕಾರಿಗಳ ಸಮಕ್ಷಮದಲ್ಲೇ ಪಂಚನಾಮೆ (ಮಹಜರ್‌) ನಡೆಸಿ ಸಹಿ ಪಡೆಯಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.