ADVERTISEMENT

ರಾಗಿ ಬಂಪರ್ ಬೆಳೆ ನಿರೀಕ್ಷೆಯಲ್ಲಿ ರೈತರು

ಸ್ವಾತಿ, ವಿಶಾಖ ಮಳೆಯ ಆತಂಕ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 12:02 IST
Last Updated 29 ಅಕ್ಟೋಬರ್ 2019, 12:02 IST
ವಿಜಯಪುರ ಹೋಬಳಿ ಚಿನುವಂಡನಹಳ್ಳಿ ಬಳಿ ರೈತರೊಬ್ಬರು ಬೆಳೆದಿರುವ ರಾಗಿ ಬೆಳೆ
ವಿಜಯಪುರ ಹೋಬಳಿ ಚಿನುವಂಡನಹಳ್ಳಿ ಬಳಿ ರೈತರೊಬ್ಬರು ಬೆಳೆದಿರುವ ರಾಗಿ ಬೆಳೆ   

ವಿಜಯಪುರ: ತೀವ್ರ ಬರಗಾಲದಿಂದ ಬಸವಳಿದು ಹೋಗಿದ್ದ ರೈತರಪಾಲಿಗೆ ಉತ್ತಮವಾಗಿ ಆಗುತ್ತಿರುವ ಮಳೆಯು ನೆಮ್ಮದಿ ತಂದಿದ್ದು, ರಾಗಿ ಪೈರು ಹುಲುಸಾಗಿ ಬೆಳೆದಿರುವ ಕಾರಣ ರೈತರು ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದಾರೆ.

ಸತತವಾಗಿ ಏಳು ವರ್ಷಗಳಿಂದ ಮಳೆ ಇಲ್ಲದೆ ಮುಂಗಾರು, ಹಿಂಗಾರು ಬೆಳೆಗಳಿಗೆ ಹಾನಿಯಾಗಿದ್ದವು. ಈ ಬಾರಿಯೂ ಹೀಗಾದರೆ ಮುಂದೇನು ಎಂಬ ಚಿಂತೆ ರೈತರಿಗಿತ್ತು. ಆದರೆ, ಇದೀಗ ಉತ್ತಮ ಮಳೆ ಬಿದ್ದಿರುವುದರಿಂದ ರೈತರಲ್ಲಿ ಸಂತಸ ಮೂಡಿಸಿದೆ.

ಜುಲೈ ಅಂತ್ಯ, ಆಗಸ್ಟ್ ಮೊದಲ ವಾರದಲ್ಲಿ ಬಿದ್ದ ಮಳೆಗೆ ರೈತರ ಹೊಲಗಳಲ್ಲಿ ರಾಗಿ, ಸಾಸಿವೆ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಬಳಿಕ ಆಗಸ್ಟ್ ಅಂತ್ಯ ಮತ್ತು ಸೆಪ್ಟೆಂಬರ್ ಮೊದಲ ಎರಡು ವಾರಗಳ ಮಧ್ಯೆ ಮಳೆ ಕೈಕೊಟ್ಟು ರಾಗಿ ಪೈರು ಒಣಗಲಾರಂಭಿಸಿತು. ಒಣಗುವ ಹಂತದಲ್ಲಿದ್ದ ರಾಗಿ ಬೆಳೆ ಇದೀಗ ಮಳೆ ಸುರಿದ ಪರಿಣಾಮ ಹಸಿರಿನಿಂದ ನಳನಳಿಸುತ್ತಿದ್ದು, ಕಾಳುಗಟ್ಟುವ ಹಂತದಲ್ಲಿದೆ. ಇನ್ನೂ ಒಂದೂವರೆ ತಿಂಗಳಲ್ಲಿ ರಾಗಿ ಬೆಳೆ ಕೈಸೇರಲಿದೆ.

ADVERTISEMENT

ಇನ್ನೂ ಮೂರು ಮಳೆಗೆ ಬಂಪರ್ : ಬಡವರ ಬಂಡ ಬೆಳೆ ಎಂದೆನಿಸಿಕೊಂಡಿರುವ ರಾಗಿಯನ್ನು ಕೆಲವು ರೈತರು ಮಳೆ ನಿರೀಕ್ಷೆಯಲ್ಲಿ ಒಣ ಭೂಮಿಯಲ್ಲಿ ರಾಗಿ ಬಿತ್ತನೆ ಮಾಡಿದ್ದರು. ಸದ್ಯ ಅಂಥ ಹೊಲಗಳಲ್ಲಿ ಇದೀಗ ತೆನೆ ಕಾಣಿಸಿಕೊಂಡಿದೆ. ಇನ್ನೆರಡರಿಂದ ಮೂರು ಹದ ಮಳೆಯಾದರೆ ಸಾಕು ತೆನೆ ಬಲಿತುಕೊಳ್ಳುತ್ತದೆ ಎಂಬುದು ರೈತರ ಅಭಿಪ್ರಾಯ.

