ADVERTISEMENT

ಹೊಸಕೋಟೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ: ಸವಾರರಿಗೆ, ಪಾದಚಾರಿಗಳಿಗೆ ಹೈರಾಣ

ವಾಹನ ಸವರಾರಿಗೆ ನಿತ್ಯ ತಪ್ಪದ ಕಿರಿಕಿರಿ । ಪ್ರಭಾವಿಗಳಿಗೆ ರಸ್ತೆಯೇ ಪಾರ್ಕಿಂಗ್ ಸ್ಥಳ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 2:23 IST
Last Updated 23 ಫೆಬ್ರುವರಿ 2026, 2:23 IST
<div class="paragraphs"><p>ಕಾರು ಚಾಲಕನಿಗಾಗಿ ಬಸ್ ನಿರ್ವಾಹಕ ಹುಡುಕಾಟದ ಸಂದರ್ಭ</p></div>

ಕಾರು ಚಾಲಕನಿಗಾಗಿ ಬಸ್ ನಿರ್ವಾಹಕ ಹುಡುಕಾಟದ ಸಂದರ್ಭ

   

ಹೊಸಕೋಟೆ: ನಗರ ರಾಜ್ಯ ರಾಜಧಾನಿ ಸಮೀಪದಲ್ಲಿ ಇರುವ ಕಾರಣ ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಇದರ ನಡುವೆ ಆಟೊ, ಕಾರು, ಬೈಕ್‌ಗಳು ವಾಹನ ನಿಲುಗಡೆ ಸ್ಥಳ ಬಿಟ್ಟು ರಸ್ತೆ ಮಧ್ಯೆಯಲ್ಲೇ ನಿಲುಗಡೆ ಮಾಡಲಾಗುತ್ತಿದೆ. ಈ ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ನಗರದ ಸಂಚಾರ ವ್ಯವಸ್ಥೆ ಅವ್ಯವಸ್ಥೆಯಾಗಿದ್ದು, ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಬಿಡಲು, ಸರ್ಕಾರಿ ಮತ್ತು ಖಾಸಗಿ ನೌಕರರು ಕಚೇರಿ ಮತ್ತು ಕಂಪನಿಗಳಿಗೆ ತೆರಳಲು ಹಾಗೂ ದಿನನಿತ್ಯದ ಕೆಲಸಗಳಿಗೆ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳಿಗೆ ಓಡಾಡುವ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.

ADVERTISEMENT

ನಗರದ ಜನಸಂಖ್ಯೆ ಲಕ್ಷಕ್ಕೂ ಅಧಿಕವಾಗಿದೆ. ಪ್ರತಿನಿತ್ಯ ವಾಹನಗಳ ಓಡಾಟದ ಸಂಖ್ಯೆಯಲ್ಲೂ ಗಣನೀಯ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಆದರೆ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಅನುಗುಣವಾಗಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲು ನಗರಸಭೆ ನಿರ್ಲಕ್ಷ್ಯವಹಿಸಿದೆ.

ಕೆಲವರು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಸವರಾರಿಗೆ ಮಾತ್ರವಲ್ಲ ಬಿಎಂಟಿಸಿ ಬಸ್ ಚಾಲರಿಗೂ ಸಮಸ್ಯೆಯಾಗುತ್ತಿದೆ. ಬಸ್ ನಿಲ್ಲಿಸಿ ನಿರ್ವಾಹಕರೇ ಕಾರಿನ ಮಾಲೀಕ ಎಲ್ಲಿ?, ಯಾವ ಅಂಗಡಿ ಅಥವಾ ಹೊಟೇಲ್ ನಲ್ಲಿದ್ದಾನೆಂದು ಹುಡುಕಾಡುತ್ತಾರೆ. ಆ ವಾಹನದ ಮಾಲೀಕ ಬಂದ ಬಳಿಕವೇ ಬಸ್‌ ಮುಂದೆ ಹೋಗಬೇಕು. ಇಷ್ಟಾದರೂ ಪೊಲೀಸರು ಅಡ್ಡಾದಿಡ್ಡಿ ವಾಹನ ನಿಲ್ಲಿಸುವವರ ಮೇಲೆ ಯಾವ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಕೆಬಿಎಂಎಸ್ ಮತ್ತು ಉರ್ದು ಶಾಲೆ ಮಕ್ಕಳು, ಪೋಷಕರು, ಶಿಕ್ಷಕರು ಶಾಲಾ ದ್ವಾರದ ಬಳಿ ನಿತ್ಯ ವಾಹನಗಳ ನಿಲುಗಡೆಯಿಂದ ರಸ್ತೆ ದಾಟಲು ತೊಂದರೆ ಆಗುತ್ತಿದೆ.

