ADVERTISEMENT

ಜನಪದದಲ್ಲಿ ಮಾನವೀಯ ಪ್ರಜ್ಞೆ ಹೆಚ್ಚು: ಎ.ಜಯರಾಮ್

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 2:01 IST
Last Updated 19 ನವೆಂಬರ್ 2025, 2:01 IST
ದೊಡ್ಡಬಳ್ಳಾಪುರ ತಾಲ್ಲೂಕಿನ ‌ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ ಕಾರ್ಯಕ್ರಮ ನಡೆಯಿತು
ದೊಡ್ಡಬಳ್ಳಾಪುರ ತಾಲ್ಲೂಕಿನ ‌ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ ಕಾರ್ಯಕ್ರಮ ನಡೆಯಿತು   

ದೊಡ್ಡಬಳ್ಳಾಪುರ: ಜನಪದರು ತಮ್ಮ ದೈನಂದಿನ ಜೀವನದ ಘಟನೆಗಳು, ಭಾವನೆಗಳು ಮತ್ತು ಅನುಭವಗಳನ್ನು ಜನಪದ ಸಾಹಿತ್ಯದ ಮೂಲಕ ಅಭಿವ್ಯಕ್ತಿ ಮಾಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ಎ.ಜಯರಾಮ್ ಹೇಳಿದರು.

ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಜಾಗೃತ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮಂಗಳವಾರ ನಡೆದ ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ 2025 ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಪದರಲ್ಲಿ ಮಾನವೀಯ ಪ್ರಜ್ಞೆ ಅಪಾರವಾಗಿದೆ. ಮನುಷ್ಯ ಸಂಬಂಧಗಳು ಕರುಣೆ, ಪ್ರೀತಿ ಮತ್ತು ಸಹಕಾರದ ಭಾವನೆ ಕಂಡು ಬರುತ್ತದೆ. ಇವೆಲ್ಲವೂ ಜನಪದ ಸಾಹಿತ್ಯ, ಕಥೆಗಳು, ಹಾಡುಗಳ‌ ಮೂಲಕ ವ್ಯಕ್ತವಾಗಿವೆ. ಆಧುನಿಕ ಜೀವನದ ಶೈಲಿಯ ನಡುವೆಯೂ ಮನುಷ್ಯ ಸಂಬಂಧಗಳನ್ನು ಬೆಸೆಯಲು ಜನಪದ ಸಾಹಿತ್ಯ ಮತ್ತು ಸಹಕಾರಿ ಎಂದರು.

ADVERTISEMENT

ಜನಪದರಲ್ಲಿ ಮಕ್ಕಳಿಂದ ವೃದ್ಧರ ತನಕ ಮಣ್ಣಿನೊಂದಿಗೆ ಸಂಬಂಧ ಹೆಚ್ಚಾಗಿರುತ್ತದೆ. ಜಾನಪದ ಕಲೆ ಈ ಮಣ್ಣಿನ ಸಾಂಸ್ಕೃತಿಕ ನೆಲೆಗಟ್ಟು ಆಗಿದೆ. ಜನ‍ಪದರ ಅನುಭವ ಅಪಾರ, ಅವರ ಜ್ಞಾನ ನೆನಪಿನ ಕಣಜ. ಜಾನಪದವು ಒಂದು ಪ್ರದೇಶದ ಅಥವಾ ಸಮುದಾಯದ ವಿಶಿಷ್ಟತೆಯನ್ನು ಮತ್ತು ವೈವಿಧ್ಯತೆಯನ್ನು ಅವಾವರಣಗೊಳಿಸುತ್ತದೆ. ಜಾನಪದದ ಅಗತ್ಯ ಮತ್ತು ಮಹತ್ವದ ಬಗ್ಗೆ ಇಂದಿನ ಪೀಳಿಗೆಗೆ ಅರಿವು ಮೂಡಿಸುವ ಅಗತ್ಯವಿದೆ. ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿರುವ ಇಂದಿನ ಯುವ ಸಮುದಾಯವನ್ನು ‌ಮರಳಿ ದೇಸಿ ಸಂಸ್ಕೃತಿ ಕಡೆಗೆ ಬರುವಂತೆ ಮಾಡಬೇಕಾಗಿದೆ ಎಂದರು.

ಲೇಖಕಿ ಡಾ.ಇಂದಿರಾ ಮಾತನಾಡಿ, ಮೊಬೈಲ್ ಮತ್ತು ಟಿ.ವಿ ಅತಿಯಾದ ಬಳಕೆಯು ಏಕಾಗ್ರತೆ ಕೊರತೆ, ನಿದ್ರಾಹೀನತೆ, ಸಾಮಾಜಿಕ ಕೌಶಲಗಳ ಕೊರತೆ ಮತ್ತು ಆತಂಕ, ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆಹಾರ ಕ್ರಮಗಳು ಸರಿಯಿಲ್ಲವೆಂದರೆ ಅದು ರೋಗಗಳಿಗೆ ಆಹ್ವಾನ ನೀಡುತ್ತದೆ. ಜೀವಕಾರಕ ಹಾರ್ಮೋನುಗಳು ದೇಹದ ಕಾರ್ಯಗಳನ್ನು ನಕಾರಾತ್ಮಕವಾಗಿ ನಿಯಂತ್ರಿಸುತ್ತವೆ. ಉತ್ತಮ ಆರೋಗ್ಯಜೀವನ ಶೈಲಿಗೆ ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ ಮತ್ತು ಒತ್ತಡ ನಿರ್ವಹಣೆ ಅತ್ಯಗತ್ಯ. ಈ ಅಂಶಗಳು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕಾರಣವಾಗುತ್ತವೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಗೋವಿಂದರಾಜು, ನವೋದಯ ವಿದ್ಯಾಲಯ ನಿವೃತ್ತ ಶಿಕ್ಷಕ ವಿ.ಎಸ್.ಹೆಗಡೆ, ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ‌ ಯಲ್ಲಪ್ಪ ಎಸ್.ಬಡಣ್ಣವರ್, ಮಾಳಯ್ಯ, ಜಗನ್ನಾಥ್, ಎಚ್.ಕೆ.ಅಶೋಕ್, ಬಿ.ವಿ.ಶ್ರೀನಿವಾಸ್, ಕೆಂಪರಾಜು, ಪಿ.ಎನ್.ರಘು, ಬಾಶೆಟ್ಟಿಹಳ್ಳಿ ಮಂಜುನಾಥ್, ರಾಮಕೃಷ್ಣ, ದರ್ಗಾಜೋಗಿಹಳ್ಳಿ ಮಲ್ಲೇಶ್, ಮುನಿರತ್ನಮ್ಮ, ಗಿರೀಶ್, ಭಾಸ್ಕರ್, ಜೆ.ಪಿ.ಉಪಾಧ್ಯೆ, ವೀರಣ್ಣಗೌಡ, ಮೇಘನಾ, ರೇಣುಕಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.