ಪಟಾಕಿ
ದೇವನಹಳ್ಳಿ: ದೀಪಾವಳಿಯಲ್ಲಿ ವಾಯುಮಾಲಿನ್ಯ ತಡೆಗಟ್ಟಲು ಪರಿಸರ ಸ್ನೇಹಿ ಹಸಿರು ಪಟಾಕಿ ಮಾರಾಟ ಮತ್ತು ಬಳಕೆಗೆ ಮಾತ್ರ ಅವಕಾಶ ನೀಡಿರುವ ಜಿಲ್ಲಾಡಳಿತವು ವಾಸ್ತವದಲ್ಲಿ ಈ ಮಾನದಂಡ ಪಾಲಿಸಲು ಸಾಧ್ಯವೇ ಎಂಬ ಅನುಮಾನ ಕಾಡತೊಡಗಿದೆ.
ಪಟಾಕಿ ಮಾರಾಟ ಮಳಿಗೆಯ ತಾತ್ಕಲಿಕ ಪರವಾನಗಿ ಪಡೆಯಲು ಜಿಲ್ಲಾಧಿಕಾರಿಗಳ ಕಚೇರಿಗೆ ನಮೂನೆ ಫಾರಂ -ಎಇ5ರೊಂದಿಗೆ ಅಫಿಡೇವಿಟ್, ಅಂಗಡಿಯ ಬಾಡಿಗೆ ಕರಾರು ಪತ್ರ, ಗುರುತಿನ ಪುರಾವೆ ಸೇರಿದಂತೆ ಉದ್ದೇಶಿತ ಸ್ಥಳದ ನಕ್ಷೆಯನ್ನು ಸಲ್ಲಿಕೆ ಮಾಡಬೇಕಿದೆ.
ಇವುಗಳನ್ನು ಪಡೆಯುವ ಸಿಬ್ಬಂದಿಯೂ ಪೊಲೀಸ್, ತಹಶೀಲ್ದಾರ್ ಕಚೇರಿ, ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿ, ಅಗ್ನಿ ಶಾಮಕ ದಳ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಸ್ಕಾಂ ಇಲಾಖೆಗೆ ಪರಿಶೀಲಿಸಿ ನಿರಾಪೇಕ್ಷಣಾ ಪ್ರಮಾಣ ಪತ್ರ ಸಲ್ಲಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಬೇಕು. ಆದರೆ ವಾಸ್ತವದಲ್ಲಿ ಇವೆಲ್ಲಾವೂ ತರಾತುರಿಯಲ್ಲಿಯೇ ನಡೆಯಲಿದೆ. ಪಟಾಕಿ ಬಾಕ್ಸ್‌ನಲ್ಲಿ ಹಸಿರು ಪಟಾಕಿ ಇದೆಯೇ ಅಥವಾ ಅಪಾಯಕಾರಿ ಪಟಾಕಿಗಳು ಇರಿಸಲಾಗಿದೆಯೋ ಎಂಬುದನ್ನು ಪರಿಶೀಲಿಸಲು ಯಾವ ಕ್ರಮವನ್ನು ಅನುಸರಣೆ ಮಾಡಬೇಕು ಎಂದು ಸ್ಪಷ್ಟತೆಯೇ ಇರುವುದಿಲ್ಲ.
ನಿಷೇಧದ ನಡೆಯೂ ಸಿಡಿದ ಪಟಾಕಿ: ಗಣೇಶೋತ್ಸವದಲ್ಲಿ ಪಟಾಕಿಯಿಂದಾಗಿ ದೊಡ್ಡಬಳ್ಳಾಪುರದಲ್ಲಿ ಉಂಟಾದ ಅವಘಡದಿಂದ ಎಚ್ಚೆತ ಜಿಲ್ಲಾಡಳಿತ ಪಟಾಕಿ ನಿಷೇಧಿಸಿ ಆದೇಶ ಮಾಡಿದ್ದರೂ ಜಿಲ್ಲೆಯ ಹಲವೆಡೆ ಪಾಲನೆಯಾಗಲಿಲ್ಲ.
