ಸೂಲಿಬೆಲೆ(ಹೊಸಕೋಟೆ): ಹೋಬಳಿಯ ಅತ್ತಿಬೆಲೆ ಬಳಿ ಮಳೆ–ಗಾಳಿಯಿಂದ ಆಲದ ಮರದಿಂದ ಮುರಿದು ರಸ್ತೆಗೆ ಬಿದ್ದಿದ್ದ ಬೃಹತ್ ರಂಬೆಗೆ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದು, ವಾಹನದಲ್ಲಿದ್ದ ಒಂದೇ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೋಬಳಿಯ ಅನುಪನಹಳ್ಳಿಯ ವಾಹನ ಚಾಲಕ ಅನಿಲ್, ಇವರ ಪತ್ನಿ ಭವಾನಿ, ಇವರ ಪುತ್ರರಾದ ಶಿವತೇಜಸ್ ಮತ್ತು ಪವನ್ ಗಾಯಗೊಂಡವರು. ವಾಹನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಬಾಳೆಹಣ್ಣು ವ್ಯಾಪಾರ ಮಾಡುತ್ತಿದ್ದ ಈ ಕುಟುಂಬ ಕೆ.ಆರ್. ಪುರಂಗೆ ಬಾಳೆಹಣ್ಣು ತರಲು ಬೆಳಗ್ಗೆಯೇ ಸರಕು ಸಾಗಣೆ ವಾಹನದಲ್ಲಿ ಹೋಗುತ್ತಿತು. ಭಾನುವಾರ ಮುಸುಕಿನ ಸುಮಾರು 3 ಗಂಟೆ ವೇಳೆಗೆ ಬೃಹತ್ ಕೊಂಬೆ ಮರಿದು ರಸ್ತೆಗೆ ಬಿದ್ದಿತ್ತು. ಇದೇ ರಸ್ತೆಯಲ್ಲಿ ಬಂದ ಸರಕು ಸಾಗಣೆ ವಾಹನ ಕೊಂಬೆಗೆ ಡಿಕ್ಕಿ ಹೊಡೆದಿದೆ. ಅಪಘಾತದ ಶಬ್ದದಿಂದ ಎಚ್ಚರಗೊಂಡ ಸ್ಥಳೀಯರು ಗಾಯಾಳುಗಳನ್ನು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಿಸಿದರು.
ತೀವ್ರವಾಗಿ ಗಾಯಗೊಂಡ ಅನಿಲ್ ಮನತ್ತು ಶಿವತೇಜಸ್ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭವಾನಿ, ಮತ್ತೊಬ್ಬ ಪುತ್ರ ಪವನ್ ಚೇತರಿಸಿಕೊಂಡಿದ್ದಾರೆ ಎಂದು ಸಿಲಿಕಾನ್ ಸಿಟಿ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.
ಅಪಘಾತ ಬಳಿಕ ಮರದ ರೆಂಬೆಯನ್ನು ಕ್ರೇನ್ ಮೂಲಕ ಗಿಡ್ಡಪನಹಳ್ಳಿ ಗ್ರಾಮಪಂಚಾಯಿತಿಯಿಂದ ತೆರವು ಗೊಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.