ADVERTISEMENT

ವಿಜಯಪುರ: ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶ ಪಡೆಯಿರಿ

ಚನ್ನರಾಯಪಟ್ಟಣದ ಸರ್ಕಾರಿ ಶಾಲೆಗಳಿಗೆ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರ ಭೇಟಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 12:55 IST
Last Updated 10 ಜನವರಿ 2020, 12:55 IST
ಚನ್ನರಾಯಪಟ್ಟಣದಲ್ಲಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ ಪರಿಶೀಲನೆ ನಡೆಸಿದರು
ಚನ್ನರಾಯಪಟ್ಟಣದಲ್ಲಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ ಪರಿಶೀಲನೆ ನಡೆಸಿದರು   

ವಿಜಯಪುರ: ಜಿಲ್ಲೆಯಲ್ಲಿನ ಎಲ್ಲ ಸರ್ಕಾರಿ, ಅನುದಾನಿತ, ಖಾಸಗಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್.ಎಸ್.ಎಲ್.ಸಿ. ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವ ಮೂಲಕ ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ತರಬೇಕು ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ ಹೇಳಿದರು.

ಚನ್ನರಾಯಪಟ್ಟಣದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದ ಅವರು, ಶಾಲೆಯಲ್ಲಿನ ಮೂಲಸೌಕರ್ಯಗಳು, ಬಿಸಿಯೂಟ, ಸಿಬ್ಬಂದಿ, ಕಟ್ಟಡಗಳ ಗುಣಮಟ್ಟ ಸೇರಿದಂತೆ ಶಾಲೆಗಳ ಪ್ರಸ್ತುತ ಸ್ಥಿತಿಗತಿಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಅವರ ಸಂಖ್ಯೆ ಹೆಚ್ಚಿಸಬೇಕಾಗಿದೆ. ಫಲಿತಾಂಶ ಹೆಚ್ಚಿಸಲು ಅಗತ್ಯವಾಗಿರುವ ಎಲ್ಲ ಸಂಪನ್ಮೂಲಗಳನ್ನು ಸರ್ಕಾರ ಒದಗಿಸುತ್ತಿದೆ. ಶಿಕ್ಷಕರು ಪ್ರಾಮಾಣಿಕವಾಗಿ ಬದ್ಧತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು, ಉತ್ತಮ ಫಲಿತಾಂಶದ ಕಡೆಗೆ ಗಮನ ಕೇಂದ್ರೀಕರಿಸಬೇಕು ಎಂದರು.

ADVERTISEMENT

ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ವಿಶೇಷ ತರಗತಿ ಮಾಡುವುದರ ಜತೆಗೆ ಅವರ ಜತೆ ಮತ್ತು ಪೋಷಕರ ಜತೆಗೆ ಸಮಾಲೋಚನೆ ನಡೆಸಬೇಕು. ಈ ಮೂಲಕ ಹಿಂದುಳಿದಿರುವ ಮಕ್ಕಳೂ ಉತ್ತಮ ಫಲಿತಾಂಶ ಪಡೆದುಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಾಗಿರುವ ಸೌಕರ್ಯಗಳನ್ನು ಒದಗಿಸುವುದು ಮತ್ತು ಅವುಗಳಿಗೆ ನಿಗದಿತ ಸಮಯಕ್ಕೆ ಔಷಧಿಗಳು ಸರಬರಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಬೂದಿಗೆರೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ದಿನ್ನೂರು ವೆಂಕಟೇಶ್, ಮುಖಂಡರಾದ ದೊಡ್ಡಕುರುಬರಹಳ್ಳಿ ಹನುಮೇಗೌಡ, ಬಾಬು, ಮುಖ್ಯಶಿಕ್ಷಕ ನಾರಾಯಣಸ್ವಾಮಿ, ಸಹಶಿಕ್ಷಕಿ ಶೈಲಜಾ, ಆಂಜಿನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.