ADVERTISEMENT

ಹೊಸಕೋಟೆ: ಎಂಟಿಬಿ ಶಕ್ತಿ ಪ್ರದರ್ಶನ

5–6 ಕಿ.ಮೀ ಕಾರ್ಯಕರ್ತರ ದಂಡು l ಅಭಿಮಾನಿಗಳ ಜಯ ಘೋಷ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2023, 4:09 IST
Last Updated 18 ಏಪ್ರಿಲ್ 2023, 4:09 IST

ಹೊಸಕೋಟೆ: ಸೋಮವಾರ ಹೊಸಕೋಟೆ ನಗರ ಅಕ್ಷರಶಃ ರಾಜಕೀಯ ರಣ ಕಣವಾಗಿ ಮಾರ್ಪಾಡಾಗಿತ್ತು, ಶಾಸಕ ಶರತ್‌ ಬಚ್ಚೇಗೌಡ ನಾಮಪತ್ರ ಸಲ್ಲಿಸಿ ಹೊರನಡೆಯುತ್ತಿದ್ದಂತೆ ಭಾರಿ ಕಾರ್ಯಕರ್ತರ ದಂಡಿನೊಂಡಿಗೆ ಬಂದ ಸಚಿವ ಎಂಟಿಬಿ ನಾಗರಾಜ್‌ ಉಮೇದುವಾರಿಕೆ ಸಲ್ಲಿಸಿದರು.

ಇಬ್ಬರೂ ಜಿದ್ದಾಜಿದ್ದಿ ನಾಯಕರು ಒಂದೇ ಸಮಯದಲ್ಲಿ ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದರಿಂದ, ಅವರ ಬೆಂಬಲಿಗರನ್ನು ತಡೆದು, ಯಾವುದೇ ಅಹಿತಕರವಾದ ಘಟನೆಯಾಗದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಿದರು. ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳದಲ್ಲಿದ್ದು ಭದ್ರತೆಯ ಮೇಲುಸ್ತುವಾರಿ ನೋಡಿದರು.

ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚಿನ ಕಾರ್ಯಕರ್ತರನ್ನು ಬಿಜೆಪಿ ಕರೆತಂದು ಶಕ್ತಿ ಪ್ರದರ್ಶನಕ್ಕೆ ಹೊಸಕೋಟೆ ನಗರ ಸಾಕ್ಷಿಯಾಗಿತ್ತು, ಬಿಜೆಪಿಯ ಡಿಜೆ ಹಾಡಿನೊಂದಿಗೆ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಕಚೇರಿಯಿಂದ ಹೊರಟ ಯಾತ್ರೆಯೂ ಕೆಇಬಿ ಸರ್ಕಲ್ ಮೂಲಕ, ಸೂಲಿಬೆಲೆ ರಸ್ತೆಗೆ ಸಾಗಿತು.

ADVERTISEMENT

ನಂತರ ಎಂಟಿಬಿ ನಾಗರಾಜ್ ಅವಿಮುಕ್ತೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ ಬಸವೇಶ್ವರ ವೃತ್ತದ ಮೂಲಕ ತಾಲ್ಲೂಕು ಆಡಳಿತ ಸೌಧವನ್ನು ತಲುಪಿಸಿದರು.

ಇದೇ ವೇಳೆ ನಾಮಪತ್ರ ಸಲ್ಲಿಸಿ ಹೊರ ಬಂದ ಶರತ್ ಬಚ್ಚೇಗೌಡರನ್ನು ಕಂಡ ಬಿಜೆಪಿಗರು ಜೋರು ಡಿಜೆ ಹಾಕಿ ‘ಎಂಟಿಬಿ, ಎಂಟಿಬಿ, ಗೆಲ್ಲೋದೆ ಎಂಟಿಬಿ’ ಎಂದು ಜೋರು ಕೂಗು ಹಾಕಿದ್ದರು. ಚಿರಾಟ, ಕಿರುಚಾಟ ಆಗಸದೆತ್ತರಕ್ಕೆ ಕೇಳುವಂತಿತ್ತು. ಶರತ್‌ ಅಭಿಮಾನಿಗಳನ್ನು ಪೊಲೀಸರು ತಡೆದರೇ, ಎಂಟಿಬಿ ನಾಗರಾಜ್‌ ಅಭಿಮಾನಿಗಳನ್ನು ತಡೆಯಲು ಬಿಎಸ್‌ಎಫ್‌ ಸಿಬ್ಬಂದಿ ಎಕೆ 47 ಗನ್‌ ಹಿಡಿದು ತಡೆ ಗೋಡೆ ನಿರ್ಮಿಸಿದರು.

