ADVERTISEMENT

ಸ್ವಾವಲಂಬನೆಗೆ ಅಲಂಕಾರಿಕ ಮೀನು ಕೃಷಿ

ಮಹಿಳೆಯರಿಗೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 13:34 IST
Last Updated 10 ಮಾರ್ಚ್ 2020, 13:34 IST
ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನ ಅವರು ಕಾರಹಳ್ಳಿ ಗ್ರಾಮದ ಕೆರೆಯಲ್ಲಿ ಮೀನು ಕೃಷಿಕರಿಂದ ಮಾಹಿತಿ ಪಡೆದರು
ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನ ಅವರು ಕಾರಹಳ್ಳಿ ಗ್ರಾಮದ ಕೆರೆಯಲ್ಲಿ ಮೀನು ಕೃಷಿಕರಿಂದ ಮಾಹಿತಿ ಪಡೆದರು   

ದೇವನಹಳ್ಳಿ: ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಲುಅಲಂಕಾರಿಕ ಮೀನು ಕೃಷಿ ಮಾಡುವುದು ಉತ್ತಮ ಆಯ್ಕೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನ ಹೇಳಿದರು.

ಇಲ್ಲಿನ ಕಾರಹಳ್ಳಿ ಗ್ರಾಮದ ಕೆರೆಯಲ್ಲಿ ಇಲಾಖೆಯಿಂದ ಪ್ರೋತ್ಸಾಹ ಧನ ಪಡೆದು ಮೀನು ಕೃಷಿ ಮಾಡುತ್ತಿರುವ ಫಲಾನುಭವಿಗಳ ಕಾರ್ಯಚಟುವಟಿಕೆ ಪರಿಶೀಲಿಸಿ ಅವರು ಮಾತನಾಡಿದರು.

ಪಟ್ಟಣ ಪಂಚಾಯಿತಿ, ಗ್ರಾಮ ಮತ್ತು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಮೀನು ಮಾರಾಟ ಮಾಡಲು ಇಚ್ಛಿಸುವವರು ಹಸಿ ಮತ್ತು ಒಣಗಿದ ಮೀನು ಮಾರಾಟ ಘಟಕ ಆರಂಭಿಸಿದರೆ ಇಲಾಖೆ ಪ್ರೋತ್ಸಾಹ ಧನ ನೀಡಲಿದೆ. ಪಂಚಾಯಿತಿಗಳು ಶೇಕಡವಾರು ಅನುದಾನ ನೀಡಿ ಸಹಭಾಗಿತ್ವ ವಹಿಸಲಿವೆ ಎಂದು ಹೇಳಿದರು.

ADVERTISEMENT

ಮೀನು ಕೃಷಿಯಲ್ಲಿ ತೊಡಗಿಸಿಕೊಳ್ಳುವ ಪರಿಶಿಷ್ಟ ಜಾತಿ ಮತ್ತು ಪಂಗಡದವರೆಗೆ ಹರಿಗೋಲು, ಬಲೆ, ಸೈಕಲ್, ತಕ್ಕಡಿ, ಕ್ರೇಟ್ ನೀಡಲಾಗುತ್ತದೆ. ಕಳೆದ ವರ್ಷ ಈ ಯೋಜನೆ ಸ್ಥಗಿತಗೊಂಡಿತ್ತು, ಮೀನು ಮಾರಾಟ ಸಹಕಾರ ಸಂಘಕ್ಕೆ ಮೀನು ಕೃಷಿಗೆ ಅಧ್ಯತೆ ನೀಡಲು3 ಕೆರೆಗಳನ್ನು ನೀಡಲಾಗಿದೆಎಂದು ಹೇಳಿದರು.

ಮತ್ಸ್ಯ ಕೃಷಿ ಅಶಾ ಕಿರಣ ಯೋಜನೆ, ರಾಷ್ಟ್ರೀಯ ಮೀನು ಕೃಷಿ ವಿಕಾಸ್ ಯೋಜನೆಗಳ ಮೂಲಕ ಮಹಿಳೆಯರಿಗೆ ಸ್ವಾವಲಂಬನೆ ಹಾದಿ ತೋರಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹೆಬ್ಬಾಳದಲ್ಲಿ ಅಲಂಕಾರಿಕ ಮೀನು ಕೃಷಿ ಬಗ್ಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ 7 ಮಹಿಳೆಯರ ತಂಡ ಮೀನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವಿವರಿಸಿದರು.

ನೀಲಿ ಕ್ರಾಂತಿ ಯೋಜನೆಯಡಿ ಮೀನುಗಾರರು ತಾವು ಹಾಕಿದ ಬಂಡವಾಳಕ್ಕೆ ಶೇಕಡ 50 ರಷ್ಟು ಪ್ರೋತ್ಸಾಹ ಧನವನ್ನುಕೇಂದ್ರ ಸರ್ಕಾರ ನೀಡಲಿದೆ.ಕೃಷಿ ಹೊಂಡ, ಕುಂಟೆ, ಸಿಮೆಂಟ್ ತೊಟ್ಟಿ, ಕೆರೆಗಳಲ್ಲಿ ಮೀನು ಕೃಷಿ ಮಾಡುವವರಿಗೆ ರಿಯಾಯಿತಿಯಲ್ಲಿ ಮೀನು ಮರಿಗಳು ಮತ್ತು ಮೀನಿನ ಆಹಾರಗಳನ್ನು ನೀಡಲಾಗುತ್ತದೆ. ಸಾಮರ್ಥ್ಯ ವೃದ್ಧಿಸುವ ತರಬೇತಿ ನೀಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.