ADVERTISEMENT

ಕೆಐಎಡಿಬಿ ಭೂಸ್ವಾಧೀನ ಕೈಬಿಡಲು ಒತ್ತಾಯ: ಕೈಗಾರಿಕೆ ಸ್ಥಾಪನೆಗೆ ರೈತರ ತೀವ್ರ ವಿರೋಧ

ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ರೈತರ ನಿಯೋಗದಿಂದ ಕೈಗಾರಿಕ ಸಚಿವ ಭೇಟಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 5:21 IST
Last Updated 27 ಆಗಸ್ಟ್ 2025, 5:21 IST
ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯಿಂದ ರೈತರಿಗೆ ಆಗುವ ಸಮಸ್ಯೆಗಳ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಶಾಸಕ ಬಿ.ಶಿವಣ್ಣ ನೇತೃತ್ವದಲ್ಲಿ ರೈತರ ನಿಯೋಗ ಕೈಗಾರಿಕ ಸಚಿವ ಎಂ.ಪಿ.ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯಿಂದ ರೈತರಿಗೆ ಆಗುವ ಸಮಸ್ಯೆಗಳ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಶಾಸಕ ಬಿ.ಶಿವಣ್ಣ ನೇತೃತ್ವದಲ್ಲಿ ರೈತರ ನಿಯೋಗ ಕೈಗಾರಿಕ ಸಚಿವ ಎಂ.ಪಿ.ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಆನೇಕಲ್ : ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಒಂದು ಒತ್ತಾಯಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಶಾಸಕ ಬಿ.ಶಿವಣ್ಣ ನೇತೃತ್ವದಲ್ಲಿ ರೈತರ ನಿಯೋಗ ಬೃಹತ್ ಕೈಗಾರಿಕ ಸಚಿವ ಎಂ.ಬಿ.ಪಾಟೀಲ ಅವರನ್ನು ಮಂಗಳವಾರ ಭೇಟಿ ಮಾಡಿ ಕೈಗಾರಿಕೆಗಳಿಂದ ರೈತರಿಗೆ ಆಗುವ ಸಮಸ್ಯೆಗಳ ಬಗ್ಗೆ ವಿವರಿಸಿದರು.

ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ‘ಆನೇಕಲ್‌ ತಾಲ್ಲೂಕು ನಮ್ಮ ಜನ್ಮಭೂಮಿ. ಈ ಕ್ಷೇತ್ರದ ರೈತರ ಹಿತ ಕಾಪಾಡಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಈಗಾಗಲೇ ಐದು ಕೈಗಾರಿಕಾ ಪ್ರದೇಶಗಳಿವೆ. ಗೃಹ ಮಂಡಳಿ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಕಾಮಗಾರಿಯಿಂದಾಗಿ ಸಾವಿರಾರು ಎಕರೆ ರೈತರ ಭೂಮಿ‌ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಸರ್ಜಾಪುರ ಹೋಬಳಿಯಲ್ಲಿ ರೈತರ ಸಂಖ್ಯೆ ಹೆಚ್ಚಿದೆ. ರೇಷ್ಮೆ ಮತ್ತು ತೋಟಗಾರಿಕೆ ಬೆಳೆಗಳನ್ನು ನಂಬಿ ರೈತರು ಜೀವನ ಸಾಗಿಸುತ್ತಿದ್ದಾರೆ. ಕೆಐಎಡಿಬಿ ಭೂಸ್ವಾಧೀನದಿಂದಾಗಿ ರೈತರಿಗೆ ತೊಂದರೆಯಾಗಲಿದೆ. ಕೈಗಾರಿಕ ಇಲಾಖೆ ಈ ಬಗ್ಗೆ ಮರುಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ಶಾಸಕ ಬಿ.ಶಿವಣ್ಣ ಮಾತನಾಡಿ, ತಾಲ್ಲೂಕಿನ ಸರ್ಜಾಪುರದಲ್ಲಿ ಕೆಐಎಡಿಬಿ 2,451 ಎಕರೆ ಭೂಸ್ವಾಧೀನ ಪಡಿಸಿಕೊಳ್ಳಲು ಸಿದ್ಧತೆ ನಡೆಸಿದೆ. ರೈತರು 48 ದಿನಗಳಿಂದ ಮುತ್ತಾನಲ್ಲೂರು ಗ್ರಾಮದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ವಾಧೀನ ಪ್ರಕ್ರಿಯೆಗೆ ಸಜ್ಜಾಗಿರುವ ಎಲ್ಲ ಗ್ರಾಮಗಳಲ್ಲಿಯೂ ರೈತರ ಭೂಸ್ವಾಧೀನ ವಿರುದ್ಧ ಧ್ವನಿ ಎತ್ತಿದ್ದಾರೆ. ಸರ್ಕಾರ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಕೈಗಾರಿಕ ಸಚಿವ ಎಂ.ಬಿ.ಪಾಟೀಲ ಅವರನ್ನು ರೈತರ ನಿಯೋಗ ಭೇಟಿ ಮಾಡಿ ಕ್ರಮ ವಹಿಸುವಂತೆ ತಿಳಿಸಲಾಗಿದೆ.

