ADVERTISEMENT

ಆನೇಕಲ್: ಗುಂಡಿಬಿದ್ದ ರಸ್ತೆಗಳು

ಗುಂಡಿಯಲ್ಲಿ ತುಂಬಿಕೊಂಡ ಮಳೆ ನೀರು l ವಾಹನ ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 4:28 IST
Last Updated 14 ಆಗಸ್ಟ್ 2025, 4:28 IST
ಆನೇಕಲ್‌–ಚಂದಾಪುರ ರಸ್ತೆಯಲ್ಲಿ ರಸ್ತೆ ಗುಂಡಿಯಿಂದಾಗಿ ನೀರು ನಿಂತಿರುವುದು
ಆನೇಕಲ್‌–ಚಂದಾಪುರ ರಸ್ತೆಯಲ್ಲಿ ರಸ್ತೆ ಗುಂಡಿಯಿಂದಾಗಿ ನೀರು ನಿಂತಿರುವುದು   

ಆನೇಕಲ್: ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಭಾರಿ ಗಾತ್ರದ ಗುಂಡಿಗಳು ಬಿದ್ದಿದ್ದು, ಸಾರ್ವಜನಿಕರು ಸಂಚರಿಸಲು ಹರಸಾಹಸ ಪಡುವ ದುಃಸ್ಥಿತಿ ಎದುರಾಗಿದೆ. 

ಬೃಹತ್ ಆಕಾರದ ಗುಂಡಿಗಳನ್ನು ತಪ್ಪಿಸಲು ಹೋಗಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಹಲವು ಘಟನೆಗಳು ನಡೆದಿವೆ. ರಸ್ತೆ ಗುಂಡಿಗಳನ್ನು ತಾತ್ಕಾಲಿಕವಾಗಿಯಾದರೂ, ಮುಚ್ಚಬೇಕು ಎಂಬುದು ಆನೇಕಲ್ ನಾಗರಿಕರ ಒತ್ತಾಯ.

ಚಂದಾಪುರ ಮತ್ತು ಜಿಗಣಿಯಿಂದ ಆನೇಕಲ್ ಪಟ್ಟಣಕ್ಕೆ ಬರುವವರಿಗೆ ಗುಂಡಿಗಳೇ ಸ್ವಾಗತ ಮಾಡುವಂತಿವೆ. ಚಂದಾಪುರದಿಂದ ಆನೇಕಲ್‌ಗೆ ಬರುವವರಿಗೆ ಗುಂಡಿ ತಪ್ಪಿಸಲು ಮತ್ತು ಗುಂಡಿಗಳ ಮಧ್ಯೆ ರಸ್ತೆ ಹುಡುಕುವ ಪರಿಸ್ಥಿತಿ ಇದೆ. ಆನೇಕಲ್‌—ಚಂದಾಪುರ, ಆನೇಕಲ್‌—ಹೊಸೂರು ರಸ್ತೆ, ಆನೇಕಲ್‌ ಮುಖ್ಯ ರಸ್ತೆಯಾದ ಜಯಲಕ್ಷ್ಮಿ ಚಿತ್ರ ಮಂದಿರ, ಮಿರ್ಜಾ ರಸ್ತೆಗಳಲ್ಲಿ ರಸ್ತೆ ಯಾವುದು,  ಗುಂಡಿ ಯಾವುದು ಎಂದು ಹುಡುವಂತಾಗಿದೆ. 

ADVERTISEMENT

ಗುಂಡಿಗಳು ವಿವಿಧ ದೇಶಗಳ ಭೂಪಟಗಳಂತಿದ್ದು, ಗುಂಡಿಗಳನ್ನು ತಪ್ಪಿಸಲು ಸಾಧ್ಯವಾಗದ ದ್ವಿಚಕ್ರ ವಾಹನ ಸವಾರರು ಹಿಡಿಶಾಪ ಹಾಕುತ್ತಾ ಸಂಚರಿಸುತ್ತಿದ್ದಾರೆ.

