
ಆನೇಕಲ್: ತಾಲ್ಲೂಕಿನ ಹೆನ್ನಾಗರ ಯಲ್ಲಮ್ಮ ದೇವಿ ದೇವಾಲಯದಲ್ಲಿ ದೇವಿ ರಥೋತ್ಸವ ಶನಿವಾರ ವೈಭವದಿಂದ ನಡೆಯಿತು. ನೂರಾರು ಮಂದಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು.
ರಥೋತ್ಸವದ ಪ್ರಯುಕ್ತ ಶನಿವಾರ ದೇವಾಲಯದಲ್ಲಿ ದೇವಿಗೆ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು. ಜ್ಯೋತಿಲಿಂಗ ಸ್ವಾಮಿ ಗದ್ದಿಗೆಗೆ ಅಭಿಷೇಕ, ಹೋಮ ನೆರವೇರಿಸಲಾಯಿತು. ಮಧ್ಯಾಹ್ನ ಅಲಂಕೃತ ರಥದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅರ್ಚಕರು ಧಾರ್ಮಿಕ ಪೂಜೆ ನೆರವೇರಿಸಿದರು. ನಂತರ ಗುಮ್ಮಳಾಪುರ ಸಂಸ್ಥಾನ ಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.
ನೆರೆದಿದ್ದ ಭಕ್ತರು ದೇವಿಯ ಜಯಘೋಷ ಮಾಡುತ್ತಾ ದವನ ಚುಚ್ಚಿದ ಬಾಳೆಹಣ್ಣನ್ನು ರಥಕ್ಕೆ ಎಸೆದು ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಉಧೋ ಉಧೋ ಯಲ್ಲಮ್ಮ ಘೋಷಣೆ ಕೂಗಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ವೀರಗಾಸೆ, ತಮಟೆ, ಚಂಡೆ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ವೈಭವದ ಜಾತ್ರೆಗೆ ಮೆರುಗು ನೀಡಿದವು. ಮಹಿಳೆಯರು ಆಕರ್ಷಕ ಕೋಲಾಟ ಪ್ರದರ್ಶನ ನೀಡಿದರು.
ಹೆನ್ನಾಗರ ಗ್ರಾಮ ಪಂಚಾಯಿತಿ ಸೇರಿದಂತೆ ಜಿಗಣಿ ಹೋಬಳಿಯ ಸಾವಿರಾರು ಮಂದಿ ಭಕ್ತರು ವೈಭವದ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರು ದೇವಿಗೆ ಮಡಿಲಕ್ಕಿ ಅರ್ಪಿಸಿ, ತಮ್ಮ ಭಕ್ತಿ,ಭಾವ ಮೆರದರು.
ಜಾತ್ರೆಯ ಅಂಗವಾಗಿ ಬೆಳಗಿನಿಂದ ಸಂಜೆಯವರೆಗೂ ಅನ್ನದಾಸೋಹ ಏರ್ಪಡಿಸಲಾಗಿತ್ತು. ದೇವಾಲಯದ ಆವರಣದಲ್ಲಿ ಅರವಂಟಿಕೆಗಳನ್ನು ಸ್ಥಾಪಿಸಿ ನೀರು ಮಜ್ಜಿಗೆ ಪಾನಕ, ಕೋಸಂಬರಿ ವಿತರಣೆ ಮಾಡಲಾಯಿತು.
ಹೆನ್ನಾಗರ ಯಲ್ಲಮ್ಮ ದೇವಿ ದೇವಾಲಯವು ಎರಡನೇ ಸವದತ್ತಿಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಧಾರ್ಮಿಕ ಕಾರ್ಯಗಳಿಂದ ಗ್ರಾಮದಲ್ಲಿ ಶಾಂತಿ ನೆಮ್ಮದಿ ದೊರೆಯುತ್ತದೆಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜ ಗುಮ್ಮಳಾಪುರ ಸಂಸ್ಥಾನ ಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.