ADVERTISEMENT

ಸರ್ಜಾಪುರ ಹೋಬಳಿಯಲ್ಲಿರುವವರು ಸಣ್ಣ ರೈತರು. ತಮ್ಮ ಭವಿಷ್ಯಕ್ಕಾಗಿ ಭೂಮಿ ಉಳಿಸಿಕೊಳ್ಳುತ್ತಿದ್ದಾರೆ. ಪ್ರಾಥಮಿಕ ಅಧಿಸೂಚನೆ ರದ್ದುಗೊಳಿಸಬೇಕು ಮತ್ತು ಭೂಸ್ವಾಧೀನ ಪ್ರಕ್ರಿಯೆ ಸಂಬಂಧ ಈಚೆಗೆ ಹೊರಡಿಸಿರುವ ಎಲ್ಲ ಅಧಿಸೂಚನೆಯನ್ನು ಅಧಿಕಾರಿಗಳು ಕೈಬಿಡಬೇಕು ಎಂದರು.

ತಾಲ್ಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಗೌರವ ಅಧ್ಯಕ್ಷ ಕೆ.ಸಿ.ಜಯಪ್ರಕಾಶ್‌ ಮಾತನಾಡಿ, ಕೈಗಾರಿಕೆ ಸ್ಥಾಪನೆಯಿಂದ ರೈತರ ಭವಿಷ್ಯ ಅತಂತ್ರವಾಗುತ್ತದೆ. ಪರಿಸರ ಸಮಸ್ಯೆ ಹೆಚ್ಚಾಗುತ್ತದೆ. ಈ ಬಗ್ಗೆ ಮರುಪರಿಶೀಲನೆ ನಡೆಸಬೇಕು ಮತ್ತು ಭೂಸ್ವಾಧೀನ ಅಧಿಸೂಚನೆ ಕೈಬಿಡಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್‌ ಸದಸ್ಯ ಗೋಪಿನಾಥರೆಡ್ಡಿ, ಬಮೂಲ್‌ ನಿರ್ದೇಶಕ ಆರ್.ಕೆ.ರಮೇಶ್‌, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಗೌರವ ಅಧ್ಯಕ್ಷ ಕೆ.ಸಿ.ಜಯಪ್ರಕಾಶ್‌, ಅಧ್ಯಕ್ಷ ದೇವರಾಜರೆಡ್ಡಿ, ಮುಖಂಡರಾದ ರಾಮಸ್ವಾಮಿರೆಡ್ಡಿ, ಚಂದ್ರಾರೆಡ್ಡಿ, ಚಿನ್ನಪ್ಪ ಚಿಕ್ಕಹಾಗಡೆ, ಗೌರೀಶ್‌, ಮೋಹನ್‌, ರಘುಪತಿರೆಡ್ಡಿ, ಲಿಂಗಣ್ಣ, ವೆಂಕಟಸ್ವಾಮಿರೆಡ್ಡಿ, ವಿಶ್ವನಾಥರೆಡ್ಡಿ ಇದ್ದರು.

ಶಾಸಕ ಬಿ.ಶಿವಣ್ಣ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಮನವಿ ಮಾಡಿದರು

ಮುಖ್ಯಮಂತ್ರಿ ಭೇಟಿ ಮಾಡಿದ ನಿಯೋಗ 

ಸರ್ಜಾಪುರ ಹೋಬಳಿಯಲ್ಲಿ ರೈತರ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವುದರ ಬಗ್ಗೆ ಶಾಸಕ ಬಿ.ಶಿವಣ್ಣ ಮತ್ತು ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ರೈತರ ಸಮಸ್ಯೆ ಬಗ್ಗೆ ವಿವರಿಸಿದರು. ಭೂಸ್ವಾಧೀನ ಪ್ರಕ್ರಿಯೆಯಿಂದಾಗಿ ರೈತರಿಗೆ ಆಗುವ ಸಮಸ್ಯೆ ಮತ್ತು ಪರಿಸರದ ಮೇಲಿನ ಪ್ರಭಾವದ ಬಗ್ಗೆ ಮತ್ತು ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಮನವಿ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.