ADVERTISEMENT

ಹೊಸಕೋಟೆ| ಶರತ್‌ ಬಚ್ಚೇಗೌಡ ರಾಜಕೀಯ ನಾಟಕ: ಎಂಟಿಬಿ ನಾಗರಾಜ್

ಪಕ್ಷಾತೀತವಾಗಿ ₹25 ಕೋಟಿ ಅನುದಾನ ಬಿಡುಗಡೆ: ಎಂಟಿಬಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 2:55 IST
Last Updated 4 ಮಾರ್ಚ್ 2023, 2:55 IST
ಹೊಸಕೋಟೆ ನಗರದಲ್ಲಿ ನಡೆದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಘೋಷ್ಠಿಯಲ್ಲಿ ಸಚಿವ ಎಂಟಿಬಿ ನಾಗರಾಜ್‌ ಮಾತನಾಡಿದರು
ಹೊಸಕೋಟೆ ನಗರದಲ್ಲಿ ನಡೆದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಘೋಷ್ಠಿಯಲ್ಲಿ ಸಚಿವ ಎಂಟಿಬಿ ನಾಗರಾಜ್‌ ಮಾತನಾಡಿದರು   

ಹೊಸಕೋಟೆ: ‘ಚುನಾವಣೆ ಸಂದರ್ಭದಲ್ಲಿ ಶಾಸಕ ಶರತ್‌ ಬಚ್ಚೇಗೌಡ ಅವರು ಅನುದಾನದ ನೆಪದಲ್ಲಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಧರಣಿ ನಡೆಸಿ ನಾಟಕವಾಡುತ್ತಿದ್ದಾರೆ. ಈ ಮೂಲಕ ಕ್ಷೇತ್ರದ ಮತದಾರರನ್ನು ದಿಕ್ಕು ತಪ್ಪಿಸಿದ್ದಾರೆ’ ಎಂದು ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರದಲ್ಲಿ ಸಿಎಂ ಬೊಮ್ಮಾಯಿ ಅವರು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ಎಲ್ಲ ಶಾಸಕರಿಗೂ ವಿಶೇಷವಾಗಿ ₹25 ಕೋಟಿ ಅನುದಾನವನ್ನು ಪಕ್ಷಾತೀತವಾಗಿ ಬಿಡುಗಡೆ ಮಾಡಿದ್ದಾರೆ. ಶಾಸಕ ಶರತ್‌ ಬಚ್ಚೇಗೌಡ ಅವರು ಕೂಡ ಸುಮಾರು ₹48 ಕೋಟಿ ಅನುದಾನವನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ತಂದಿದ್ದಾರೆ’ ಎಂದು ಹೇಳಿದರು.

₹10 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಬೊಮ್ಮಾಯಿ ತಡೆ ಹಿಡಿದಿದ್ದಾರೆ. ಅದಕ್ಕೆ ಎಂಟಿಬಿ ನಾಗರಾಜ್‌ ಕಾರಣ ಎಂದು ವಿನಾಕಾರಣ ಆರೋಪ ಮಾಡಿದ್ದಾರೆ. ಈ ಮೂಲಕ ಕ್ಷೇತ್ರದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ADVERTISEMENT

ಅನುದಾನಕ್ಕೆ ಸಿಎಂ ಭಾವಚಿತ್ರ ಬಳಸಲ್ಲ: ಹೊಸಕೋಟೆ ಕ್ಷೇತ್ರದಲ್ಲಿ ಕೈಗೊಳ್ಳುವ ಅಭಿವೃದ್ದಿ ಕಾರ್ಯಗಳಿಗೆ ಬಿಜೆಪಿ ಸರ್ಕಾರದ ಅನುದಾನ ನೀಡಿದ್ದರೂ, ಬ್ಯಾನರ್‌ಗಳಲ್ಲಿ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಮತ್ತು ಸಂಬಂದಪಟ್ಟ ಇಲಾಖೆ ಸಚಿವ, ಉಸ್ತುವಾರಿ ಸಚಿವರ ಭಾವಚಿತ್ರ ಬಳಸದೆ ಬಚ್ಚೇಗೌಡ ಮತ್ತು ತಮ್ಮ ಬೆಂಬಲಿಗರ ಭಾವಚಿತ್ರ ಹಾಕಿಸಿಕೊಳ್ಳುತ್ತಾರೆ ಎಂದು ದೂರಿದರು.

