ADVERTISEMENT

ಜನಪದ ಕೋಶ ಸೂಲಗಿತ್ತಿ ಅಂಜಿನಮ್ಮನ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 5:34 IST
Last Updated 8 ಮಾರ್ಚ್ 2021, 5:34 IST
ಅಂಜಿನಮ್ಮ
ಅಂಜಿನಮ್ಮ   

ದೊಡ್ಡಬಳ್ಳಾಪುರ: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿ ಕಷ್ಟದ ದಿನಗಳು ಯಾವುದು ಎಂದು ಕೇಳಿದರೆ ತಕ್ಷಣ ಹೇಳುವುದು ಮನೆಯಲ್ಲಿ ಗರ್ಭಿಣಿಯರು ಇದ್ದಾಗ, ಹೆರಿಗೆ ಸಮಯ ಎನ್ನುವ ಮಾತು ತಟ್ಟನೆ ಹೇಳುತ್ತಾರೆ. ಇಂತಹ ಕಷ್ಟದ ಸಮಯದಲ್ಲಿ ಜಾತಿ, ಭೇದ, ಬಡವ, ಶ್ರೀಮಂತ ಎನ್ನುವುದನ್ನು ನೋಡದೆ ಹೇಳಿದ ತಕ್ಷಣ ಹೋಗಿ ಸುಖವಾಗಿ ಹೆರಿಗೆ ಮಾಡಿಸಿ ಮಗುವನ್ನು ತಾಯಿ ಮಡಲಿನಲ್ಲಿ ಬೆಚ್ಚಗೆ ಮಲಗಿಸಿ ಬರುತ್ತಿದ್ದವರು ಅಂಜಿನಮ್ಮ.

ತಾಲ್ಲೂಕಿನ ಮಲ್ಲಾತಹಳ್ಳಿ ಗ್ರಾಮದ ನಿವಾಸಿ 90 ವರ್ಷದ ಅಂಜಿನಮ್ಮ 150ಕ್ಕೂ ಹೆಚ್ಚು ಹೆಸರಿಗೆ ಮಾಡಿಸುವ ಮೂಲಕ ಈ ಭಾಗದಲ್ಲಿ ಸೂಲಗಿತ್ತಿ ಅಂಜಿನಮ್ಮ ಎಂದೇ ಖ್ಯಾತರಾಗಿದ್ದಾರೆ. ಸಾಮಾನ್ಯ ರೈತ ಕುಟುಂಬದ ಕೃಷಿಯನ್ನೇ ನಂಬಿಕೊಂಡು ಬದುಕು ನಡೆಸುತ್ತಾ ತಾವು ಕಲಿತ ಸೂಲಗಿತ್ತಿ ಕಸಬು ಅತ್ಯಂತ ಅಚ್ಚುಕಟ್ಟಾಗಿ ನೆರವೇರಿಸಿದವರು.

ಈಗ ಪ್ರತಿ ಊರಿನಲ್ಲೂ ಆಶಾ ಕಾರ್ಯಕರ್ತರೆಯರು, ಅಂಗನವಾಡಿ ಕಾರ್ಯತಕರ್ತೆಯರು ಇದ್ದಾರೆ. ಮಕ್ಕಳ ಆರೋಗ್ಯದಿಂದ ಮೊದಲುಗೊಂಡು ಹದಿಹರೆಯದ ಕಿಶೋರಿಯರವರೆಗೂ ಪ್ರತಿವಾರ ಪೋಷ್ಟಿಕಯುಕ್ತ ಆಹಾರ ಅವರ ಮನೆ ಬಾಗಿಲಿಗೆ ತಲುಪಿಸುತ್ತಾರೆ. ಹಾಗೆಯೇ ಅಗತ್ಯ ತಿಳಿವಳಿಕೆ ನೀಡುತ್ತಾರೆ. ಇಂತಹ ಯಾವುದೇ ಮಾಹಿತಿ ಸಿಗದ ಕಾಲಘಟ್ಟದಲ್ಲಿ ಆಂಜಿನಮ್ಮ ಹೆರಿಗೆ ನೋವಿನಿಂದ ಬಳಲುತ್ತಿರುವ ಮಹಿಳೆಯರಿಗೆ ಮೊದಲು ಆತ್ಮಸ್ಥೈರ್ಯ ತುಂಬುತ್ತಿದ್ದರು. ತಾವು ಕಂಡುಕೊಂಡ ನಾಟಿ ಔಷಧಿಗಳ ಮೂಲಕ ಹೆರಿಗೆ ನೋವು ತಡೆದುಕೊಳ್ಳುವ ಶಕ್ತಿ ಬರುವಂತೆ ಮಾಡುತ್ತಿದ್ದರು.

ADVERTISEMENT

ತಾವು ಹೆರಿಗೆ ಸಂದರ್ಭದಲ್ಲಿ ಎದುರಿಸಿದ ಹಲವಾರು ಸವಾಲುಗಳನ್ನು ಮಹಿಳೆಯರೊಂದಿಗೆ ಹಂಚಿಕೊಳ್ಳುವ ಮೂಲಕ ಗರ್ಭಿಣಿಯರು ಯಾವ ರೀತಿ ಎಚ್ಚರ ವಹಿಸಿದರೆ, ಯಾವ ರೀತಿಯ ಆಹಾರ ಸೇವನೆ ಮಾಡುವುದರಿಂದ ಹೆರಿಗೆ ಸುಲಭವಾಗುತ್ತದೆ ಎನ್ನುವುದನ್ನು ಇಂದಿಗೂ ಹೇಳುತ್ತಲೇ ಇರುತ್ತಾರೆ. ಸೂಲಗಿತ್ತಿ ಕೆಲಸ ಹಣಕ್ಕಾಗಿ ಅಲ್ಲ; ಅದೊಂದು ರೀತಿ ಹೆಣ್ಣಿನ ಸೇವೆ ಎಂದೇ ಭಾವಿಸಿದ್ದವರು ಅಂಜಿನಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.