ಜಿಲ್ಲಾಧಿಕಾರಿ ಆದೇಶ ಮಾಡಿದ್ದರೂ, ಅದನ್ನು ಪಾಲನೆ ಮಾಡುವ ಇಚ್ಛಾಶಕ್ತಿ ಅಧೀನ ಅಧಿಕಾರಿಗಳಲ್ಲಿ ಇರಲಿಲ್ಲ. ಗಣೇಶ ಉತ್ಸವ ಮೆರವಣಿಗೆಯಲ್ಲಿ ಪಟಾಕಿ ಬಳಕೆ ಮಾಡಿದ ಜ್ವಲಂತ ಉದಾಹರಣೆಗಳು ಸಾಕಷ್ಟಿವೆ. ಇವರ ವಿರುದ್ಧ ಯಾರು? ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ.
ಪಟಾಕಿಗಳಿಂದ ಉಂಟಾಗುವ ಸಂಭವನೀಯ ಅಗ್ನಿ ಅವಘಡದಿಂದ ಉಂಟಾಗುವ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಯೂ ಪ್ರತಿಯೊಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸುಟ್ಟ ಗಾಯ ಚಿಕಿತ್ಸಾ ತುರ್ತು ಘಟಕ ಸ್ಥಾಪಿಸಬೇಕಿದೆ.
ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಪಟಾಕಿ ಅವಘಡ ನಿಯಂತ್ರಣ ಹಾಗೂ ನಿಗದಿತ ಸಮಯದಲ್ಲಿಯೇ ಪಟಾಕಿ ಸಿಡಿಸುವ ನಿಯಮವನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲನೆ ಮಾಡುವಂತೆ ಮಾಡಲು, ಸಹಾಯವಾಣಿ ಸ್ಥಾಪಿಸಿ ಹಿರಿಯ ಅಧಿಕಾರಿಗಳ ಮೇಲುಸ್ತುವರಿಯಲ್ಲಿ ನಿಗಾವಣೆ ವಹಿಸದರಷ್ಟೇ, ಆದೇಶದಲ್ಲಿರುವುದು ಜಾರಿಯಾಗಲಿದೆ ಎನ್ನುತ್ತಾರೆ ಪ್ರಜ್ಞಾವಂತರು.
‘ಪಟಾಕಿ ಬಾಕ್ಸ್ ನೀಡಿದರೇ ಅನುಮತಿ ಸುಲಲಿತ’
ತಾತ್ಕಲಿಕವಾಗಿ ಪಟಾಕಿ ಅಂಗಡಿ ತೆರೆದು ಪಟಾಕಿ ಮಾರಾಟ ಮಾಡಲು ಅನುಮತಿ ಸಿಗಬೇಕಿದರೇ ಆರು ಇಲಾಖೆಗಳಿಗೆ ಒಂದಿಷ್ಟು ಪಟಾಕಿ ಬಾಕ್ಸ್‌ಗಳನ್ನು ಕಾಣಿಕೆ ರೂಪದಲ್ಲಿ ಸಂದಾಯ ಮಾಡಿದರಷ್ಟೇ ಸುಲಲಿತವಾಗಿ ಪರವಾನಗಿ ಸಿಗುತ್ತದೆ ಎಂದು ಪರಿಸರ ಪ್ರೇಮಿ ಯಲಿಯೂರು ಮಂಜುನಾಥ್ ಆರೋಪಿಸಿದ್ದಾರೆ.
ವಿವಿಧ ಇಲಾಖೆಯ ಅಧಿಕಾರಿಗಳ ದೈನಂದಿನ ಕರ್ತವ್ಯದೊಂದಿಗೆ ನಿರಾಪೇಕ್ಷಣಾ ಪ್ರಮಾಣ ಪತ್ರದ ನೀಡಲು ಲಕ್ಷ್ಯ ತೋರುವುದಿಲ್ಲ. ನಿರ್ಲಕ್ಷ್ಯದಿಂದ ಎನ್‌ಒಸಿ ನೀಡುವುದರಿಂದ ಮುಂದಿನ ದಿನಗಳಲ್ಲಿ ಅವಘಡಕ್ಕೆ ಕಾರಣವಾಗಬಹುದು ಎನ್ನುತ್ತಾರೆ ಅವರು.