ಸ್ವಾತಿ, ವಿಶಾಖ ಮಳೆ ಭಯ: ಈ ಬಾರಿ ಬಿತ್ತನೆ ಮಾಡಿದ ಬೆಳೆಗಳಿಗೆ ಉತ್ತರೆ ಮತ್ತು ಹಸ್ತ ಮಳೆ ಉತ್ತಮವಾಗಿ ಬಿದ್ದಿರುವ ಪರಿಣಾಮ ರಾಗಿ ಸೇರಿದಂತೆ ಇನ್ನಿತರ ಬೆಳೆಗಳು ಹೊಲಗಳಲ್ಲಿ ಹಚ್ಚ ಹಸಿರಿನಿಂದ ಬೆಳೆದು ನಿಂತಿದೆ. ಇನ್ನೂ ಮುಂದೆ ಬರಲಿರುವ ಸ್ವಾತಿ ಮಳೆಯಲ್ಲಿ ಹೆಚ್ಚು ದಿನಗಳ ಕಾಲ ಜಿಟಿ ಜಿಟಿ ಜಡಿ ಮಳೆ ಹಿಡಿದರೆ ರಾಗಿ ಬಂಪರ್ ಬೆಳೆಗೆ ತಡೆಯೊಡ್ಡಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗೆ ಆಗಬಹುದು. ಹಾಗಾಗಿ ಸ್ವಾತಿ, ವಿಶಾಖ ಮಳೆ ಭಯ ರೈತರನ್ನು ಕಾಡುತ್ತಿದೆ.

ಸದ್ಯಕ್ಕೆ ನೀರು, ಮೇವಿನ ಕೊರತೆ ಇಲ್ಲ: ಮಳೆ ಇಲ್ಲದೆ ಇದ್ದಾಗ ಮೇವಿನ ಬೆಲೆ ಗಗನಮುಖಿಯಾಗಿತ್ತು. ಒಂದು ಹೊರೆ ಹುಲ್ಲಿಗೆ ₹ 500 ದರ ಇತ್ತು. ಹಾಗಾಗಿ ಮೇವಿಲ್ಲದೆ ರೈತರು ಜಾನುವಾರುಗಳನ್ನು ಮಾರಾಟ ಮಾಡಿದ್ದರು. ಈಗ ರಾಗಿ ಬೆಳೆ ಚೆನ್ನಾಗಿ ಬಂದಿದೆ. ಹದವಾಗಿ ಮಳೆಯಾಗುತ್ತಿರುವುದರಿಂದ ಬದುಗಳಲ್ಲಿ ಹಸಿರು ಮೇವು ಸೊಂಪಾಗಿ ಬರಲಾರಂಭಿಸಿದೆ. ರೈತರು ತಮ್ಮ ರಾಸುಗಳಿಗೆ ಹಸಿರು ಮೇವು ಕೊಡುತ್ತಿದ್ದಾರೆ. ಬಹುತೇಕ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚುತ್ತಿದೆ. ಸದ್ಯಕ್ಕೆ ನೀರು, ಮೇವಿಗೆ ಕೊರತೆ ಇಲ್ಲ. ಹೀಗೆ ಹದವಾಗಿ ಮಳೆಯಾದರೆ ಶೇ 90ರಷ್ಟು ರಾಗಿ ಬೆಳೆ ನಿರೀಕ್ಷಿಸಲಾಗಿದೆ.

ಸಿರಿಧ್ಯಾನ್ಯಗಳೂ ಸಮೃದ್ಧಿ: ಮಳೆ ಸುರಿಯುವುದು ತಡವಾದರೂ ಇರುವ ಬೆಳೆಗಳು ಸದ್ಯಕ್ಕೆ ಚೆನ್ನಾಗಿದೆ. ಮುಂದೆ ಸಮಯಕ್ಕೆ ಸರಿಯಾಗಿ ಮಳೆಯಾದರೆ ಮೋಸವಾಗುವುದಿಲ್ಲ. ವರ್ಷದ ಕಾಳು ಮನೆಗೆ ಬರುತ್ತದೆ. ಅವರೆಕಾಯಿ ಗಿಡಗಳು ಹುಲುಸಾಗಿ ಬೆಳೆದಿವೆ. ರೈತರು ಸಾಂಪ್ರದಾಯಿಕವಾಗಿ ರಾಗಿ ಹೊಲಗಳಲ್ಲಿ ಅವರೆ, ಹುಚ್ಚೆಳ್ಳು, ಸಾಸಿವೆ, ಬಿಳಿಜೋಳ, ಅರೆ, ಸಾಮೆ, ನವಣೆ, ಸಜ್ಜೆ ಮುಂತಾದ ಬೆಳೆಗಳನ್ನು ಸಾಲುಗಳಲ್ಲಿ ಬೆಳೆಯಲಾಗುತ್ತಿದೆ. ಆ ಬೆಳೆಗಳು ಕೂಡಾ ಈ ಬಾರಿ ಸಮೃದ್ಧಿಯಾಗಿ ಬೆಳೆದಿವೆ ಎಂದು ರೈತ ನಾರಾಯಣಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.