ADVERTISEMENT

ನಂದಗುಡಿ ಟೌನ್ ಶಿಪ್‌ಗೆ ಭೂಮಿ ಕೊಡಲಾರೆವು: ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 5:55 IST
Last Updated 24 ಫೆಬ್ರುವರಿ 2026, 5:55 IST
ನಂದಗುಡಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಕಚೇರಿಯಲ್ಲಿ ಚೀಮಸಂದ್ರ ಗ್ರಾಮದಲ್ಲಿ ಮುಂದಿನ ದಿನಗಳಲ್ಲಿ ಈ ಭಾಗದ ರೈತರನ್ನು ಮತ್ತಷ್ಟು ಜಾಗೃತಗೊಳಿಸುವ ನಿಟ್ಟಿನಲ್ಲಿ ರೈತ ಮುಖಂಡರ ಸಭೆ ಹಮ್ಮಿಕೊಳ್ಳಲಾಗಿತ್ತು
ನಂದಗುಡಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಕಚೇರಿಯಲ್ಲಿ ಚೀಮಸಂದ್ರ ಗ್ರಾಮದಲ್ಲಿ ಮುಂದಿನ ದಿನಗಳಲ್ಲಿ ಈ ಭಾಗದ ರೈತರನ್ನು ಮತ್ತಷ್ಟು ಜಾಗೃತಗೊಳಿಸುವ ನಿಟ್ಟಿನಲ್ಲಿ ರೈತ ಮುಖಂಡರ ಸಭೆ ಹಮ್ಮಿಕೊಳ್ಳಲಾಗಿತ್ತು   

ನಂದಗುಡಿ (ಹೊಸಕೋಟೆ): ರೈತರು ತಮ್ಮ ಭೂಮಿ ಉಳಿಸಿಕೊಳ್ಳಲು ಪಕ್ಷಾತೀತವಾಗಿ ಒಗ್ಗೂಡಿ ಹೋರಾಟಕ್ಕೆ ಸನ್ನದ್ಧರಾಗಬೇಕು. ರೈತರ ಒಪ್ಪಿಗೆ ಇಲ್ಲದೆ ಅಧಿಕಾರಿಗಳು ಸರ್ವೆ ಕಾರ್ಯ ಕೈಗೊಂಡರೆ ‘ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ’ ಎಂಬ ಮನೋಭಾವಕ್ಕೆ ಅವಕಾಶ ಕೊಡಬಾರದು ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಕೆಂಚೇಗೌಡ ಹೇಳಿದರು.

ತಾಲ್ಲೂಕಿನ ನಂದಗುಡಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದರು. ಚೀಮಸಂದ್ರ ಗ್ರಾಮದಲ್ಲಿ ಸರ್ವೆ ಕಾರ್ಯ ನಡೆಸಲು ಬಂದ ಅಧಿಕಾರಿಗಳನ್ನು ರೈತರು ತಡೆದ ಘಟನೆ ಹಿನ್ನೆಲೆಯಲ್ಲಿ ಈ ಸಭೆ ನಡೆಸಿ ಮುಂದಿನ ದಿನಗಳಲ್ಲಿ ರೈತರನ್ನು ಮತ್ತಷ್ಟು ಜಾಗೃತಗೊಳಿಸುವ ಕುರಿತು ಚರ್ಚಿಸಲಾಯಿತು.

ರೈತರ ಒಪ್ಪಿಗೆ ಪಡೆಯದೆ ಸರ್ಕಾರಿ ಅಧಿಕಾರಿಗಳು ನಂದಗುಡಿ ಟೌನ್‌ಶಿಪ್‌ ವ್ಯಾಪ್ತಿಯ ಚೀಮಸಂದ್ರ ಗ್ರಾಮದಲ್ಲಿ ಸರ್ವೆ ಕಾರ್ಯ ಆರಂಭಿಸಲು ಮುಂದಾಗಿದ್ದರು. ಈ ಹಿಂದೆ ಮೂರು ತಿಂಗಳು ಹಿಂದೆ ಗೆದ್ದಲಹಳ್ಳಿಪುರ, ಇಟ್ಟಸಂದ್ರ ಮತ್ತು ರಾಮಗೋವಿಂದಪುರ ಗ್ರಾಮಗಳಲ್ಲಿ ಕೃಷಿ ಭೂಮಿ ಸರ್ವೆ ನಡೆಸಲು ಯತ್ನಿಸಿದಾಗ ರೈತರು ಲ್ಯಾಪ್‌ಟಾಪ್‌ ಸೇರಿದಂತೆ ಇತರೆ ಸಲಕರಣೆಗಳನ್ನು ವಶಪಡಿಸಿಕೊಂಡು ಪ್ರತಿಭಟನೆ ನಡೆಸಿದ್ದರು.

