ಆನೇಕಲ್: ಸಂಘದ ಸದಸ್ಯರು ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಸುಸಜ್ಜಿತ ಸೌಲಭ್ಯ ಕಲ್ಪಿಸಲು ನೂತನ ಕಟ್ಟಡ ಅವಶ್ಯಕ ಇದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲಿ ನೂತನ ಕಟ್ಟಡಕ್ಕೆ ಭೂಮಿ ಪೂಜೆ ಸಲ್ಲಿಸಲಾಗುವುದು ಎಂದು ಹೆನ್ನಾಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಬಾಬುರೆಡ್ಡಿ ತಿಳಿಸಿದರು.
ತಾಲ್ಲೂಕಿನ ಕಾಚನಾಯಕನಹಳ್ಳಿಯ ಹೆನ್ನಾಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಶುಕ್ರವಾರ ಮಾತನಾಡಿದರು.
ಸಹಕಾರ ಸಂಘದಿಂದ ರೈತರಿಗೆ ಮತ್ತು ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಲಾಭವಿದೆ. ಸಹಕಾರ ಸಂಘಗಳಿಂದ ಸಾಲ ಪಡೆದವರು ಸಸುದ್ದೇಶಗಳಿಗೆ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸಾಲ ಮರುಪಾವತಿ ಮಾಡುವ ಮೂಲಕ ಮತ್ತೊಬ್ಬರಿಗೆ ಸಾಲ ದೊರೆಯುವಂತೆ ಮಾಡಬೇಕು ಎಂದರು.
ಬಮೂಲ್ ನಿರ್ದೇಶಕ ಆರ್.ಕೆ.ರಮೇಶ್, ಕೃಷಿ ಪತ್ತಿನ ಸಹಕಾರ ಸಂಘಗಳು ಸಹಕಾರ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ತಾಲ್ಲೂಕಿನಲ್ಲಿ ಹೈನುಗಾರಿಕೆ ಸಹ ಕಡಿಮೆಯಾಗುತ್ತಿದೆ. ರೈತರು ಕೃಷಿಯಲ್ಲಿ ಲಾಭ ಗಳಿಸಲು ರಾಸುಗಳನ್ನು ಹೆಚ್ಚು ಮಾಡಿಕೊಳ್ಳಬೇಕು. ಬಮೂಲ್ ವತಿಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೆ.ಎಸ್.ನಟರಾಜ್, ಸೋಮಶೇಖರರೆಡ್ಡಿ, ಹೆನ್ನಾಗರ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ನಂಜಪ್ಪ, ನಿರ್ದೇಶಕರಾದ ಮರಿಸ್ವಾಮಿ, ನಂದಕುಮಾರ್, ಶ್ರೀರಾಮರೆಡ್ಡಿ, ಬಾಬುರೆಡ್ಡಿ, ಕೆಂಪೇಗೌಡ, ನಾಗರಾಜು, ತಿಪ್ಪೇಸ್ವಾಮಿ, ಪ್ರೇಮ, ನಾಗರತ್ನ, ಬಿಡಿಸಿಸಿ ಬ್ಯಾಂಕ್ ಮೇಲ್ವೀಚಾರಕ ಮಂಜುಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಹಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.