ADVERTISEMENT

‘ಹೆಣ್ಣು ಮಕ್ಕಳು ಕನಿಷ್ಠ ಶಿಕ್ಷಣ ಪಡೆದುಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 13:04 IST
Last Updated 5 ಸೆಪ್ಟೆಂಬರ್ 2019, 13:04 IST
ವಿಜಯಪುರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮಕ್ಕಳಿಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಸೈಕಲ್‌ ವಿತರಣೆ ಮಾಡಿದರು  
ವಿಜಯಪುರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮಕ್ಕಳಿಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಸೈಕಲ್‌ ವಿತರಣೆ ಮಾಡಿದರು     

ವಿಜಯಪುರ: ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಕನಿಷ್ಠ ಪದವಿವರೆಗಾದರೂ ಶಿಕ್ಷಣ ಪಡೆದುಕೊಳ್ಳಬೇಕು. ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರ ನೀಡುತ್ತಿರುವ ಎಲ್ಲ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳುವ ಕಡೆಗೆ ವಿದ್ಯಾರ್ಥಿಗಳು ಚಿಂತನೆ ನಡೆಸಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಹೆಣ್ಣು ಮಕ್ಕಳು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮಕ್ಕಳಿಗೆ ಗುರುವಾರ ಸೈಕಲ್‌ ವಿತರಣೆ ಮಾಡಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳು ಪ್ರಾಥಮಿಕ ಹಂತ ಮುಗಿದ ಮೇಲೆ ಪ್ರೌಢ ಶಿಕ್ಷಣದಿಂದ ವಂಚಿತರಾಗಬಾರದು. ಸಾರಿಗೆ ವ್ಯವಸ್ಥೆ ಇಲ್ಲ ಎನ್ನುವ ಕಾರಣಕ್ಕೆ ಮಕ್ಕಳು ಮನೆಯಲ್ಲೆ ಉಳಿಯಬಾರದು ಎನ್ನುವ ಕಾರಣಕ್ಕಾಗಿ 8 ನೇ ತರಗತಿ ಮಕ್ಕಳಿಗೆ ಉಚಿತವಾಗಿ ಸೈಕಲ್ ವಿತರಣೆ ಮಾಡಲಾಗುತ್ತಿದೆ ಎಂದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ ಮಾತನಾಡಿ, ಮಕ್ಕಳು ಸೈಕಲ್ ತುಳಿದುಕೊಂಡು ಬರುವಾಗ ರಸ್ತೆಗಳಲ್ಲಿ ಜಾಗ್ರತೆವಹಿಸಬೇಕು. ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ನೀವು ಶಾಲೆಗಳಲ್ಲಿ ತಿಳಿದುಕೊಳ್ಳಬೇಕು. ಅಡ್ಡಾದಿಡ್ಡಿಯಾಗಿ ತುಳಿಯಬಾರದು. ಮುಖ್ಯವಾಗಿ ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಬಾರದು ಎನ್ನುವ ಕಾರಣಕ್ಕೆ ಸೈಕಲ್‌ ವಿತರಣೆ ಮಾಡುವ ಚಿಂತನೆ ನಡೆಸಿರುವ ಸರ್ಕಾರದ ಆಶಯ ನೆರವೇರಿಸುವಂತಹ ಮಕ್ಕಳಾಗಬೇಕು ಎಂದರು.

ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಮುನಿರಾಜು, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್. ಭಾಸ್ಕರ್, ಬಾಲಕಿಯರ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಂಡಿಗಾನಹಳ್ಳಿ ನಾರಾಯಣಸ್ವಾಮಿ, ಮುಖ್ಯಶಿಕ್ಷಕ ಕೃಷ್ಣಮೂರ್ತಿ, ಶಾಲಾಭಿವೃದ್ಧಿ ಸಮಿತಿ ಸದಸ್ಯೆ ಭಾರತಿ ಪ್ರಭುದೇವ್, ಮುಖಂಡರಾದ ಎಸ್. ರಿಯಾಜ್, ಸದಾಶಿವಯ್ಯ, ಕೆಂಚೇಗೌಡ, ಭೈರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.