ಆನೇಕಲ್‌ಗೆ ಸ್ವಾಗತ ನೀಡುವ ಶಿವಾಜಿ ವೃತ್ತದಲ್ಲಿ ಹಲವು ದಿನಗಳಿಂದ ಗುಂಡಿ ಬಿದ್ದಿದ್ದು, ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಆನೇಕಲ್‌ನಿಂದ ಚಂದಾಪುರ, ಜಿಗಣಿ, ಹೊಸೂರು, ಅತ್ತಿಬೆಲೆಗೆ ಸಂಚರಿಸುವವರು ಮುಖ್ಯ ರಸ್ತೆಗಳನ್ನೇ ಅವಲಂಬಿಸಿದ್ದಾರೆ. ಆದರೆ, ಗುಂಡಿಮಯ ರಸ್ತೆಗಳಿಂದಾಗಿ ಈ ರಸ್ತೆಯಲ್ಲಿ ಯಾಕಾದರೂ ಬಂದೆವೊ ಎಂದು ನೊಂದುಕೊಳ್ಳುತ್ತಾರೆ. ಕಳೆದ ಹಲವು ದಿನಗಳಿಂದ ಮಳೆ ಸುರಿಯುತ್ತಿದ್ದು, ಗುಂಡಿಮಯ ರಸ್ತೆಗಳಲ್ಲಿ ನೀರು ತುಂಬಿದೆ. ಇದರಿಂದಾಗಿ ದ್ವಿಚಕ್ರ ವಾಹನಗಳಲ್ಲಿ ಬರುವವರು ಗುಂಡಿಯಲ್ಲಿ ಬೀಳುವ ಪರಿಸ್ಥಿತಿ ಇದೆ.

ಆನೇಕಲ್‌ನ ಪ್ರಮುಖ ರಸ್ತೆ ಮಿರ್ಜಾ ರಸ್ತೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು, ಗುಂಡಿಗಳಿಂದಾಗಿ ವಾಹನ ಓಡಾಟಕ್ಕೆ ಸಮಸ್ಯೆ ಉಂಟಾಗಿದೆ. ಇದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಗುಂಡಿ ತಪ್ಪಿಸುವುದೇ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ.

ವಾಹನ ಸವಾರರಿಗೆ ಗುಂಡಿ ಕಾಣಬೇಕು ಎಂಬ ಕಾರಣಕ್ಕೆ ಸ್ಥಳೀಯ ಅಂಗಡಿಗಳವರು ಪೊಲೀಸರ ಬ್ಯಾರಿಕೇಡ್ ಇಟ್ಟಿದ್ದಾರೆ. ಇದರಿಂದ ಕಾರು ಸೇರಿದಂತೆ ಇನ್ನಿತರ ದೊಡ್ಡ ವಾಹನಗ ಸಂಚಾರಕ್ಕೆ ತೊಂದರೆಯಾಗಿದೆ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂಬುದು ಜನರ ಬೇಡಿಕೆ.

ರಸ್ತೆ ಗುಂಡಿಯಲ್ಲಿ ನಿಂತ ನೀರಿನಿಂದ ವಾಹನ ಚಲಾಯಿಸಲು ಪರದಾಡುತ್ತಿರುವ ಸಾರ್ವಜನಿಕರು
ಆನೇಕಲ್‌ಗೆ ಸ್ವಾಗತ ಕೋರುವ ರಸ್ತೆ ಗುಂಡಿ
ಆನೇಕಲ್‌ನ ಮುಖ್ಯ ರಸ್ತೆಯಲ್ಲಿ ಗುಂಡಿ

Quote - ಆನೇಕಲ್‌ನ ಪ್ರಮುಖ ರಸ್ತೆಗಳು ಹಾಳಾಗಿದ್ದು ರಸ್ತೆಯಲ್ಲಿ ಗುಂಡಿ ತಪ್ಪಿಸುವುದೇ ದ್ವಿಚಕ್ರ ವಾಹನ ಸವಾರರಿಗೆ ದೊಡ್ಡ ಸವಾಲಾಗಿದೆ  ಹರಿಣಿ ಆನೇಕಲ್‌ ನಿವಾಸಿ

Quote - ಗುಂಡಿಗಳ ಮಧ್ಯೆ ರಸ್ತೆ ಹುಡುಕಬೇಕಾದ ಸ್ಥಿತಿ ಇದೆ. ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದ್ದು ಓಡಾಟಕ್ಕೆ ಕಷ್ಟವಾಗಿದೆ. ತಾತ್ಕಾಲಿಕವಾಗಿಯಾದರೂ ಗುಂಡಿ ಮುಚ್ಚಬೇಕು ಮಧುಸೂದನ್‌ ಆನೇಕಲ್‌ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.