ಜಿಲ್ಲಾಧಿಕಾರಿ ಎ.ಬಿ.ಬಸವರಾಜು
ದೊಡ್ಡಬಳ್ಳಾಪುರ: ನಗರದ ಅಂಚಿನಲ್ಲಿರುವ ಅರೆಹಳ್ಳಿಗುಡ್ಡದಹಳ್ಳಿ ಗ್ರಾಮದಲ್ಲಿ ನಕಲಿ ದಾಖಲೆ ಸೃಷಿಸಿ ಕಬಳಿಸಿದ್ದ ಆರು ಎಕರೆ ಗೋಮಾಳ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿದೆ.
ವಶಕ್ಕೆ ಪಡೆದಿರುವ ಜಮೀನಿನ ಈಗಿನ ಮಾರುಕಟ್ಟೆ ಮೌಲ್ಯ ಸುಮಾರು ₹40 ಕೋಟಿ ಎಂದು ಅಂದಾಜಿಸಲಾಗಿದೆ.
ಗ್ರಾಮದ ಕೆ.ಬಿ.ಮುದ್ದಪ್ಪ, ಪುರುಷೋತ್ತಮಗೌಡ, ಕೆ.ಬಿ.ಹನುಮಂತರಾಯಪ್ಪ, ಎಂ.ಮುನಿರಾಜು ಎಂಬುವರು ನಕಲಿ ದಾಖಲೆ ಸೃಷ್ಟಿಸಿ ಈ ಜಮೀನನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದರು.
ಅವರ ಹಪಣಿ ವಜಾಗೊಳಿಸುವ ಮೂಲಕ ಸರ್ಕಾರದ ಜಮೀನನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
ಈ ಕುರಿತು ಅವರು ಸೆಪ್ಟೆಂಬರ್ 2 ರಂದು ಆದೇಶ ಹೊರಡಿಸಿದ್ದಾರೆ.
ಸರ್ಕಾರದ ವಶಕ್ಕೆ ಪಡೆದಿರುವ 6 ಎಕರೆ ಜಮೀನು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಅಂಚಿನಲ್ಲೆ ಇದೆ. ಅಲ್ಲದೆ ರಾಷ್ಟ್ರ ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ ತರಬೇತಿ ಕೇಂದ್ರದ ಪಕ್ಕದಲ್ಲೇ ಇದೆ.
ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿರುವಂತೆ, ಗೋಮಾಳ ಜಮೀನು ಕಬಳಿಸುವ ಷಡ್ಯಂತ್ರದಲ್ಲಿ ತಾಲ್ಲೂಕು ಕಚೇರಿಯ ಕಂದಾಯ ಅಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಚೇರಿ ದಾಖಲೆಗಳನ್ನು ಪರಿಶೀಲಿಸದೆ ಆದೇಶ ಮಾಡುವ ಮೂಲಕ ಕೋಟ್ಯoತರ ರೂಪಾಯಿ ಮೌಲ್ಯದ ಜಮೀನು ಕಬಳಿಸಲು ಸಹಕರಿಸಿದ್ದಾರೆ ಎಂದು ವಿವರಿಸಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿದ ಈ ಜಮೀನಿನಲ್ಲಿ 1998 ರಿಂದಲೂ ರಾಗಿ ಬೆಳೆ ಬೆಳೆಯುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ಗೂಗಲ್ ನಕ್ಷೆ ಪರಿಶೀಲನೆಯಲ್ಲಿ 2024ರವರೆಗೂ ಈ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯದೆ ಇರುವುದು ಕಂಡು ಬಂದಿದೆ ಎಂದು ಆದೇಶದಲ್ಲಿ ಜಿಲ್ಲಾಧಿಕಾರಿ ಉಲ್ಲೇಖಿಸಿದ್ದಾರೆ.
ಅರೆಹಳ್ಳಿಗುಡ್ಡದಹಳ್ಳಿ ಗ್ರಾಮದ ಸರ್ವೆ ನಂಬರ್ 57ರ ಗೋಮಾಳ ಜಮೀನು ಕಬಳಿಕೆ ವಿರುದ್ಧ ಹಲವು ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.