ADVERTISEMENT

ಜನಪದ ಕಲಾವಿದರ ಏಳಿಗೆಗೆ ಶ್ರಮ

ದೊಡ್ಡಬಳ್ಳಾಪುರದಲ್ಲಿ ‘ಜಾನಪದ ಹಬ್ಬ- ಭಾವೈಕ್ಯ ಸಮ್ಮಿಲನ’

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 14:08 IST
Last Updated 15 ಫೆಬ್ರುವರಿ 2020, 14:08 IST
ಜಾನಪದ ಕಲಾ ತಂಡಗಳ ಮೆರವಣಿಗೆಯನ್ನು ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ.ಜಯಮ್ಮ ಜೋಗತಿ, ಡಿವೈಎಸ್‌ಪಿ ಟಿ.ರಂಗಪ್ಪ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು
ಜಾನಪದ ಕಲಾ ತಂಡಗಳ ಮೆರವಣಿಗೆಯನ್ನು ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ.ಜಯಮ್ಮ ಜೋಗತಿ, ಡಿವೈಎಸ್‌ಪಿ ಟಿ.ರಂಗಪ್ಪ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು   

ದೊಡ್ಡಬಳ್ಳಾಪುರ: ನಾಡಿನ ಅನನ್ಯ ಸಾಂಸ್ಕೃತಿಕ ಪರಂಪರೆಯಲ್ಲಿ ಒಂದಾಗಿರುವ ಜಾನಪದ ಕಲೆಗಳನ್ನು ಬೆಳೆಸಲು ಎಲ್ಲಾ ವಯೋಮಾನದವರಿಗೂ ಮಾನ್ಯತೆ ನೀಡಲು ಸೂಕ್ತ ಯೋಜನೆ ರೂಪಿಸಲಾಗುತ್ತಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ.ಜಯಮ್ಮ ಜೋಗತಿ ಹೇಳಿದರು.

ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಪೊಲೀಸ್, ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಸಹಯೋಗದೊಂದಿಗೆ ‘ಜಾನಪದ ಹಬ್ಬ- ಭಾವೈಕ್ಯತೆಯ ಸಮ್ಮಿಲನ’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡ ಕಲಿಸಿ, ಕನ್ನಡ ಸಂಸ್ಕೃತಿ ಬೆಳೆಸಿ ಎಂಬುದು ಅಕಾಡೆಮಿಯ ಚಿಂತನೆಯಾಗಿದೆ. ಕಲಾವಿದರು ಕಲೆಯನ್ನು ವೇದಿಕೆಯ ಮೇಲೆ ಅಥವಾ ಜನರ ಮುಂದೆ ಪ್ರಸ್ತುತಪಡಿಸುವ ವೇಳೆ ತಮ್ಮ ಹಾವ, ಭಾವ ಮತ್ತು ವಸ್ತ್ರದ ಶಿಸ್ತಿಗೂ ಆದ್ಯತೆ ನೀಡಬೇಕು. ಉಡುಪು ಸಂಹಿತೆ ಕಲಾವಿದರಿಗೆ ಮುಖ್ಯ ಎಂದರು.

ADVERTISEMENT

ಮಂಗಳಮುಖಿ ಸಾಧಕರೊಬ್ಬರನ್ನು ರಾಜ್ಯ ಸರ್ಕಾರದ ಮಹತ್ವದ ಅಕಾಡೆಮಿಯೊಂದಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ದೇಶದಲ್ಲೇ ಮೊದಲು. ಇಂತಹ ಮಹತ್ವದ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವ ಮೂಲಕ ಜನಪದ ಕಲಾವಿದರ ಏಳಿಗೆಗಾಗಿ ಶ್ರಮಿಸಲಾಗುವುದು ಎಂದರು.

ಸದಾ ಒಂದಲ್ಲ ಒಂದು ಒತ್ತಡದ ಕೆಲಸದಲ್ಲಿಯೇ ನಿರತರಾಗಿರುವ ಪೊಲೀಸ್‌ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾನಪದ ಅಕಾಡೆಮಿಯೊಂದಿಗೆ ಸೇರಿಕೊಂಡು ಹಾಡು, ಕುಣಿತಗಳಲ್ಲಿ ತೊಡಗಿಸಿಕೊಂಡಿರುವುದು ವಿಶೇಷ ಪ್ರಯೋಗವಾಗಿದೆ ಎಂದರು.

ಸಮಾರಂಭವನ್ನು ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟಿಸಿದರು. ಸಮಾರಂಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಸ್‌.ಆರ್‌.ವಿಶ್ವನಾಥ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ್‌, ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್‌, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಬಿಜೆಪಿ ಹಿರಿಯ ಮುಖಂಡ ಕೆ.ಎಂ.ಹನುಮಂತರಾಯಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್,ಉಪಾಧ್ಯಕ್ಷೆ ಪದ್ಮಾವತಿ ಅಣ್ಣಯಪ್ಪ, ಡಿವೈಎಸ್ಪಿ ಟಿ.ರಂಗಪ್ಪ, ಸರ್ಕಲ್‌ ಇನ್‌ಸ್ಪೆಕ್ಟರ್‌ ರಾಘವ ಎಸ್‌.ಗೌಡ ಇದ್ದರು. ಪೊಲೀಸ್‌ ಇಲಾಖೆಯ ಸಿಬ್ಬಂದಿ ಜನಪದ ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷರರ ಮೆಚ್ಚುಗೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.