ADVERTISEMENT

ಆನೇಕಲ್‌: ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 5:21 IST
Last Updated 27 ಜನವರಿ 2023, 5:21 IST
ಆನೇಕಲ್‌ನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿದರು(ಎಡಚಿತ್ರ). ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಜೀವನ ಸಾಧನೆ ಕುರಿತ ನೃತ್ಯರೂಪಕ ಪ್ರದರ್ಶಿಸಿದರು
ಆನೇಕಲ್‌ನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿದರು(ಎಡಚಿತ್ರ). ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಜೀವನ ಸಾಧನೆ ಕುರಿತ ನೃತ್ಯರೂಪಕ ಪ್ರದರ್ಶಿಸಿದರು   

ಆನೇಕಲ್: ಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ 74ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ತಹಶೀಲ್ದಾರ್‌ ಶಿವಪ್ಪ ಎಚ್‌. ಲಮಾಣಿ ಧ್ವಜಾರೋಹಣ ನೆರವೇರಿಸಿದರು. ವಿವಿಧ ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಶಾಸಕ ಬಿ. ಶಿವಣ್ಣ ಮಾತನಾಡಿ, ಹಲವು ಭಾಷೆ, ಜಾತಿ, ಧರ್ಮ, ಸಂಸ್ಕೃತಿ, ಪರಂಪರೆಗಳಿದ್ದರೂ ಭಾರತೀಯರು ಎಂಬ ಭಾವನೆಯಿಂದ ನಾವೆಲ್ಲಾ ಒಂದಾಗಿದ್ದೇವೆ. ಈ ಭಾವೈಕ್ಯತೆಯನ್ನು ಬಲಗೊಳಿಸಲು ನಾವೆಲ್ಲಾ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.

ಸಂವಿಧಾನದಲ್ಲಿ ಸಹೋದರತೆ, ಸಮಾನತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಅಂಬೇಡ್ಕರ್‌ ಅವರ ಕನಸುಗಳನ್ನು ನನಸು ಮಾಡಲು ಪ್ರತಿಯೊಬ್ಬರು ಶ್ರಮಿಸಬೇಕು. ಅವರ ಆದರ್ಶ ಮತ್ತು ಚಿಂತನೆಗಳು ಸಮಾಜಕ್ಕೆ ಮಾದರಿಯಾಗಿವೆ. ಸಂವಿಧಾನ ಜಾರಿಗೆ ಬಂದು ಪ್ರಜಾತಂತ್ರ ರಾಷ್ಟ್ರವಾದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶದ ಏಕತೆ, ದೇಶ ಪ್ರೇಮದ ಸಂಕಲ್ಪ ಮಾಡಬೇಕಾಗಿದೆ ಎಂದರು.

ADVERTISEMENT

ಆನೇಕಲ್‌ ಪಟ್ಟಣದಲ್ಲಿ ₹ 13.5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಅಂಬೇಡ್ಕರ್‌ ಭವನ ಕಾಮಗಾರಿ ಪ್ರಗತಿಯಲ್ಲಿದೆ. ಅತ್ಯುತ್ತಮ ಸಭಾಂಗಣ, ಗ್ರಂಥಾಲಯ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಲಾಗಿದೆ. ಶೀಘ್ರವೇ ಭವನ ಉದ್ಘಾಟಿಸಲಾಗುವುದು. ಪಟ್ಟಣದ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಥಳೀ ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ತಹಶೀಲ್ದಾರ್‌ ಶಿವಪ್ಪ ಎಚ್. ಲಮಾಣಿ ಮಾತನಾಡಿ, ದೇಶದ ಭವಿಷ್ಯ ಯುವ ಸಮುದಾಯದ ಮೇಲಿದೆ. ಯುವಕರು ಉನ್ನತ ಸಾಧನೆ ಮಾಡುವತ್ತ ಹೆಚ್ಚಿನ ಶ್ರಮವಹಿಸಬೇಕು. ಪ್ರಜಾಪ್ರಭುತ್ವ ಹಬ್ಬವಾಗಿರುವ ಚುನಾವಣೆಗಳಲ್ಲಿ ಕಡ್ಡಾಯ ಮತದಾನ ಮಾಡುವ ಮೂಲಕ ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.

ಪುರಸಭಾ ಅಧ್ಯಕ್ಷ ಎನ್‌.ಎಸ್. ಪದ್ಮನಾಭ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ₹ 1 ಕೋಟಿ ಮೀಸಲಿಡಲಾಗಿದೆ. ವಿದ್ಯಾರ್ಥಿಗಳು ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮೀನಾರಾಯಣಸ್ವಾಮಿ, ಪುರಸಭಾ ಉಪಾಧ್ಯಕ್ಷೆ ಮಾಲಾ ಭಾರ್ಗವ್‌, ಸದಸ್ಯರಾದ ಮುನಾವರ್, ರಾಜಪ್ಪ, ರಾಜೇಂದ್ರಪ್ರಸಾದ್‌, ರವಿ, ಮಹಾಂತೇಶ್, ಭಾರತಿ, ಕವಿತಾ, ಭುವನ, ಸುಧಾ, ಶೋಭಾ, ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ. ಜಯಲಕ್ಷ್ಮೀ, ಸಿಡಿಪಿಒ ಕವಿತಾ, ಡಿವೈಎಸ್‌ಪಿ ಲಕ್ಷ್ಮೀನಾರಾಯಣ್, ಸರ್ಕಲ್‌ ಇನ್‌ಸ್ಪೆಕ್ಟರ್‌ ಚಂದ್ರಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿ, ಎಇಇಗಳಾದ ಚಿನ್ನಪ್ಪ, ಹರಿಪ್ರಸಾದ್, ವೆಂಕಟೇಶ್‌, ನಾಗರಾಜು, ರವಿ, ಮುಖಂಡರಾದ ಮೂರ್ತಿಕುಮಾರ್, ಹೇಮಲತಾ ಸುರೇಶ್‌ ಇದ್ದರು.

ಬಾಲಗಂಗಾಧರ ತಿಲಕ್‌ ಮತ್ತು ಅಂಬೇಡ್ಕರ್‌ ಅವರ ಜೀವನ ಸಾಧನೆ ಕುರಿತ ನೃತ್ಯರೂಪಕ ಮತ್ತು ಚಿಕ್ಕದಾಸರಹಳ್ಳಿಯ ಮಹಿಳೆಯರ ಕೋಲಾಟ ಕಣ್ಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.