ADVERTISEMENT

ಚಿಹ್ನೆ ಪಡೆಯಲು ಅಂತಿಮ ಕಸರತ್ತು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 4:40 IST
Last Updated 20 ಡಿಸೆಂಬರ್ 2020, 4:40 IST
ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಮುಂದೆ ಚಿಹ್ನೆ ಹಂಚಿಕೆ ಸಂದರ್ಭದಲ್ಲಿ ಸೇರಿದ್ದ ಬೆಂಬಲಿಗರು
ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಮುಂದೆ ಚಿಹ್ನೆ ಹಂಚಿಕೆ ಸಂದರ್ಭದಲ್ಲಿ ಸೇರಿದ್ದ ಬೆಂಬಲಿಗರು   

ದೊಡ್ಡಬಳ್ಳಾಪುರ: ‘ಮೊದಲೇ ನಾಮಪತ್ರ ಸಲ್ಲಿಸಿದ್ದರೆ ನಾನು ಹೇಳಿದ್ದ ಚಿಹ್ನೆಯೇ ನಿನಗೆ ಸಿಕ್ಕಿರುತ್ತಿತ್ತು. ಚಿಹ್ನೆ ಮೇಲೆಯೇ ಅರ್ಧ ಗೆಲುವು ಖಚಿತ ಅಂತ ಹೇಳಬಹುದಾಗಿತ್ತು’ ತಾವು ಅಂದುಕೊಂಡ ಚಿಹ್ನೆ ಸಿಗದೆ ಇದ್ದುದ್ದರಿಂದ ಬೇಸರಗೊಂಡ ಬೆಂಬಲಿಗರೊಬ್ಬರು ಹೇಳುತ್ತಿದ್ದ ಈ ಮಾತುಗಳು ಕೇಳಿ ಬಂದಿದ್ದು ತಾಲ್ಲೂಕಿನ ಸಾಸಲು ಹೋಬಳಿ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ.

ಡಿ.27ರಂದು ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆ ದಿನವಾದ ಶನಿವಾರ ಬೆಳಿಗ್ಗೆಯಿಂದಲೂ ನಡೆದ ತೆರೆಮರೆ ಕಸರತ್ತಿಗೆ ಸಂಜೆ 3 ಗಂಟೆಗೆ ತೆರೆಬಿದ್ದಿದೆ.

ಅಂತಿಮವಾಗಿ ಚುನಾವಣ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳಿಗೆ ಮಧ್ಯಾಹ್ನ 3 ಗಂಟೆ ನಂತರ ಚಿಹ್ನೆಗಳ ಹಂಚಿಕೆ ಆರಂಭವಾಗಿತ್ತು. ಸಂಜೆ 5ಗಂಟೆವರೆಗೂ ಚುನಾವಣ ಕಣದಲ್ಲಿ ಉಳಿದಿದ್ದ ಅಭ್ಯರ್ಥಿಗಳಿಗೆ ಚಿಹ್ನೆಗಳ ಹಂಚಿಕೆ ನಡೆದೇ ಇತ್ತು. ಅಭ್ಯರ್ಥಿಗೆ ಯಾವ ಚಿಹ್ನೆ ಸಿಗಬಹುದು ಎನ್ನುವ ಕುತೂಹಲದಲ್ಲಿ ಬೆಂಬಲಿಗರು ಗ್ರಾಮ ಪಂಚಾಯಿತಿ ಕಾರ್ಯಾಲಯ ಮುಂದೆ ಗುಂಪುಗೂಡಿದ್ದ ದೃಶ್ಯ ಎಲ್ಲ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಸಾಮಾನ್ಯವಾಗಿ ಕಂಡು ಬಂತು.

ADVERTISEMENT

ಕಸಬಾ ಹೋಬಳಿ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿಯಲ್ಲೇ ಅತಿಹೆಚ್ಚು ಜನ ನಾಮಪತ್ರಗಳನ್ನು ಸಲ್ಲಿಸಿದ್ದು. ಹಲವು ರೀತಿ ಕಸರತ್ತಿನ ನಂತರ ಅಂತಿಮವಾಗಿ 99 ಜನ ಕಣದಲ್ಲಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷಕ್ಕಿಂತಲೂ ಸಂಬಂಧ, ಗ್ರಾಮದ ಜನರ ನಡುವಿನ ವಿಶ್ವಾಸವೇ ಗೆಲುವಿನ ಲೆಕ್ಕಾಚಾರದಲ್ಲಿ ಮೇಲುಗೈ. ಹೀಗಾಗಿ ಎದುರಾಳಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯುವಂತೆ ಮನವೊಲಿಸುವ ಕಸರತ್ತಿನಲ್ಲಿ ಮಹಿಳೆಯರು ಹೆಚ್ಚಿನ ಪಾತ್ರ ವಹಿಸಿದ್ದು ಕಂಡು ಬಂತು.

ಕಸಬಾ ಹೋಬಳಿ, ಮಧುರೆ ಹೋಬಳಿ ಹಾಗೂ ದೊಡ್ಡಬೆಳವಂಗಲ ಹೋಬಳಿಗೆ ಹೋಲಿಕೆ ಮಾಡಿದರೆ ಸಾಸಲು ಹೋಬಳಿಯ ಗ್ರಾಮ ಪಂಚಾಯಿತಿಗಳಲ್ಲಿ ನಾಮಪತ್ರ ಸಲ್ಲಿಕೆ ಪ್ರಮಾಣ ಕಡಿಮೆಯಾಗಿತ್ತು. ಹಾಗೆಯೇ ಈ ಪಂಚಾಯಿತಿ ವ್ಯಾಪ್ತಿಗಳಲ್ಲೇ ಹೆಚ್ಚಿನ ಜನ ನಾಮಪತ್ರಗಳನ್ನು ಹಿಂದಕ್ಕೆ ಪಡೆದಿದ್ದಾರೆ.

ಕಣದಲ್ಲಿ ಉಳಿದ ಅಭ್ಯರ್ಥಿಗಳ ಸಂಖ್ಯೆ:


ಕಣದಲ್ಲಿ ಉಳಿದ ಅಭ್ಯರ್ಥಿಗಳು
ಕಸಬಾ ಹೋಬಳಿ;303
ದೊಡ್ಡಬೆಳವಂಗಲ ಹೋಬಳಿ;238
ಸಾಸಲು ಹೋಬಳಿ;188
ತೂಬಗೆರೆ ಹೋಬಳಿ;223
ಮಧುರೆ ಹೋಬಳಿ;181

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.