ಹೊಸಕೋಟೆ: ಗ್ರಾಮೀಣ ಭಾಗದಲ್ಲಿ ಕಸದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗೆ ಒಂದರಂತೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಸ ಸಂಗ್ರಹ ಘಟಕಗಳನ್ನು ನಿರ್ಮಿಸಿದ್ದರೂ ಬಳಕೆಯಾಗದೆ ಶಿಥಿಲವಾಗುತ್ತಿವೆ.
ತಾಲ್ಲೂಕಿನಲ್ಲಿ 28 ಗ್ರಾಮ ಪಂಚಾಯಿತಿಗಳ ಪೈಕಿ ಮೂರು ಪಂಚಾಯಿತಿಗಳಲ್ಲಿ ಹೊರತುಪಡಿಸಿ 25 ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳು ಸ್ಥಾಪನೆಯಾಗಿವೆ. ಸಿಬ್ಬಂದಿಗೆ ತರಬೇತಿ ನೀಡಿ ನೇಮಿಸಲಾಗಿದೆ. ದೇವನಗೊಂಡಿ, ಹೆತ್ತಕ್ಕಿ ಮತ್ತು ದೊಡ್ಡಗಟ್ಟಿಗನಬ್ಬೆ ಗ್ರಾಮ ಪಂಚಾಯಿತಿಗಳಲ್ಲಿ ಘಟಕಗಳಿಲ್ಲ.
ಎಲ್ಲೆಂದರಲ್ಲಿ ಕಸ ರಾಶಿ: ಗ್ರಾಮೀಣ ಭಾಗದಲ್ಲಿಯೂ ಕಸದ ಸಮಸ್ಯೆ ನಿವಾರಿಸುವ ಸಲುವಾಗಿ ಕಸದ ವೈಜ್ಞಾನಿಕ ವಿಲೇವಾರಿಗಾಗಿ ಸರ್ಕಾರ ಯೋಜನೆಗಳನ್ನು ಹಾಕಿಕೊಂಡು ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಿದೆ. ಆದರೆ ಅವುಗಳ ಸದ್ಬಳಕೆ ಮಾಡಿಕೊಳ್ಳುವಲ್ಲಿ ಗ್ರಾಮ ಪಂಚಾಯಿತಿಗಳೇ ವಿಫಲವಾಗಿವೆ. ಬಹುತೇಕ ತ್ಯಾಜ್ಯ ವಿಲೇವಾರಿ ಘಟಕಗಳು ಒಂದೆಡೆ ಶಿಥಿಲವಾಗುತ್ತಿದ್ದರೆ, ಮತ್ತೊಂದೆಡೆ ಇತರೆ ಚಟುವಟಿಕೆಗಳಿಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಉತ್ಪತ್ತಿಯಾಗುತ್ತಿರುವ ಕಸವನ್ನು ಗ್ರಾಮಗಳ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ತಂದು ಸುರಿಯುತ್ತಿದ್ದಾರೆ.
ಘಟಕದ ಪಕ್ಕದಲ್ಲಿ ಕಸಕ್ಕೆ ಬೆಂಕಿ: ತಾಲ್ಲೂಕಿನ ಬಹುತೇಕ ತ್ಯಾಜ್ಯ ವಿಲೇವಾರಿ ಘಟಕಗಳ ಬಳಿಗೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಕೊಂಡೊಯ್ದು ಪಕ್ಕದಲ್ಲಿಯೇ ಸುರಿದು ಬೆಂಕಿ ಹಾಕಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ತ್ಯಾಜ್ಯ ಸಂಗ್ರಹಿಸುವ ವೇಳೆ ವೈಜ್ಞಾನಿಕವಾಗಿ ಸಂಗ್ರಹಿಸಿ, ವಿಲೇವಾರಿ ಮಾಡಬೇಕು. ಆದರೆ ಬಹುತೇಕ ಕಡೆಗಳಲ್ಲಿ ಕಸ ಸಂಗ್ರಹ ಸಹ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ದೂರುತ್ತಾರೆ ಸ್ಥಳೀಯರು.
ಗ್ರಾಮೀಣ ಭಾಗದ ಜನರಿಗೆ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವಿಧಾನವನ್ನು ಕಲಿಸಬೇಕಿದೆ. ವೈಜ್ಞಾನಿಕವಾಗಿ ಸಂಗ್ರಹಿಸಿ ಸ್ವಚ್ಛತೆ ಕಾಪಾಡುವ ಸರ್ಕಾರದ ಉದ್ದೇಶ ಈಡೇರಿಸುವಂತಾಗಬೇಕು.ಸುರೇಶ್ ಉಪ ನಿರ್ದೇಶಕ ಎಂಜಿಎನ್‌ಆರ್‌ಇಜಿಎ
ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸದ್ಬಳಕೆಗೆ ಸಾರ್ವಜನಿಕರಲ್ಲಿ ಅರಿವು ಉಂಟಾಗಬೇಕು. ಅದಕ್ಕಾಗಿ ಗ್ರಾ.ಪಂ ನಿಂದ ಸಿದ್ಧತೆ ನಡೆದಿದೆ. ಕಸ ವಿಲೇವಾರಿಗಾಗಿ ನೇಮಿಸಿರುವ ಸಿಬ್ಬಂದಿಗೆ ತರಬೇತಿ ನೀಡಿದ್ದೇವೆ. ಕಸ ನೀಡಲು ಸಾರ್ವಜನಿಕರು ಮುಂದೆ ಬರಬೇಕಿದೆ.ಕುರುಬರಹಳ್ಳಿ ವೆಂಕಟೇಶ್ ಕುಂಬಳಹಳ್ಳಿ ಗ್ರಾ.ಪಂ ಉಪಾಧ್ಯಕ್ಷ
ಇತ್ತೀಚೆಗೆ ಗ್ರಾಮೀಣ ಭಾಗದಲ್ಲಿ ಕಸದ ಪ್ರಮಾಣ ಹೆಚ್ಚಾಗುತ್ತಿದೆ. ವಿಲೇವಾರಿಗೆ ಘಟಕಗಳನ್ನು ಮಾಡಿದ್ದರೂ ಕೆಲೆವೆಡೆ ಗ್ರಾಮಸ್ಥರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಲವೆಡೆ ಗ್ರಾ.ಪಂ. ಅಧಿಕಾರಿಗಳು ಸಿಬ್ಬಂದಿ ನಿರ್ಲಕ್ಷಿಸಿದ್ದಾರೆ.ಸತೀಶ್ ನಂದಗುಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.