ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಸ್ವಾಧೀನ ವಿರೋಧಿಸಿ ನಡೆಯುತ್ತಿರುವ ಹೋರಾಟ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ಅಹೋರಾತ್ರಿ ಧರಣಿಯ 26ನೇ ದಿನವಾದ ಭಾನುವಾರ ವಿವಿಧ ಸಂಘಟನೆಗಳು ಬೆಂಬಲ ನೀಡಿ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿವೆ.
ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮತ್ತು ರೈತರು ಮುತ್ತಾನಲ್ಲೂರು ಗ್ರಾಮದಲ್ಲಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಸ್ಥಳಕ್ಕೆ ಆನೇಕಲ್ ತಾಲ್ಲೂಕಿನ ಮಹಿಳಾ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು ಮತ್ತು ಸಂಘ–ಸಂಸ್ಥೆಗಳು ಭೇಟಿ ನೀಡಿ ಬೆಂಬಲ ಸೂಚಿಸಿದವು. ಕೆಆರ್‌ಎಸ್ ಪಕ್ಷ ಪ್ರತಿಭಟನೆಯಲ್ಲಿ ಭಾಗಿ ರೈತ ಹೋರಾಟಕ್ಕೆ ಬೆಂಬಲ ನೀಡಿತು.
ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ, ತಾಲ್ಲೂಕಿನಲ್ಲಿ ಈಗಾಗಲೇ ಐದು ಕೈಗಾರಿಕಾ ಪ್ರದೇಶಗಳಿವೆ. ಈ ಕೈಗಾರಿಕಾ ಪ್ರದೇಶಗಳಲ್ಲಿ ಮೂಲ ಸೌಕರ್ಯ ಇಲ್ಲ. ಈಗ ಸರ್ಕಾರ ಮತ್ತೊಂದು ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಸರ್ಜಾಪುರ ಹೋಬಳಿಯ ಕೃಷಿ ಭೂಮಿಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಪ್ರಕ್ರಿಯೆ ನಡೆಸುತ್ತಿರುವುದು ಸರಿಯಲ್ಲ. ಇದನ್ನು ರೈತರು ಸಹಿಸುವುದಿಲ್ಲ. ಈ ಪ್ರಕ್ರಿಯೆಯನ್ನು ಕೈ ಬಿಡಬೇಕು ಇಲ್ಲವಾದಲ್ಲಿ ರೈತರ ಹೋರಾಟ ಮತ್ತಷ್ಟು ಉಗ್ರವಾಗುತ್ತದೆ ಎಂದು ಹೇಳಿದರು.
ಸರ್ಜಾಪುರ ಹೋಬಳಿ ಶೇಕಡ 80ರಷ್ಟು ರೈತರು ಕೃಷಿ, ತೋಟಗಾರಿಕೆ, ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಕೃಷಿಯ ಮೂಲಕ ಜೀವನವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ ಸರ್ಕಾರ ಕೈಗಾರಿಕೆ ಹೆಸರಿನಲ್ಲಿ ಹಸಿರು ಭೂಮಿ ಸ್ವಾಧೀನ ಒಪ್ಪಿಕೊಳ್ಳಲು ಆಗುವುದಿಲ್ಲ. ಸರ್ಕಾರ ರೈತರ ಪರವಾಗಿರಬೇಕು ಎಂದರು.
ಗಮನ ಮಹಿಳಾ ಒಕ್ಕೂಟದ ಮಮತಾ ಯಜಮಾನ್, ‘ದೇಶಕ್ಕೆ ಅನ್ನ ನೀಡುವ ರೈತನನ್ನು ಯಾವುದೇ ಕಾರಣಕ್ಕೂ ಸರ್ಕಾರ ನೋಯಿಸಬಾರದು. ರೈತರ ಪರವಾಗಿ ಮಹಿಳಾ ಸಂಘಟನೆಗಳು ದಲಿತ ಪರ ಸಂಘಟನೆಗಳು ಕನ್ನಡ ಪರ ಸಂಘಟನೆಗಳು ನಿಲ್ಲಲಿವೆ. ಎಲ್ಲಾ ಸಂಘಟನೆಗಳು ಒಗ್ಗೂಡಿ ಸಂಯುಕ್ತ ಹೋರಾಟವನ್ನು ರೂಪಿಸಿ ನಮ್ಮ ಭೂಮಿಯನ್ನು ನಾವು ಉಳಿಸಿಕೊಳ್ಳುತ್ತೇವೆ’ ಎಂದರು.
