ADVERTISEMENT

ಕೋರಮಂಗಲ ಅರಣ್ಯ ಪ್ರದೇಶದಲ್ಲಿ ಬೆಂಕಿ ಅವಘಡ: ಹೊತ್ತಿ ಉರಿದ ನೀಲಗಿರಿ ತೋಪು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 13:39 IST
Last Updated 8 ಏಪ್ರಿಲ್ 2024, 13:39 IST
ವಿಜಯಪುರ ಹೋಬಳಿ ಕೋರಮಂಗಲದ ಬಳಿಯಿರುವ ಅರಣ್ಯ ಪ್ರದೇಶದ ನೀಲಗಿರಿ ತೋಪು ಹೊತ್ತಿ ಉರಿಯುತ್ತಿರುವುದು
ವಿಜಯಪುರ ಹೋಬಳಿ ಕೋರಮಂಗಲದ ಬಳಿಯಿರುವ ಅರಣ್ಯ ಪ್ರದೇಶದ ನೀಲಗಿರಿ ತೋಪು ಹೊತ್ತಿ ಉರಿಯುತ್ತಿರುವುದು   

ವಿಜಯಪುರ(ದೇವನಹಳ್ಳಿ): ಹೋಬಳಿಯ ಕೋರಮಂಗಲ ಅರಣ್ಯ ಪ್ರದೇಶದಲ್ಲಿನ ನೀಲಗಿರಿ ತೋಪಿನಲ್ಲಿ ಸೋಮವಾರ ಮಧ್ಯಾಹ್ನ ಬೆಂಕಿಹೊತ್ತಿಕೊಂಡು ಅಪಾರ ಪ್ರಮಾಣದಲ್ಲಿ ಮರಗಿಡಗಳು ಸುಟ್ಟುಹೋಗಿವೆ. ಅರಣ್ಯ ಇಲಾಖೆಯ ಕಾವಲುಗಾರರು ಬೆಂಕಿ ನಂದಿಸಲು ಹರಸಾಹಸ ಪಟ್ಟರು.

ನೀಲಗಿರಿ ತೋಪಿನಲ್ಲಿ ಬೆಂಕಿ ಹೊತ್ತುಕೊಂಡು ದಟ್ಟವಾದ ಹೊಗೆಯು ಆವರಿಸಿಕೊಳ್ಳುತ್ತಿದ್ದಂತೆ ಗೂಡುಗಳು ಕಟ್ಟಿಕೊಂಡು, ಮರಿಗಳು ಮಾಡಿದ್ದ ಪಕ್ಷಿಗಳು ತಮ್ಮ ಮರಿಗಳು ಬೆಂಕಿಗೆ ಆಹುತಿಯಾಗುತ್ತಿರುವುದನ್ನು ಕಂಡು ಚೀರಾಡುತ್ತಿದ್ದವು. ನವಿಲುಗಳು ಹಾರಿ ಬಂದು ಮತ್ತೊಂದು ಕಡೆಯಲ್ಲಿರುವ ಅರಣ್ಯದೊಳಗೆ ಸೇರಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು.

ಸೋಮವಾರ ಮಧ್ಯಾಹ್ನ ಬಿಸಿಲಿನ ತಾಪಮಾನ ಹೆಚ್ಚಾಗಿದ್ದ ಸಮಯದಲ್ಲಿ ಕಿಡಿಗೇಡಿಗಳು ಬೆಂಕಿ ಹೊತ್ತಿಸಿದ್ದಾರೆ ಎನ್ನಲಾಗಿದೆ. ನೀಲಗಿರಿ ತೋಪಿನಲ್ಲಿ ಆವರಿಸಿಕೊಂಡ ಬೆಂಕಿಯಿಂದ ದಟ್ಟವಾಗಿ ಹೊಗೆ ಹಬ್ಬಿಕೊಂಡಿತ್ತು.

ADVERTISEMENT

ಸ್ಥಳದಲ್ಲಿ ಇದ್ದವರು ತೋಪಿನಲ್ಲಿದ್ದ ಹಸಿಗಿಡಗಳನ್ನು ಕಿತ್ತುಕೊಂಡು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಸಾಧ್ಯವಾಗದೆ ಇದ್ದಾಗ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಬಂದಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.

ಪ್ರತಿವರ್ಷ ಬೇಸಿಗೆಯಲ್ಲಿ ಈ ಅರಣ್ಯದಲ್ಲಿ ಬೆಂಕಿ ಹೊತ್ತುಕೊಂಡು ಅಪಾರ ಪ್ರಮಾಣದಲ್ಲಿ ಪಕ್ಷಿಗಳು, ಸಣ್ಣ ಸಣ್ಣ ಪ್ರಾಣಿಗಳು ಸುಟ್ಟುಹೋಗುತ್ತಿದ್ದರೂ ಅರಣ್ಯ ಇಲಾಖೆಯವರು, ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.