ADVERTISEMENT

ದೊಡ್ಡಬಳ್ಳಾಪುರ: ಹಬ್ಬಕ್ಕೆ ಖರೀದಿ ಭರಾಟೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 2:05 IST
Last Updated 8 ಆಗಸ್ಟ್ 2025, 2:05 IST
ದೊಡ್ಡಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ಹೂವು, ಹಣ್ಣುಗಳ ಖರೀದಿ ಭರಾಟೆ ಜೋರಾಗಿತ್ತು
ದೊಡ್ಡಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ಹೂವು, ಹಣ್ಣುಗಳ ಖರೀದಿ ಭರಾಟೆ ಜೋರಾಗಿತ್ತು   

ದೊಡ್ಡಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದ್ದರೂ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಖರೀದಿ ಭರಾಟೆ ಗುರುವಾರ ಜೋರಾಗಿತ್ತು.

ತರಕಾರಿ, ಹಣ್ಣುಗಳು ಹಾಗೂ ಹೂಗಳ ಬೆಲೆ ದುಬಾರಿಯಾಗಿ ಸಾರ್ವಜನಿಕರನ್ನು ಕಂಗಾಲಾಗಿಸಿದೆ. ಇದರೊಂದಿಗೆ ವರಲಕ್ಷ್ಮಿ ಮೂರ್ತಿಗಳ ಮೂರ್ತಿ ಮತ್ತು ಮುಖವಾಡಗಳು ಸಹ ಭರದಿಂದ ಮಾರಾಟವಾಗುತ್ತಿದ್ದು, ದುಬಾರಿ ಎನಿಸಿದ್ದವು.

ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಹಣ್ಣುಗಳ ನೂರಾರು ಅಂಗಡಿಗಳು ಹಬ್ಬಕ್ಕೆಂದೇ ತೆರೆದಿವೆ. ದೊಡ್ಡ ತೆಂಗಿನ ಕಾಯಿ ಒಂದಕ್ಕೆ ₹100 ಆಗಿದೆ. ಹೂವು ಹಣ್ಣಿನ ಬೆಲೆಗಳು ಹಿಂದೆಂದೂ ಕಾಣದಷ್ಟು ಗಗನಕ್ಕೇರಿವೆ. ಕಾಕಡ, ಮಲ್ಲಿಗೆ,ಮಳ್ಳೆ ಹೂವಿನ ಬೆಲೆ ₹1,000, ಕನಕಾಂಬರ ಕೆ.ಜಿಗೆ ₹2,000 ಇದ್ದು, ₹50 ಗ್ರಾಂಗೆ ₹120ನಂತೆ ಮಾರಾಟವಾಗುತ್ತಿತ್ತು.

ADVERTISEMENT

ಶಾಮಂತಿಗೆ ₹250, ಬಟನ್ಸ್, ಗುಲಾಬಿ ಮುಂತಾದ ಹೂವಿನ ಬೆಲೆಗಳು ₹200 ರವರೆಗೂ ಇವೆ. ಇನ್ನು ತಾವರೆ ಹೂ ಒಂದು ಜೊತೆಗೆ ₹80, ಡೇರಾ ಒಂದು ಹೂವಿಗೆ ₹10 ಇದರೊಂದಿಗೆ ಸೇಬಿನ ಬೆಲೆ ₹250, ದ್ರಾಕ್ಷಿ ₹200 ದಾಟಿದ್ದು, ಮಿಕ್ಕ ಹಣ್ಣುಗಳ ಬೆಲೆಗಳೂ ಕೆಜಿಗೆ ₹20 ರಿಂದ ₹30 ಹೆಚ್ಚಾಗಿವೆ. ಅಲಂಕಾರಿಕ ಹೂಗಳು ಒಂದು ಕುಚ್ಚಿಗೆ ₹200ಗಳಂತೆ ಮಾರಾಟವಾಗುತ್ತಿತ್ತು. ಬಾಳೆಕಂದುಗಳು ಸಹ ತುಸು ಬೆಲೆ ಹೆಚ್ಚಾಗಿಯೇ ಇವೆ. ಆಷಾಢ ಮಾಸದಲ್ಲಿಯೂ ಸಹ ಹೂವುಗಳ ಬೆಲೆ ಅಷ್ಟೇನೂ ಇಳಿಕೆಯಾಗಿರಲಿಲ್ಲ.

ಲಕ್ಷ್ಮೀ ಅಲಂಕೃತ ಮೂರ್ತಿ: ಲಕ್ಷ್ಮಿ ಅಲಂಕೃತ ಮೂರ್ತಿ ಹಾಗೂ ಮುಖವಾಡಗಳು ಒಂದು ಸೆಟ್ ಪೂರ್ಣ ಪ್ರತಿಮೆಗೆ ₹3 ಸಾವಿರದಿಂದ ₹10 ಸಾವಿರದವರೆಗೆ ಮಾರಾಟ ಆಗುತ್ತಿವೆ.  ಲಕ್ಷ್ಮಿ ಕಳಸಕ್ಕೆ ಇಡುವ ಮುಖವಾಡಗಳನ್ನು ಮಹಿಳೆಯರು ಕೊಂಡೊಯ್ಯುತ್ತಿದ್ದುದು ಸಾಮಾನ್ಯವಾಗಿತ್ತು. ಪ್ಲಾಸ್ಟಿಕ್ ಹೂಗಳು, ಅಲಂಕಾರಿಕ ಸಾಮಗ್ರಿಗಳ ಮಾರಾಟವು ಜೋರಾಗಿತ್ತು.

ದೊಡ್ಡಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ಹೂವು ಖರೀದಿ ಭರಾಟೆ

ಕಡಿಮೆಯಾದ ಹೂ ಇಳುವರಿ:

ತಾಲ್ಲೂಕಿನಲ್ಲಿ ಸೇವಂತಿಗೆ ಗುಲಾಬಿ ಮತ್ತು ಚೆಂಡು ಹೂ ಅನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆದರೆ ಕಾಕಡ ಮಲ್ಲಿಗೆ ಕನಕಾಂಬರ ಹೂ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದ್ದಾರೆ. ಹಾಗಾಗಿ ಬೇರೆಡೆಯಿಂದ ಹೂಗಳನ್ನು ತರಿಸಬೇಕಾದ ಅನಿವಾರ್ಯತೆ ಇದೆ. ಹೂ ಬಿಡಿಸಲು ಕೂಲಿ ಕಾರ್ಮಿಕರ ಸಮಸ್ಯೆ ನಿರ್ವಹಣೆ ವೆಚ್ಚ ಹೂ ಬೆಳೆಗಾರರ ಸಂಖ್ಯೆ ಕಡಿಮೆಯಾಗುವಂತೆ ಮಾಡಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿಯೂ ಹೂಗಳ ಬೆಲೆ ದುಬಾರಿಯಾಗಿದೆ ಎನ್ನುತ್ತಾರೆ ಹೂ ಮಾರಾಟಗಾರ ವಾಸು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.