ವಿಶ್ವನಾಥ್ ರೆಡ್ಡಿ, ಚಿನ್ನಪ್ಪ ಚಿಕ್ಕಹಾಗಡೆ, ಕೇಶವ, ನಾರಾಯಣ ರೆಡ್ಡಿ, ಗೋಪಾಲ್ ರೆಡ್ಡಿ, ಹರೀಶ್, ನಾಗೇಶ್, ನರೇಂದ್ರಬಾಬು, ರಾಧಾ, ಮಧುಸೂದನ್, ರಾಜೇಶ್, ಪದ್ಮಮ್ಮ, ವಿಜಯ್ ರೆಡ್ಡಿ, ಹರೀಶ್ ಕುಮಾರ್, ವಸುಂದರ್, ವೆಂಕಟೇಶ್ ರೆಡ್ಡಿ, ಚನ್ನವೀರ, ಶಿವಕುಮಾರ್, ರವಿಶಂಕರ್, ಪುಷ್ಪಲತಾ, ಸತೀಶ್, ಅಶೋಕ್, ಉಮಾ, ಮಂಜುಳಾ ಇದ್ದರು.
ಪ್ರತಿಭಟನೆಯಲ್ಲಿ ಮೊಳಗಿದ ಕ್ರಾಂತಿಗೀತೆ
ನಿಲ್ಲಿದ ಭೂತಾಯಿ ರೈತರ ಶೋಷಣೆ
ತಾಲ್ಲೂಕಿನಲ್ಲಿ ಎರಡು ದಶಕದಿಂದ ರೈತರ ಮೇಲಿನ ಮತ್ತು ರೈತರ ಭೂಮಿಯ ಮೇಲಿನ ಶೋಷಣೆ ನಡೆಯುತ್ತಿದೆ. ಕರ್ನಾಟಕ ಗೃಹ ಮಂಡಳಿ ರಾಷ್ಟ್ರೀಯ ಹೆದ್ದಾರಿ ರೈಲ್ವೇ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳಿಂದ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿದ್ದಾರೆ. ಕೃಷಿ ಭೂಮಿಯನ್ನು ಕಿತ್ತು ಕೈಗಾರಿಕೆಗಳಿಗೆ ನೀಡುವ ಸರ್ಕಾರದ ಕ್ರಮ ಖಂಡನೀಯ ಎಂದು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಅಭಿಪ್ರಾಯ ಕೇಳಿದ್ದೀರಾ?
ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಗೂ ಮುನ್ನ ರೈತರ ಅಭಿಪ್ರಾಯ ಕೇಳಬೇಕಾಗಿತ್ತು. ಈ ಮಣ್ಣಿನ ಫಲವತ್ತತೆಯ ಬಗ್ಗೆ ಪರೀಕ್ಷೆ ನಡೆಸಬೇಕಿತ್ತು. ಸಾಮಾಜಿಕ ಮತ್ತು ಪರಿಸರ ವರದಿಯನ್ನು ಪಡೆಯದೆ ಏಕಾಯಕಿ ಕೈಗಾರಿಕೆಗಳನ್ನು ನಿರ್ಮಿಸುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂಬ ಪ್ರಶ್ನೆ ಮೂಡಿದೆ. ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಕೆಲಸ ಸಿಗುತ್ತಿಲ್ಲ. ಈಗ ಮತ್ತೊಂದು ಕೈಗಾರಿಕೆ ಮಾಡುತ್ತಿರುವುದರಿಂದ ಉಪಯೋಗವಿಲ್ಲ ಗಮನ ಮಹಿಳಾ ಒಕ್ಕೂಟದ ಮಮತಾ ಯಜಮಾನ್ ತಿಳಿಸಿದರು.
ಈ ನೆಲ ಈ ಜಲ ಈ ಮಣ್ಣು ನಮ್ಮದು..
ಅಹೋರಾತ್ರಿ ಧರಇಯಲ್ಲಿ ರೈತ ಗೀತೆ ಮತ್ತು ಕ್ರಾಂತಿ ಗೀತೆಗಳು ಆಡುವ ಮೂಲಕ ಮಹಿಳಾಪರ ಸಂಘಟನೆಗಳು ರೈತರಿಗೆ ಬೆಂಬಲ ಘೋಷಿಸಿದವು. ‘ಮಾತನಾಡಣ್ಣಯ್ಯ ಮಾತನಾಡು ನಮ್ಮ ಭೂಮಿ ನಮ್ಮ ಹಕ್ಕು ಮಾತನಾಡು’ ಎಂಬ ಗೀತೆ ರೈತರಿಗೆ ಸ್ಪೂರ್ತಿ ನೀಡಿತು.
‘ಈ ನೆಲ ಈ ಜಲ ಈ ಮಣ್ಣು ನಮ್ಮದು’ ಎಂಬ ರೈತ ಮತ್ತು ಕ್ರಾಂತಿ ಗೀತೆಗಳು ಹಾಡುವ ಮೂಲಕ ರೈತರು ತಮ್ಮ ಹಕ್ಕು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.