
ತಬರನತೋಟ (ದೊಡ್ಡಬಳ್ಳಾಪುರ): ತಾಲ್ಲೂಕಿನ ಮಧುರನ ಹೊಸಹಳ್ಳಿಯ ತಬರನತೋಟದಲ್ಲಿ ಹಿರಿಯ ರೈತ ಹೋರಾಟಗಾರ ಡಾ.ಎನ್.ವೆಂಕಟರೆಡ್ಡಿ ಅವರ 14ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.
ಸಭೆಯಲ್ಲಿ ರೈತ ಸಂಘ, ಸಿಪಿಎಂ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳು ಮತ್ತು ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿ ವೆಂಕಟರೆಡ್ಡಿ ಅವರ ಹೋರಾಟದ ಮೆಲುಕು ಹಾಕಿದರು.
ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲೂ ಫಲವತ್ತಾದ ಕೃಷಿ ಭೂಮಿಯನ್ನು ಸರ್ಕಾರ ದೋಚುತ್ತಿದೆ. ಈ ದಬ್ಬಾಳಿಕೆಯ ವಿರುದ್ಧ ರೈತರು ಸಂಘಟಿತ ಹೋರಾಟಕ್ಕೆ ಸಜ್ಜಾಗಬೇಕಿದೆ. ಬೆಂಗಳೂರು ಬಕಾಸೂರನಂತೆ ಗ್ರಾಮಾಂತರ ಜಿಲ್ಲೆಯ ಜನರ ಬದುಕು ನುಂಗುತ್ತಿದೆ. ಅನ್ನದಾತನ ಅಸ್ತಿತ್ವಕ್ಕಾಗಿ ಹೋರಾಟ ಅನಿವಾರ್ಯ ಎಂದು ದಲಿತ ಸಂಘಟನೆಯ ಕಾರಹಳ್ಳಿಶ್ರೀನಿವಾಸ್ ಹೇಳಿದರು.
ರೈತ, ದಲಿತ ಹಾಗೂ ಕನ್ನಡಪರ ಸಂಘಟನೆಗಳನ್ನು ಸಂಘಟಿಸಿದ ವೆಂಕಟರೆಡ್ಡಿ ಅವರ ಹೋರಾಟದ ಬದುಕು ಎಲ್ಲಾ ಚಳವಳಿಗೆ ಚೈತನ್ಯವಾಗಿದೆ. ಪ್ರೊ.ಎಂ.ಡಿ.ನಂಜುಂಡಸ್ವಾಮಿ ನಂತರ ರಾಜ್ಯ ರೈತ ಸಂಘವನ್ನು ಮುನ್ನಡೆಸಿ ಹಲವಾರು ಹೋರಾಟ ರೂಪಿಸಿದ್ದ ವೆಂಕಟರೆಡ್ಡಿ ಹಲವಾರು ಹೋರಾಟಗಾರರನ್ನು ಹುಟ್ಟುಹಾಕಿದ್ದಾರೆ ಎಂದರು.
ಸಿಪಿಎಂ ಜಿಲ್ಲಾ ಮುಖಂಡ ಆರ್.ಚಂದ್ರತೇಜಸ್ವಿ, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯ್ಕ್, ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಪ್ರಸನ್ನ, ತಾಲ್ಲೂಕು ಅಧ್ಯಕ್ಷ ಹನುಮೇಗೌಡ, ಕೆ.ಸುಲೋಚನಮ್ಮ, ಡಿ.ಪಿ.ಅಂಜನೇಯ, ಮುತ್ತೇಗೌಡ, ಸತೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.