ನಗರಸಭೆ ಅಧ್ಯಕ್ಷ ಡಿ.ಕೆ.ನಾಗರಾಜ್, ಸದಸ್ಯರಾದ ಅರುಣ್‌ ಕುಮಾರ್, ಕೆ.ದೇವರಾಜ್, ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್, ಯುವ ಮೋರ್ಚಾ ಅಧ್ಯಕ್ಷ ತವಟಹಳ್ಳಿ ರಾಮು, ಬಿಎಂಆರ್‌ಡಿಎ ಅಧ್ಯಕ್ಷ ಶಂಕರೇಗೌಡ, ಮಾಜಿ ಅಧ್ಯಕ್ಷ ಸಿ.ನಾಗರಾಜ್, ಟೌನ್‌ ಬ್ಯಾಂಕ್‌ ಅಧ್ಯಕ್ಷ ಬಾಲಚಂದ್ರ ಶೌರತ್‌ ಇದ್ದರು.

ಸದನದಲ್ಲಿ ಏಕೆ ಪ್ರಶ್ನೆ ಮಾಡಿಲಿಲ್ಲ?: ₹10 ಕೋಟಿ ಅನುದಾನವನ್ನು ಎರಡು ಬಾರಿ ತಡೆ ಹಿಡಿಯಲಾಗಿದೆ ಎಂದು ಹೇಳುವ ಶಾಸಕ ಶರತ್‌ ಬಚ್ಚೇಗೌಡ ಅವರು ಬೆಳಗಾವಿ ಅಧಿವೇಶನ ಹಾಗೂ ಬೆಂಗಳೂರಿನ ಅಧಿವೇಶನದಲ್ಲಿ ಏಕೆ ಪ್ರಶ್ನೆ ಮಾಡದೇ, ಈಗ ಪ್ರತಿಭಟನೆ ನಡೆಸುವುದು ಸಿಯಲ್ಲ. ಇದು ರಾಜಕೀಯ ಗಿಮಿಕ್‌. ಇವರ ಗಿಮಿಕ್‌ಗೆ ಕ್ಷೇತ್ರದ ಮತದಾರರು ಸೊಪ್ಪು ಹಾಕಲ್ಲ. ಬದಲಾಗಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಎಂಟಿಬಿ ನಾಗರಾಜ್‌ ಹೇಳಿದರು.

ಧರ್ಮಸ್ಥಳಕ್ಕೆ ಬರಲು ಸಿದ್ಧ: ‘ಕ್ಷೇತ್ರಕ್ಕೆ ಬರಬೇಕಾದ ₹10 ಕೋಟಿ ಅನುದಾನ ನಾನು ತಡೆ ಹಿಡಿಸಿದ್ದೇನೆ ಎಂದು ಆರೋಪಿಸಿರುವ ಶರತ್‌ ಬಚ್ಚೇಗೌಡ ನನ್ನನ್ನು ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಆಹ್ವಾನಿಸಿದ್ದಾರೆ. ಆದರೆ ನಾನು ಈ ಕ್ಷಣದಲ್ಲೆ ಬರಲು ಸಿದ್ಧ. ಆದರೆ ಅವರು ಕೂಡ ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಶಾಂತನಪುರ ದಲಿತರ ಜಮೀನನ್ನು ಕಬಳಿಕೆ ಮಾಡಿಲ್ಲ ಎಂದು ಮಂಜುನಾಥನ ಸನ್ನಿಧಿಗೆ ಬಂದು ಪ್ರಮಾಣ ಮಾಡುತ್ತಾರಾ? ಎಂದು ಪ್ರಶ್ನಿಸಿದರು.

‘ನಾನು ಕೂಡ ಈ ಬಗ್ಗೆ ಸುಮಾರು ಒಂದೂವರೆ ವರ್ಷದಿಂದ ಕೇಳುತ್ತಲೆ ಇದ್ದೇನೆ. ಅವರು ಬರುವುದಾದರೆ, ನಾನು ಕೂಡ ಯಾವ ಕ್ಷಣದಲ್ಲಿ ಬೇಕಾದರೂ ಬರಲು ಸಿದ್ಧ’ ಎಂದು ಸವಾಲು ಸ್ವೀಕರಿಸಿದರು.

ಬಚ್ಚೇಗೌಡ ರಾಜೀನಾಮೆ ನೀಡಲಿ: ಸಂಸದ ಬಚ್ಚೇಗೌಡ ಕೂಡ ಬಿಜೆಪಿ ಸರ್ಕಾರದಲ್ಲಿ ಒಬ್ಬ ಸಂಸದರಾಗಿ ಪುತ್ರನ ರಾಜಕೀಯ ಅಸ್ತಿತ್ವಕ್ಕಾಗಿ ರಾಜಕಾರಣ ಮಾಡುವುದು ಸರಿಯಲ್ಲ. ಮೊದಲು ಅವರು ರಾಜಿನಾಮೆ ಕೊಟ್ಟು ನಂತರ ನೇರವಾಗಿ ಮಗನ ಬೆಂಬಲಕ್ಕೆ ನಿಲ್ಲುವುದು ಸೂಕ್ತ ಎಂದು ಸಂಸದ ಬಚ್ಚೇಗೌಡ ವಿರುದ್ದ ಸಚಿವ ಎಂಟಿಬಿ ನಾಗರಾಜ್‌ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.