ADVERTISEMENT

ರೈತರ ವಿರುದ್ಧ ಹೇಳಿಕೆ ಕ್ಷಮೆಯಾಚನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 6:58 IST
Last Updated 11 ಡಿಸೆಂಬರ್ 2020, 6:58 IST
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಮುಖಂಡರು ಭಾಗವಹಿಸಿದ್ದರು
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಮುಖಂಡರು ಭಾಗವಹಿಸಿದ್ದರು   

ದೊಡ್ಡಬಳ್ಳಾಪುರ: ರೈತ ವಿರೋಧಿ ಕಾಯ್ದೆಗಳ ವಿರುದ್ಧ ಇಡೀ ದೇಶದಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ಕಾಯ್ದೆ ಬಗ್ಗೆ ಅರಿವಿಲ್ಲದೆ ಪಕ್ಷವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಹೋರಾಟನಿರತ ರೈತರನ್ನು ದಲ್ಲಾಳಿಗಳ ಹೋರಾಟ ಎಂದು ಬಿಜೆಪಿ ಜಿಲ್ಲಾ ವಕ್ತಾರರಾದ ಪುಷ್ಪ ಶಿವಶಂಕರ್ ಹಗುರವಾಗಿ ಮಾತನಾಡಿರುವುದು ಖಂಡನೀಯ. ಈ ಕುರಿತು ತಕ್ಷಣ ಕ್ಷಮೆಯಾಚಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರಸನ್ನ ಆಗ್ರಹಿಸಿದ್ದಾರೆ.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿಕರ ಉದ್ಧಾರಕ್ಕಾಗಿ ತಂದಿರುವ ಕಾಯ್ದೆಗಳು ಸರಿಯಾಗಿವೆ ಎನ್ನುವುದಾದರೆ ಬಹಿರಂಗ ಚರ್ಚೆಗೆ ಬನ್ನಿ. ಆದರೆ ಯಾರನ್ನೋ ಓಲೈಸಲು ರೈತರ ಹೋರಾಟದ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು.

ರೈತ ಸಂಘ ಐದು ದಶಕಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ. ರೈತರು ಬಿಜೆಪಿಯ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿಲ್ಲ. ರೈತ ಪರವಾದ ಕಾಯ್ದೆ ಜಾರಿಗಾಗಿ ಕೇಳುತ್ತಿದ್ದೇವೆ. ಈ ಹಿಂದೆ ರೈತ ಸಂಘ ರೈತ ವಿರೋಧಿಯಾಗಿ ನಡೆದುಕೊಂಡ ಕಾಂಗ್ರೆಸ್ ಸರ್ಕಾರವನ್ನೇ ಕಿತ್ತೋಗೆದಿದೆ. ಅಂದಿನ ರೈತ ವಿರೋಧಿ ಕಾಯ್ದೆಗಳು ಇಂದಿಗೂ ಮುಂದುವರಿಯುತ್ತಿವೆ ಎಂದು ದೂರಿದರು.

ADVERTISEMENT

ಈ ಹಂತದಲ್ಲಿ ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಹೋರಾಟಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಎಪಿಎಂಸಿ ಕಾಯ್ದೆಯಾಗಲಿ, ಭೂ ಸುಧಾರಣಾ ಕಾಯ್ದೆಗಳ ಬಗ್ಗೆ ಕನಿಷ್ಠ ಜ್ಞಾನ ಇಲ್ಲದವರು ರೈತರ ಹೋರಾಟದ ಬಗ್ಗೆ ಬಾಯಿಚಪಲಕ್ಕಾಗಿ ಮಾತನಾಡುವುದನ್ನು ಬಿಡಬೇಕು ಎಂದರು.

ಸ್ವಾಮಿನಾಥನ್ ವರದಿ ಮರೆತ ಕೇಂದ್ರ: ಚುನಾವಣಾ ಪೂರ್ವದಲ್ಲಿ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುತ್ತೇವೆ ಎಂದು ನರೇಂದ್ರ ಮೋದಿ ಪ್ರಣಾಳಿಕೆಯಲ್ಲಿ ತಿಳಿಸಿದ್ದರು. ರೈತರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಲೆ ನಿಗದಿ ಏಕೆ ಮಾಡುತ್ತಿದ್ದಾರೆ. ಉತ್ಪಾದನಾ ವಲಯಕ್ಕೆ ಗರಿಷ್ಠ ಬೆಲೆ ನಿಗದಿ ಏಕೆ ಎಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ರೈತರು ಹೋರಾಟ ನಡೆಸುತ್ತಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮೇಗೌಡ, ಜಿಲ್ಲಾ ಕಾರ್ಯದರ್ಶಿ ಸತೀಶ್, ತಾಲ್ಲೂಕು ಕಾರ್ಯದರ್ಶಿ ಸತೀಶ್, ತಾಲ್ಲೂಕು ಅಧ್ಯಕ್ಷ ಹನುಮೇಗೌಡ, ಜಿಲ್ಲಾ ಸಂಚಾಲಕ ಮುತ್ತೇಗೌಡ, ಶಿರವಾರ ರವಿ, ತೂಬಗೆರೆ ಹೋಬಳಿಯ ಅಧ್ಯಕ್ಷ ಮುನಿನಾರಾಯಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.