ADVERTISEMENT

ವೈಭವದ ಹನುಮ ಜಯಂತಿ

ಬನಹಳ್ಳಿ: ನಮ್ಮ ಗ್ರಾಮ-–ಸಾಮರಸ್ಯ ಗ್ರಾಮ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 5:09 IST
Last Updated 7 ಡಿಸೆಂಬರ್ 2022, 5:09 IST
ಆನೇಕಲ್‌ ತಾಲ್ಲೂಕಿನ ಬನಹಳ್ಳಿಯ ದಕ್ಷಿಣಾಭಿಮುಖ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ಬೃಹತ್ ಆಂಜನೇಯ ಸ್ವಾಮಿ ಮೂರ್ತಿಗೆ ಆಕರ್ಷಕ ಅಲಂಕಾರ ಮಾಡಲಾಗಿತ್ತು
ಆನೇಕಲ್‌ ತಾಲ್ಲೂಕಿನ ಬನಹಳ್ಳಿಯ ದಕ್ಷಿಣಾಭಿಮುಖ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ಬೃಹತ್ ಆಂಜನೇಯ ಸ್ವಾಮಿ ಮೂರ್ತಿಗೆ ಆಕರ್ಷಕ ಅಲಂಕಾರ ಮಾಡಲಾಗಿತ್ತು   

ಆನೇಕಲ್:ತಾಲ್ಲೂಕಿನ ಬನಹಳ್ಳಿ ಗ್ರಾಮದ ದಕ್ಷಿಣಾಭಿಮುಖ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯಿಂದ ಹನುಮ ಜಯಂತಿ ಆಚರಿಸಲಾಯಿತು. ‘ನಮ್ಮ ಗ್ರಾಮ-ಸಾಮರಸ್ಯ ಗ್ರಾಮ’ ಕಾರ್ಯಕ್ರಮ ಆಯೋಜಿಸಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು.

ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬನಹಳ್ಳಿ, ಚಂದಾಪುರ, ಸೂರ್ಯಸಿಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ಸ್ವಾಮಿಯ ದರ್ಶನ ಪಡೆದರು. ಬೆಳಿಗ್ಗಿನಿಂದ ರಾತ್ರಿವರೆಗೂ ಅನ್ನದಾಸೋಹ ಏರ್ಪಡಿಸಲಾಗಿತ್ತು.

ಸೋಮವಾರ ಸಂಜೆ ನಡೆದ ನಮ್ಮ ಗ್ರಾಮ ಸಾಮರಸ್ಯ ಗ್ರಾಮ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮದ ಮಹಿಳೆಯರು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಭಜನೆ ಮತ್ತು ಕೋಲಾಟ ವೀಕ್ಷಿಸಲು ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಗ್ರಾಮದಲ್ಲಿನ ಬೃಹತ್‌ ಆಂಜನೇಯ ಸ್ವಾಮಿ ಪ್ರತಿಮೆ, ಆಂಜನೇಯ ಸ್ವಾಮಿ ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ADVERTISEMENT

ಆರ್‌ಎಸ್ಎಸ್‌ನ ಪ್ರಮುಖ ಶಾಮ್‌ ಪ್ರಸಾದ್‌ ಮಾತನಾಡಿ, ಸಾಮರಸ್ಯ ಎಂಬುದು ಒಂದು ಗ್ರಾಮದ ಒಗ್ಗಟ್ಟಾಗಿದೆ. ಎಲ್ಲರೂ ಒಗ್ಗೂಡಿ ಆಚರಣೆ, ಸಂಸ್ಕೃತಿಯನ್ನು ಪಾಲಿಸುವುದರಿಂದ ಯುವಪೀಳಿಗೆಗೆ ಸಂಸ್ಕೃತಿಯ ಅರಿವು ಮೂಡುತ್ತದೆ ಎಂದು ಹೇಳಿದರು.

ರಾಮ ರಾಜ್ಯದ ಪರಿಕಲ್ಪನೆ ಸಾಧಿಸಲು ಗ್ರಾಮಗಳಲ್ಲಿ ಸಾಮರಸ್ಯ ಅತಿಮುಖ್ಯ. ಈ ನಿಟ್ಟಿನಲ್ಲಿ ಬನಹಳ್ಳಿಯಲ್ಲಿ ನಮ್ಮ ಗ್ರಾಮ ಸಾಮರಸ್ಯ ಗ್ರಾಮ ಎಂಬುದನ್ನು ಹನುಮ ಜಯಂತಿ ಮೂಲಕ ಸಾಬೀತುಪಡಿಸಿದ್ದಾರೆ. ಹನುಮನ ಸ್ವಾಮಿ ನಿಷ್ಠೆ ಮತ್ತು ಧೈರ್ಯ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಬೇಕು ಎಂದರು.

ಕರ್ನಾಟಕದ ನೆಲ ಬಸವಣ್ಣನ ಭೂಮಿಯಾಗಿದೆ. ಇಲ್ಲಿನ ಪ್ರತಿ ಗ್ರಾಮಗಳಲ್ಲಿಯೂ ಸಾಮರಸ್ಯ ಹೆಚ್ಚಾಗಬೇಕು. ತತ್ವ, ಆದರ್ಶದ ಜೀವನವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾದಾಗ ಗ್ರಾಮಗಳಲ್ಲಿ ಶಾಂತಿ, ನೆಮ್ಮದಿ ನೆಲಸಲು ಸಾಧ್ಯ ಎಂದು ತಿಳಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಬಿ.ಬಿ.ಐ. ಮುನಿರೆಡ್ಡಿ ಮಾತನಾಡಿ, ಗ್ರಾಮದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತವೆ. ಗ್ರಾಮದಲ್ಲಿ ಯುವಕರು, ಗ್ರಾಮಸ್ಥರು ಒಗ್ಗೂಡಿ ಸಾಮರಸ್ಯ ಗ್ರಾಮ ಎಂದು ಘೋಷಿಸಲಾಗಿದೆ. ಇದರಿಂದ ಎಲ್ಲರಲ್ಲೂ ಒಗ್ಗಟ್ಟು ಮೂಡುತ್ತದೆ. ಸಾಮರಸ್ಯ ಎಂಬುದು ಪ್ರತಿಯೊಂದು ಮನೆಗಳಲ್ಲಿಯೂ ಮೂಡಬೇಕು ಎಂದರು.

ಪುರಸಭಾ ಸದಸ್ಯ ಸೋಮಶೇಖರ ರೆಡ್ಡಿ, ಪ್ರಸನ್ನಕುಮಾರ್‌, ಮುಖಂಡರಾದ ಪ್ರವೀಣ್‌, ಮುರಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.