
ಆನೇಕಲ್: ಬೆಂಗಳೂರು ನಗರ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿಯಮಿತ (ಹಾಪ್‌ಕಾಮ್ಸ್)ದ ನಿರ್ದೇಶಕರ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಆನೇಕಲ್ ತಾಲ್ಲೂಕಿನ ಮೂವರು ಆಯ್ಕೆಯಾಗಿದ್ದಾರೆ.
ಆನೇಕಲ್ ತಾಲ್ಲೂಕಿನ ಎನ್. ದೇವರಾಜು, ಮೇಘ. ಆರ್. ತಿಲಕ್ ಕುಮಾರ್, ಎಚ್.ಕೆ.ನಾಗವೇಣಿ ಅವರು ಚುನಾಯಿತರಾಗಿದ್ದಾರೆ. ದೇವರಾಜು ಅವರು 93 ಮತಗಳು, ಮೇಘ.ಆರ್.ತಿಲಕ್ ಕುಮಾರ್ 98 ಮತ್ತು ನಾಗವೇಣಿ ಅವರು 101 ಮತಗಳನ್ನು ಪಡೆದು ಹಾಪ್‌ಕಾಮ್ಸ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಹಾಪ್‌ಕಾಮ್ಸ್ ನಿರ್ದೇಶಕಿ ಮೇಘ.ಆರ್.ತಿಲಕ್ ಕುಮಾರ್ ಮಾತನಾಡಿ, ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಮೂವರು ಆಯ್ಕೆಯಾಗಿದ್ದಾರೆ. ಹಾಪ್‌ಕಾಮ್ಸ್‌ನಲ್ಲಿ ರೈತಸ್ನೇಹಿ ಆಡಳಿತ ಮಂಡಳಿ ಸ್ಥಾಪಿಸಬೇಕು ಎಂಬುದು ನಮ್ಮ ಗುರಿ. ಹಾಪ್‌ಕಾಮ್ಸ್ ಮಳಿಗೆಗಳನ್ನು ಹೆಚ್ಚಿಸುವುದು ಸೇರಿದಂತೆ ಹಾಪ್‌ಕಾಮ್ಸ್ ಮೂಲಕ ರೈತಸ್ನೇಹಿ ಆಡಳಿತ ನೀಡಲಾಗುವುದು ಎಂದರು.
ಆನೇಕಲ್ ತಾಲ್ಲೂಕಿನಿಂದ ಮೂವರು ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಬಿಜೆಪಿ ಆನೇಕಲ್ ಅಧ್ಯಕ್ಷ ಎಸ್.ಆರ್.ಟಿ.ಅಶೋಕ್ ರೆಡ್ಡಿ, ದೊಡ್ಡಹಾಗಡೆ ಶಂಕರ್, ಜೆ.ನಾರಾಯಣಪ್ಪ, ಜಯಪ್ರಕಾಶ್, ಮಣಿಕಂಠ ಸೇರಿದಂತೆ ಇತರರು ಇದ್ದರು.