‘ಖಾಸಗಿ ವಾಹನಗಳ ಚಾಲಕರಿಗೆ ಕೆ.ಆರ್. ರಸ್ತೆಗೆ ಹೊಂದಿಕೊಂಡ ಕಾಂಪೌಂಡ್, ಶಾಲಾ ಪ್ರವೇಶ ದ್ವಾರ ಮತ್ತು ಆವರಣದಲ್ಲಿ ವಾಹನ ನಿಲ್ಲಿಸಬೇಡಿ ಎಂದು ಎಷ್ಟು ಬಾರಿ ವಿನಂತಿಸಿಕೊಂಡರು ನಮ್ಮ ಮೇಲೆ ಗಲಾಟೆಗೆ ಬರುತ್ತಾರೆ. ಇಲ್ಲವೇ ನಮ್ಮ ವಾಹನಗಳ ಟೈರ್‌ಗೆ ಮೊಳೆ ಅಥವಾ ಕಲ್ಲಿನಿಂದ ಗಿಚ್ಚುತ್ತಾರೆ ಅದಕ್ಕೆ ನಾವು ಯಾರಿಗೂ ದೂರು ಸಲ್ಲಿಸುತ್ತಿಲ್ಲ’ ಎಂದು ಶಿಕ್ಷಕರು ಅಳಲು ತೋಡಿಕೊಂಡರು.

ವಾಹನ ದಟ್ಟಣೆಗೆ ಕಾರಣ ಇದು: ‘ನಗರದ ರಸ್ತೆಗಳು ಮೊದಲೇ ಕಿರಿದಾಗಿವೆ ಅಂತಹದ್ದರಲ್ಲಿ ರಸ್ತೆಯ ಎರಡೂ ಬದಿಯಲ್ಲೂ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿರುವುದರಿಂದ ಬೆಳಗ್ಗೆ ಮತ್ತು ಸಂಜೆ ಸಂದರ್ಭದಲ್ಲಿ ಕಂಪನಿ ವಾಹನಗಳು, ಬೃಹತ್ ವಾಹನಗಳು ಹೆಚ್ಚಾಗಿ ಓಡಾಡುತ್ತಿರುತ್ತವೆ. ಅದರಲ್ಲೂ ಕಾರು, ಆಟೊಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಿರುವ ಕಾರಣ ವಾಹನ ದಟ್ಟಣೆ ಹೆಚ್ಚಾಗುತ್ತಿದೆ’ ಎನ್ನುತ್ತಾರೆ ಎ.ಕೆ. ಕಾಲೊನಿ ನಿವಾಸಿ ಮುನಿರಾಜು.

ನಗರದಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಹಾಗೂ ವಾಹನ ದಟ್ಟಣೆ ಉಂಟಾಗುತ್ತಿರುವ ಸ್ಥಳ ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು

-ವೆಂಕಟರಾಜು ಸಿಐಟಿಯು ಮುಖಂಡ

***

ಎಲ್ಲೆಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ?

