ಹೊಸಕೋಟೆ: ಜನಸಾಮಾನ್ಯರ ಓಡಾಟಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗುತ್ತದೆ. ಆದರೆ, ಹೊಸಕೋಟೆ ನಗರದಲ್ಲಿ ಪಾದಚಾರಿ ಮಾರ್ಗಗಳೇ ಮಾಯವಾಗಿವೆ. ಇದರಿಂದಾಗಿ ಈ ರಸ್ತೆಗಳಲ್ಲಿ ತಿರುಗಾಡುವ ಪಾದಚಾರಿಗಳು ಪ್ರತಿನಿತ್ಯವೂ ತೊಂದರೆ ಎದುರಿಸುತ್ತಿದ್ದಾರೆ.
ಇಲ್ಲಿನ ಕೆಇಬಿ ವೃತ್ತದಿಂದ ತಾಲ್ಲೂಕು ಕಚೇರಿವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗ ಇದೆ. ಆದರೆ, ಪಾದಚಾರಿ ಮಾರ್ಗದ ಉದ್ದಕ್ಕೂ ಅಂಗಡಿಗಳ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಕೆಲವೆಡೆ ಪಾದಚಾರಿ ಮಾರ್ಗವನ್ನು ಅಂಗಡಿಗಳು ವ್ಯಾಪಾಸಿಕೊಂಡಿವೆ. ಮತ್ತೆ ಕೆಲವು ಕಡೆಗಳಲ್ಲಿ ಪಾದಚಾರಿ ಮಾರ್ಗವು ದ್ವಿಚಕ್ರ ವಾಹನಗಳ ನಿಲುಗಡೆ ಪ್ರದೇಶವಾಗಿ ಮಾರ್ಪಟ್ಟಿದೆ. ಈ ಕುರಿತು ಕ್ರಮ ಕೈಗೊಂಡು ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕಿದ್ದ ತಾಲ್ಲೂಕು ಆಡಳಿತ ವ್ಯವಸ್ಥೆಯು ಈ ಎಲ್ಲ ಅಕ್ರಮಗಳನ್ನು ಕಂಡೂ ಕಾಣದಂತೆ ಕೂತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ವಿವೇಕಾನಂದ ಶಾಲೆ ಮಾರ್ಗ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗ, ರಾಷ್ಟ್ರೀಯ ಹೆದ್ದಾರಿ–75ರ ಸರ್ವೀಸ್ ರಸ್ತೆ, ಮಾರುಕಟ್ಟೆ ರಸ್ತೆಯಲ್ಲಿ ಪಾದಚಾರಿ ಮಾರ್ಗಗಳನ್ನು ಅಂಗಡಿ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದು, ಅಂಗಡಿಗಳ ನಾಮಫಲಕಗಳನ್ನು ಅಳವಡಿಸಿದ್ದಾರೆ. ಪಾದಚಾರಿ ಮಾರ್ಗಗಳು ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸ್ಥಳದಂತೆ ಮಾರ್ಪಟ್ಟಿವೆ. ಇದರಿಂದ ಪಾದಚಾರಿಗಳು ಓಡಾಡಲು ಹರಸಾಹಸ ಪಡುವಂತಾಗಿದೆ. ಜನರಿಗೆ ಇಲ್ಲಿ ಪಾದಚಾರಿ ಮಾರ್ಗಗಳು ಇವೆಯೇ ಎಂಬ ಗೊಂದಲ ಕಾಡುತ್ತಿದೆ.
ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಅಧಿಕಾರಿಗಳು ಯಾರ ಮುಲಾಜಿಗೂ ಬಗ್ಗಬಾರದು. ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ನಗರಸಭೆ ಮತ್ತು ತಾಲ್ಲೂಕು ಆಡಳಿತಕ್ಕೆ ಜನಸಾಮಾನ್ಯರು ಒತ್ತಾಯಿಸುತ್ತಾರೆ.
ಪಾದಚಾರಿ ಮಾರ್ಗ ಇಲ್ಲದ ಕಾರಣ ಜನಸಾಮಾನ್ಯರು ರಸ್ತೆಗಳಲ್ಲೇ ಓಡಾಡುವ ಪರಿಸ್ಥಿತಿ ಎದುರಾಗಿದೆ. ಮಕ್ಕಳು, ವಯೋವೃದ್ಧರು ಮತ್ತು ಶಾಲೆಗೆ ಹೋಗುವ ಮಕ್ಕಳು ಅಪಘಾತಕ್ಕೆ ಸಿಲುಕುವ ಅಪಾಯ ಎದುರಿಸುತ್ತಿದ್ದಾರೆ. ಇನ್ನಾದರೂ, ನಗರಸಭೆ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಂಡು, ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಜನರ ಕೂಗು.
ಪಾದಚಾರಿ ಇಲ್ಲದಿರುವುದಕ್ಕೆ ಕಾರಣ ಯಾರು ಎಂಬುದೇ ಗೊತ್ತಾಗುತ್ತಿಲ್ಲ. ಸಮಸ್ಯೆ ಹೇಳಿಕೊಂಡವರೇ ಇಲ್ಲಿ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಹೆಸರು ಹೇಳಲು ಇಚ್ಚಿಸದ ವ್ಯಕ್ತಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಪಾದಚಾರಿ ಒತ್ತುವರಿ ತೆರವಿಗೆ ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ, ಇದು ಕಾರ್ಯಗತವಾಗಿಲ್ಲ. ಬೀದಿಬದಿ ವ್ಯಾಪಾರಿಗಳಿಗೆ ಸಮಸ್ಯೆಯಾಗದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ವಕೀಲ ರವಿಕುಮಾರ್ ಆಗ್ರಹಿಸಿದರು.
ಬೀದಿಬದಿ ವ್ಯಾಪಾರಸ್ಥರಿಗೆ ಅನ್ಯಾಯವಾಗದಂತೆ ಪಾದಚಾರಿ ಮಾರ್ಗ ತೆರವುಗೊಳಿಸಬೇಕು. ಆಗ ಮಾತ್ರ ಬಡವನ ಬದುಕಿಗೆ ದಾರಿ ಮಾಡಿಕೊಟ್ಟಂತಾಗಲಿದೆ.ಮೋಹನ್ ಕುಮಾರ್ ಡಿವೈಎಫ್ ಹೊಸಕೋಟೆ
ದೂರದೃಷ್ಟಿ ಕೊರತೆ ಕಾರಣ
ಹೊಸಕೋಟೆ ನಗರದ ಮಧ್ಯೆ ಎರಡು ಹೆದ್ದಾರಿಗಳು ಹಾದು ಹೋಗಿವೆ. ಇದರ ಜೊತೆಗೆ ವಿಸ್ತಾರವಾಗಿ ನಗರ ಬೆಳೆಯುತ್ತಿರುವ ಕಾರಣ ವಾಹನಗಳ ದಟ್ಟಣೆ ಹೆಚ್ಚುತ್ತಿದೆ. ಆದರೆ ದೂರದೃಷ್ಟಿ ಯೋಜನೆಗಳ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿ ಪಾದಚಾರಿಗಳಿಗೆ ತೊಂದರೆಯಾಗಿದೆ. ಸ್ವರೂಪ ಭಾರದ್ವಾಜ್ ನಮ್ಮ ಹೊಸಕೋಟೆ ತಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.