ಬಜಾರ್‌ ರಸ್ತೆಯಲ್ಲಿ ಜಮಾವಣೆಗೊಂಡಿದ್ದ ಶರತ್‌ ಅಭಿಮಾನಿಗಳು, ಎಂಟಿಬಿಯನ್ನು ಕಿಚ್ಚಾಯಿಸಲು ‘ಗೆಲ್ತನಪ್ಪ ಗೆಲ್ತನೇ ಶರತ್ ಬಚ್ಚೇಗೌಡ ಗೆಲ್ತನೇ’ ಎಂದು ಘೋಷಣೆ ಕೂಗಿದರು. ಶಾಸಕ ಶರತ್‌ ವಾಪಸ್ಸು ಆಗುತ್ತಿದ್ದಂತೆ ಬಂದ ಹುಮ್ಮಸ್ಸಿನಲ್ಲಿಯೇ ಜೈ ಕಾರ ಕೂಗುತ್ತಾ ಶಾಸಕರ ಕಚೇರಿ ಬಳಿಕೆ ಸಾಗಿದರು.

ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಬಿಡಿಸಿಕೊಂಡು ಹೊರ ಬರಲು ಸಾಹಸ ಪಟ್ಟ ಸಚಿವ ಎಂಟಿಬಿ ನಾಗರಾಜ್‌ ಅವರಿಗೆ ಅಲ್ಲಿದ್ದ ಬಿಎಸ್‌ಎಫ್‌ ಸಿಬ್ಬಂದಿ ಸಹಾಯ ಮಾಡಿದರು. ಅಭಿಮಾನಿಗಳತ್ತ ಕೈ ಬಿಸಿ ಸಾಗಿದ ಎಂಟಿಬಿ ತಾಲ್ಲೂಕು ಆಡಳಿತ ಸೌಧದ ಚುನಾವಣಾಧಿಕಾರಿ ಕಚೇರಿಗೆ ನಾಮಪತ್ರ ಸಲ್ಲಿಸಲು ಸಾಗಿದರು.

ಅವರೊಂದಿಗೆ ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ.ಸತೀಶ್, ದೊಡ್ಡ ಹುಲ್ಲೂರು ಸಿ.ಮಂಜುನಾಥ್, ಎಂಟಿಬಿ ಮಗ ನಿತೀಶ್ ಪುರುಷೋತ್ತಮ್ (ಎಂ.ಟಿ.ಬಿ ರಾಜೇಶ್) ಕಚೇರಿಯಲ್ಲಿ ಚುನಾವಣಾಧಿಕಾರಿ ಗಂಗಪ್ಪರ ಮುಂದೆ ಪ್ರಮಾಣ ವಚನ ಸಲ್ಲಿಸಿ, ಉಮೇದುವಾರಿಕೆ ಸಲ್ಲಿಸಿದರು.

ಈ ಬಾರಿಯ ಗೆಲುವು ಬಿಜೆಪಿಗೆ: ಉಪ ಚುನಾವಣೆಯ ವಾತಾವರಣ ಈ ಬಾರಿ ಇಲ್ಲ, ಈ ಬಾರಿ ಗೆಲುವು ಬಿಜೆಪಿಯದ್ದಾಗಲಿದೆ ಎಂದು ಎಂಟಿಬಿ ನಾಗರಾಜ್‌ ಹೇಳಿದರು.

ಸಂಸದ ಬಿ.ಎನ್. ಬಚ್ಚೇಗೌಡರು ಬಿಜೆಪಿ ಪಕ್ಷದ ಚಿಹ್ನೆ ಮೇಲೆ ಗೆದ್ದು, ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಮಾಡದೇ ಇದ್ದಲ್ಲಿ ರಾಜೀನಾಮೆ ಸಲ್ಲಿಸುವುದು ಉತ್ತಮ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.