ನಗರದ ಕೆಇಬಿ ಸರ್ಕಲ್‌ನಿಂದ ಬಸವೇಶ್ವರ ಸರ್ಕಲ್ ವರೆಗೆ ಗಂಗಮ್ಮ ಗುಡಿ ರಸ್ತೆ ಕೆಇಬಿ ವೃತ್ತದಿಂದ ಸರ್ಕಾರಿ ಬಾಲಕರ ಪಿಯು ಕಾಲೇಜುವರೆಗೆ ಬಸವೇಶ್ವರ ವೃತ್ತದಿಂದ ರಾಘವೇಂದ್ರ ಟಾಕೀಸ್ ವೃತ್ತ ಚನ್ನಭೈರೇಗೌಡ ಕ್ರೀಡಾಂಗಣದಿಂದ ರಾಘವೇಂದ್ರ ವೃತ್ತ ಮೋರ್ ಸರ್ಕಲ್ ನಿಂದ ಓಂಶ್ರೀ ಸರ್ಕಲ್ ಸಂಗೊಳ್ಳಿ ರಾಯಣ್ಣ ವೃತ್ತದ ವರೆಗೆ ಸಂತೆಗೇಟ್ ನಿಂದ ನಿಸರ್ಗ ಬಡಾವಣೆ ವರೆಗಿನ ಮಾಲೂರು ರಸ್ತೆ ಸಂತೆಗೇಟ್ ನಿಂದ ಸಿದ್ದಾರ್ಥ ನಗರ ವೆರೆಗೆ ಹೊಸಕೋಟೆ ಮತ್ತು ಕೋಲಾರ ರಾಷ್ಟ್ರೀಯ ಹೆದ್ದಾರಿ–75ರ ಮುಖ್ಯ ರಸ್ತೆ ಮತ್ತು ಸರ್ವಿಸ್ ರಸ್ತೆಯಲ್ಲಿ ಟೋಲ್‌ನಿಂದ ಗೌತಮ್ ಕಾಲೊನಿವರೆಗೂ ವಾಹನ ನಿಲುಗಡೆ ಮಾಡಿ ಅಪಘಾತಗಳಿಗೆ ಆಹ್ವಾನ ನಿಡುವಂತ ವಾತಾವರಣ ಸೃಷ್ಟಿಸಲಾಗಿದೆ. ಆದರೂ ನಗರಸಭೆ ಹಾಗೂ ಪೊಲೀಸರು ಕೈಕಟ್ಟಿ ಕುಳಿತಿದ್ದಾರೆ.

ಆಂಬುಲೆನ್ಸ್ ಪರದಾಟ

ನಗರದ ದೊಡ್ಡಗಟ್ಟಿಗನಬ್ಬೆ ಮತ್ತು ಕೆ.ಆರ್. ರಸ್ತೆಗಳು ಕಿರಿದಾಗಿವೆ. ಆದರೂ ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಆಂಬುಲೆನ್ಸ್‌ಗಳು ವಾಹನ ದಟ್ಟಣೆಯಲ್ಲಿ ಸಿಲುಕಿಕೊಂಡು ಪರದಾಡುವಂತಾಗಿದೆ. ಬೇಕಾಬಿಟ್ಟಿ ವಾಹನ ನಿಲುಗಡೆ ಹಾಗೂ ವಾಹನ ದಟ್ಟಣೆಯಿಂದ ರೋಗಿಗಳನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಗದೆ ರಸ್ತೆಯಲ್ಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಂಬುಲೆನ್ಸ್‌ ಚಾಲಕರು ಬೇಸರ ವ್ಯಕ್ತಪಡಿಸಿದ್ದಾರೆ. ಪೊಲೀಸರ ಅಳಲು  ವಾಹನ ದಟ್ಟಣೆ ನಿಯಂತ್ರಣೆ ಜವಾಬ್ದಾರಿ ಪೊಲೀಸರ ಮೇಲೆ ಎಷ್ಟು ಇರುತ್ತದಯೋ ಅಷ್ಟೇ ಜವಾಬ್ದಾರಿ ಸಾರ್ವಜನಿಕರ ಮೇಲೂ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವುದಲ್ಲದೆ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. ತಮಗಿಷ್ಟ ಬಂದ ಹಾಗೆ ವಾಹನ ಓಡಿಸುವ ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ನಿಲ್ಲಿಸುವ ಸಂಸ್ಕೃತಿ ಹೆಚ್ಚಾಗುತ್ತಿದೆ ಎಂದು ಪೊಲೀಸರೇ ಹೇಳುವ ಪರಿಸ್ಥಿತಿಗೆ ಯಾರು ಕಾರಣರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎನ್ನುತ್ತಾರೆ ಸ್ಥಳೀಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.