ADVERTISEMENT

ಕೈಗಾರಿಕಾ ತ್ಯಾಜ್ಯಕ್ಕೆ ಗೋಮಾಳದಲ್ಲಿ ಬೆಂಕಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 12:04 IST
Last Updated 14 ಫೆಬ್ರುವರಿ 2020, 12:04 IST
ಕೈಗಾರಿಕೆಗಳು ರಾತ್ರಿ ವೇಳೆ ತಂದು ರಾಶಿ ಹಾಕಿ ಬೆಂಕಿ ಹಚ್ಚಿರುವ ತ್ಯಾಜ್ಯ
ಕೈಗಾರಿಕೆಗಳು ರಾತ್ರಿ ವೇಳೆ ತಂದು ರಾಶಿ ಹಾಕಿ ಬೆಂಕಿ ಹಚ್ಚಿರುವ ತ್ಯಾಜ್ಯ   

ದೊಡ್ಡಬಳ್ಳಾಪುರ: ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ವಿವಿಧ ಕೈಗಾರಿಕೆಗಳು ರಾತ್ರಿ ವೇಳೆ ತ್ಯಾಜ್ಯವನ್ನು ತಂದು ಗ್ರಾಮದ ಸುತ್ತಲಿನ ಗೋಮಾಳ ಹಾಗೂ ಹಳ್ಳದ ಸಾಲುಗಳಲ್ಲಿ ರಾಶಿ ಹಾಕಿ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ಹೊರ ಬರುವ ಘಾಟುಯುಕ್ತ ಹೊಗೆಯಿಂದಾಗಿ ಮಕ್ಕಳು, ವೃದ್ಧರು ಉಸಿರಾಟದ ತೊಂದರೆಗಳಿಂದ ಮನೆಗಳಲ್ಲಿ ಮಲಗುವುದೇ ಕಷ್ಟವಾಗಿದೆ ಎಂದು ಬಿಸುವನಹಳ್ಳಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಿಧ ಕೈಗಾರಿಕೆಗಳವರು ಸಿದ್ದಪಡಿಸುವ ವಸ್ತುಗಳನ್ನು ಪ್ಯಾಕ್‌ ಮಾಡಿದ ನಂತರ ಉಳಿಯುವ ರಟ್ಟಿನ ಬಾಕ್ಸ್‌, ಪ್ಲಾಸ್ಟಿಕ್‌ ವಸ್ತುಗಳು ಸೇರಿದ ತ್ಯಾಜ್ಯವನ್ನು ಗ್ರಾಮ ಪಂಚಾಯಿತಿ ನಿಗದಿಪಡಿಸಿರುವ ಘನತ್ಯಾಜ್ಯ ನಿರ್ವಹಣ ಘಟಕಕ್ಕೆ ತೆಗೆದುಕೊಂಡು ಹೋಗಿ ನೀಡಬೇಕು. ಆದರೆ ಶುಲ್ಕ ನೀಡುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ತ್ಯಾಜ್ಯವನ್ನು ರಾತ್ರಿ ವೇಳೆ ಕೈಗಾರಿಕಾ ಪ್ರದೇಶದಲ್ಲಿನ ವಿವಿಧ ಸರ್ಕಾರಿ ಜಮೀನಿನಲ್ಲಿ ತಂದು ರಾಶಿ ಹಾಕಿ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ಹಳ್ಳದ ಸಾಲುಗಳಲ್ಲಿ ಬೆಳೆದಿರುವ ಮರಗಳು ಸುಟ್ಟು ಹೋಗುತ್ತಿರುವುದಲ್ಲದೆ ಪರಿಸರವು ಹಾಳಾಗುತ್ತಿದೆ ಎನ್ನುತ್ತಾರೆ ಕೈಗಾರಿಕಾ ಪ್ರದೇಶದಲ್ಲಿನ ಅರದೇಶಹಳ್ಳಿ ಜನ ಜಾಗೃತಿ ಸಮಿತಿಯ ಸದಸ್ಯ ಹಾಗೂ ಬಿಸುವನಹಳ್ಳಿ ಗ್ರಾಮದ ನಿವಾಸಿ ಗೋಪಿ.

ಘನತ್ಯಾಜ್ಯದ ಹಾವಳಿಯ ಜೊತೆಗೆ ಇತ್ತೀಚೆಗೆ ಬಿಸುವನಹಳ್ಳಿ ಗ್ರಾಮದ ಮೂಲಕ ಅರದೇಶಹಳ್ಳಿ ಕೆರೆಗೆ ಮಳೆಗಾಲದಲ್ಲಿ ನೀರು ಹರಿದು ಬರುವ ರಾಜಕಾಲುಗಳಿಗೆ ಶೌಚಾಲಯದ ತ್ಯಾಜ್ಯವನ್ನು ಟ್ಯಾಂಕರ್‌ಗಳಲ್ಲಿ ತಂದು ಬಿಡಲಾಗುತ್ತಿದೆ. ಈ ತ್ಯಾಜ್ಯದಿಂದ ಕಲುಷಿತಗೊಂಡಿದ್ದ ಹಳ್ಳದ ನೀರು ಕುಡಿದ ಬಿಸುವನಹಳ್ಳಿ ಗ್ರಾಮದ ಬೈಲಪ್ಪ ಅವರು ಸಾಕಿದ್ದ ಮೂರು ಮೇಕೆಗಳು ಮೃತಪಟ್ಟಿವೆ. ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕನಿಷ್ಠ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.