ಅವಧಿ ಮೀರಿ ಪಟಾಕಿ ಬಳಕೆ:
ನಿಯಂತ್ರಣ ಅಸಾಧ್ಯ ಹಸಿರು ಪಟಾಕಿಗಳನ್ನು ರಾತ್ರಿ 8 ರಿಂದ 10 ಗಂಟೆಯ ವರೆಗೂ ಮಾತ್ರವೆ ಸಿಡಿಸಲು ಜಿಲ್ಲಾಡಳಿತ ಸೂಚಿಸಿದೆ. ವಾಸ್ತವದಲ್ಲಿ ಇದು ಪಾಲಿಸಲು ಅಸಾಧ್ಯ. ಸಾರ್ವಜನಿಕರು ಹಬ್ಬದ ಸಂಭ್ರಮದಲ್ಲಿ ಹೆಚ್ಚು ಪಟಾಕಿಗಳನ್ನು ಸಿಡಿಸುತ್ತಾರೆ. ಅವರಿಗೆ ಇಂತಿಷ್ಟೇ ಸಮಯದಲ್ಲಿ ಪಟಾಕಿ ಸಿಡಿಸಿ ಎಂದು ನಿರ್ಬಂಧ ಹೇರಲು ಹಾಗೂ ನಿಯಮ ಪಾಲಿಸುವಂತೆ ನಿಗಾವಹಿಸಲು ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಸಾಕಷ್ಟಿದೆ. ಇವೆಲ್ಲವೂ ಪ್ರಚಾರದ ಮಾತುಗಳಷ್ಟೆ.ಗಜೇಂದ್ರ ಯರ್ತಿಗಾನಹಳ್ಳಿ
ಬಯಲು ಪ್ರದೇಶದಲ್ಲಿ ಸಿಡಿಸಲು ನಿಯಮ ರೂಪಿಸಿ
ಪ್ರತಿಯೊಬ್ಬರು ಅವರವರ ಮನೆಯ ಮುಂದೆ ಪಟಾಕಿ ಸಿಡಿಸಿದರೇ ರಸ್ತೆಯ ಎಕ್ಕೆಲಗಳಲ್ಲಿ ಪಟಾಕಿ ತ್ಯಾಜ್ಯ ಸೃಷ್ಟಿಯಾಗುತ್ತದೆ. ಇದರ ವಿಲೇವಾರಿ ಹಾಗೂ ಸ್ವಚ್ಛತೆಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಇದನ್ನು ತಪ್ಪಿಸಲು ಬೀದಿ ಒಂದರಂತೆ ಹತ್ತಿರದ ಬಯಲು ಪ್ರದೇಶದಲ್ಲಿ ಸಾರ್ವಜನಿಕರು ಮುಕ್ತವಾಗಿ ಎಲ್ಲರೂ ಒಂದಾಗಿ ಪಟಾಕಿ ಸಿಡಿಸುವಂತೆ ಜಿಲ್ಲಾಡಳಿತ ನಿಯಮ ರೂಪಿಸಬೇಕಿದೆಅನಿಲ್ ಕುಮಾರ್ ಬಿದಲೂರು
ಪಟಾಕಿ ಬೇಡ; ಅಣತೆ ಉಪಯೋಗಿಸಿ
ಪರಿಸರ ಮಾಲಿನ್ಯ ತಡೆಗಟ್ಟಲು ಪಟಾಕಿ ಬಿಟ್ಟು ಬೆಳಕಿನ ಹಬ್ಬ ದೀಪಾವಳಿಯಲ್ಲಿ ಅಣತೆ ಮೊಂಬತ್ತಿ ಬಳಕೆ ಮಾಡಿ ವಿದ್ಯುತ್ ದೀಪಾಲಂಕರಗಳ ಮೂಲಕ ಈ ಬಾರಿ ಹಬ್ಬ ಆಚರಣೆ ಮಾಡಿದರೇ ಯಾವುದೇ ಅಪಾಯಗಳು ಇರುವುದಿಲ್ಲ. ಯುವಕರು ಎಲ್ಲರೂ ಒಂದಾಗಿ ಹತ್ತಿರದ ದೇಗುಲಗಳಲ್ಲಿ ನೂರು ಸಾವಿರ ಲಕ್ಷ ಅಣತೆ ಹಚ್ಚುವ ಪ್ರತಿಜ್ಞೆ ಮಾಡಬೇಕು. ದೀಪವಾಳಿಯ ಮೂಲಕ ಕತ್ತಲನ್ನು ದೂರ ಮಾಡೋಣರಮ್ಯಾ ದೇವನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.