ADVERTISEMENT

ಆಗ ತಹಶೀಲ್ದಾರ್ ಯಾವುದೇ ಸರ್ವೆ ನಡೆಸುವುದಿಲ್ಲ ಎಂದು ರೈತರಿಗೆ ಭರವಸೆ ನೀಡಿದ್ದರು. ಆದರೆ, ಮತ್ತೆ ರೈತರಿಗೆ ಮಾಹಿತಿ ನೀಡದೆಯೇ ಸರ್ವೆ ಕಾರ್ಯಕ್ಕೆ ಮುಂದಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರೈತರ ಬೆಂಬಲದಿಂದ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರವೇ ಕೃಷಿ ಅವಲಂಬಿತ ರೈತರನ್ನು ಒಕ್ಕಲೆಬ್ಬಿಸುವ ನೀಚ ಕೃತ್ಯಕ್ಕೆ ಮುಂದಾಗಿದೆ ಎಂದು ಕೆಂಚೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಎಂ.ಬಿ.ವೆಂಕಟೇಶ್ ಮಾತನಾಡಿ, ತಾಲ್ಲೂಕಿನ ನಂದಗುಡಿ ಮತ್ತು ಸೂಲಿಬೆಲೆ ಹೋಬಳಿ ವ್ಯಾಪ್ತಿಯ 36 ಗ್ರಾಮಗಳಲ್ಲಿ ಒಟ್ಟು 18,500 ಎಕರೆ ಪ್ರದೇಶ ವಿವಾದಿತವಾಗಿದೆ. ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಈ ಭಾಗದಲ್ಲಿ ಸರ್ವೆ ಕಾರ್ಯ ನಡೆಸಲು ಬಿಡುವುದಿಲ್ಲ. ಪ್ರಾಣ ಕೊಟ್ಟಾದರೂ ಸ್ವಂತ ಭೂಮಿ ಉಳಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಆಸ್ತಿ ಸಮೀಕ್ಷೆ ಗುತ್ತಿಗೆದಾರ ಪ್ರಶಾಂತ್ ಮಾತನಾಡಿ, ದೇಶ ವ್ಯಾಪಿಯಾಗಿ ಕೇಂದ್ರ ಸರ್ಕಾರದ ‘ಸ್ವಾಮಿತ್ವ’ ಯೋಜನೆಯಡಿ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಆಸ್ತಿ ಸಮೀಕ್ಷೆ ನಡೆಸಲಾಗುತ್ತಿದೆ. ಈ ಭಾಗದಲ್ಲಿ ಸರ್ವೆ ಕಾರ್ಯ ಕೈಗೊಳ್ಳಲು ತಾವು ಟೆಂಡರ್ ಪಡೆಯಲಾಗಿದೆ. ಈ ಸರ್ವೆಗೂ ನಂದಗುಡಿ ಟೌನ್‌ಶಿಪ್‌ ಯೋಜನೆಗೂ ಯಾವುದೇ ಸಂಬಂಧವಿಲ್ಲ. ನಂದಗುಡಿ ಟೌನ್‌ಶಿಪ್‌ ವ್ಯಾಪ್ತಿಯಲ್ಲಿ ಸರ್ವೆ ನಡೆಸುವುದಿಲ್ಲ ಎಂದು ಲಿಖಿತ ಭರವಸೆ ನೀಡುವುದಾಗಿ ತಿಳಿಸಿದರು.

ಅಧಿಕಾರಿಗಳು ರೈತರಿಗೆ ಸಮಾಧಾನಪಡಿಸಿ, ನಂದಗುಡಿ ಟೌನ್‌ಶಿಪ್‌ ವ್ಯಾಪ್ತಿಯಲ್ಲಿ ಯಾವುದೇ ಸರ್ವೆ ನಡೆಸುವುದಿಲ್ಲ ಎಂದು ಲಿಖಿತ ಭರವಸೆ ನೀಡಿದ ಬಳಿಕ, ರೈತರು ವಶಪಡಿಸಿಕೊಂಡಿದ್ದ ಲ್ಯಾ‍ಪ್‌ಟಾಪ್‌ ಮತ್ತು ಇತರ ಸಲಕರಣೆಗಳನ್ನು ಹಿಂದಿರುಗಿಸಿದರು.

ಸಭೆಯಲ್ಲಿ ನಂದಗುಡಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು, ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಹಲವಾರು ರೈತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.