ADVERTISEMENT

ಮುಕ್ತಸಂಚಾರ; ಸೋಂಕಿನ ಪ್ರಕರಣ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 15:52 IST
Last Updated 2 ಜೂನ್ 2020, 15:52 IST
ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆಯಲ್ಲಿ ಕೊರೊನಾ ವಾರಿಯರ್ಸ್ ಗೆ ಮುಖಂಡರು ಅಭಿನಂದಿಸಿದರು
ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆಯಲ್ಲಿ ಕೊರೊನಾ ವಾರಿಯರ್ಸ್ ಗೆ ಮುಖಂಡರು ಅಭಿನಂದಿಸಿದರು   

ವಿಜಯಪುರ: ‘ಲಾಕ್‌ಡೌನ್‌ ನಂತರ ಮುಕ್ತ ಸಂಚಾರದಿಂದಾಗಿ ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿವೆ’ ಎಂದು ಬ್ಯಾಟರಾಯನಪುರ ಶಾಸಕ ಕೃಷ್ಣ ಭೈರೇಗೌಡ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆ ಗ್ರಾಮ ಪಂಚಾಯಿತಿ ವತಿಯಿಂದ ಕೊರೊನಾ ವಾರಿಯರ್ಸ್‌ಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಲಾಕ್ ಡೌನ್ ಆದ ನಂತರ ಸ್ಥಳೀಯ ಜನ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಕಠಿಣವಾದ ಸಮಯದಲ್ಲಿ ಜನರ ಆರ್ಥಿಕಮಟ್ಟ ಸುಧಾರಣೆ ಮಾಡುವುದರ ಬದಲಿಗೆ ಮುಕ್ತಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಬಂದಿರುವವರಿಂದಾಗಿ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಲೇ ಇವೆ. ಇದರಿಂದ ಜನರು ಸಾಕಷ್ಟು ಜಾಗೃತರಾಗಿರುವುದು ಅನಿವಾರ್ಯವಾಗಿದೆ. ಕೊರೊನಾ ವಾರಿಯರ್ಸ್ ತಮ್ಮ ಜೀವವನ್ನು ಒತ್ತೆಯಿಟ್ಟು ಕೆಲಸ ಮಾಡಿದ್ದಾರೆ. ಅವರನ್ನು ನಾವೆಲ್ಲರೂ ಅಭಿನಂದಿಸಲೇಬೇಕು’ ಎಂದರು.

ADVERTISEMENT

ಮುಖಂಡ ಹೊಸಕೋಟೆ ಸುಬ್ಬರಾಜು ಮಾತನಾಡಿ, ‘ದೇಶವೆಲ್ಲಾ ಸಂಕಷ್ಟದಲ್ಲಿರುವ ಸಮಯದಲ್ಲಿ ಕುಟುಂಬಗಳ ಕಡೆಗೂ ಗಮನಹರಿಸದೇ ತಮ್ಮ ಪ್ರಾಣಗಳನ್ನು ಲೆಕ್ಕಿಸದೇ ಮನೆ ಮನೆಗೆ ತೆರಳಿ ಜನರಲ್ಲಿ ಆತ್ಮಸ್ಥೈರ್ಯ ತುಂಬಿಸುವ ಮೂಲಕ ರೋಗವನ್ನು ನಿಯಂತ್ರಣ ಮಾಡಲಿಕ್ಕಾಗಿ ನಿರಂತರವಾಗಿ ಆಶಾ ಕಾರ್ಯಕರ್ತೆಯರು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯ ಸಿಬ್ಬಂದಿ ಈಗಲೂ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆಯನ್ನು ನಾವೆಲ್ಲರೂ ನೆನೆಸಿಕೊಳ್ಳಬೇಕು’ ಎಂದರು.

ಕಾಂಗ್ರೆಸ್ ನಾಯಕ ಮುನಿನರಸಿಂಹಯ್ಯ ಮಾತನಾಡಿ, ‘ಪ್ರಪಂಚದ ಅನೇಕ ದೇಶಗಳನ್ನು ಕಾಡುತ್ತಿರುವ ಕೊರೊನಾ ರೋಗವನ್ನು ನಿಯಂತ್ರಣ ಮಾಡಬೇಕಾದರೆ ಜನರು ಸ್ವಯಂ ಪ್ರೇರಿತರಾಗಿ ತಮ್ಮ ರಕ್ಷಣೆ ಮಾಡಿಕೊಳ್ಳಬೇಕು. ಜನಸಂದಣಿ ಇರುವ ಕಡೆಗಳಲ್ಲಿ ಸಂಚಾರಕ್ಕೆ ಕಡಿವಾಣ ಹಾಕಿಕೊಳ್ಳಬೇಕು. ಆರೋಗ್ಯ ಇಲಾಖೆ ಹಾಗೂ ಸರ್ಕಾರ ನೀಡುವಂತಹ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿದಾಗ ಮಾತ್ರವೇ ಸಾಧ್ಯವಾಗುತ್ತದೆ’ ಎಂದರು.

ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀನಾರಾಯಣಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಭಾರತಿ ಲಕ್ಷ್ಮಣಗೌಡ, ಚೈತ್ರಾ ವೀರೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಶ್ರೀನಿವಾಸಗೌಡ, ಮುಖಂಡರಾದ ಚಿನ್ನಪ್ಪ, ಚೌಡಪ್ಪನಹಳ್ಳಿ ಲೋಕೇಶ್, ಹಿತ್ತರಹಳ್ಳಿ ರಮೇಶ್, ಲಕ್ಷ್ಮಣಗೌಡ, ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.