
ಹೊಸಕೋಟೆ: ನಾಲ್ಕು ಕಾರ್ಮಿಕ ಸಂಹಿತೆ ರದ್ದಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಬೆಂಬಲಿಸಿ ಫೆ.12ರಂದು ತಾಲ್ಲೂಕು ಬಂದ್ ನಡೆಸಲಾಗುವುದು ಎಂದು ವಿವಿಧ ಸಂಘಟನೆಗಳು ಪ್ರಕಟಿಸಿವೆ.
ತಾಲ್ಲೂಕಿನ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್, ದಲಿತಪರ, ಕನ್ನಡಪರ, ಪ್ರಗತಿಪರ ಸಂಘಟನೆಗಳು ಈಚೆಗೆ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಂಡವು.
ರಾಜ್ಯದಲ್ಲಿ ಟ್ರೇಡ್ ಯೂನಿಯನ್ ಜಂಟಿ ಸಮಿತಿ (ಜೆಸಿಟಿಯು) ಸಂಯುಕ್ತ ಹೋರಾಟ ಕರೆಯ ಮೇರೆಗೆ ಫೆ.12ರಂದು ತಾಲ್ಲೂಕಿನ ಕಾರ್ಮಿಕರು, ರೈತರು ಮತ್ತು ಅಂಗಡಿ ಮುಂಗಟ್ಟು ಮಾಲೀಕರು, ಆಟೊ ಚಾಲಕರ ಸಂಘ, ಟೈಲರಿಂಗ್ ಸಂಘ ಮತ್ತು ವಿವಿಧ ಸಂಘಟನೆ ಹಾಗೂ ದುಡಿಯುವ ವರ್ಗಗಳ ಸಹಕಾರದಲ್ಲಿ ಬಂದ್ ನಡೆಯಲಿದೆ ಎಂದು ಮುಖಂಡರು ತಿಳಿಸಿದರು.
ಕೇಂದ್ರ ಸರ್ಕಾರವು ಕಾರ್ಮಿಕರ ಪರವಾಗಿದ್ದ ಈ ಹಿಂದಿನ 29 ಕಾನೂನುಗಳ ಸ್ವರೂಪ ಬದಿಲಿಸಿ ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ರೂಪಿಸಲಾಗಿದೆ. ಇದು ಕಾರ್ಮಿಕರ ಮರಣ ಶಾಸನವಿದ್ದಂತೆ. ಇದರಿಂದ ಗುತ್ತಿಗೆ ಕಾರ್ಮಿರಿಗೆ ಬಂದು ದಿನಕ್ಕೆ ಕನಿಷ್ಠ ವೇತನ ₹178 ನಿಗದಿಯಾಗುತ್ತದೆ. 300ಕ್ಕಿಂತ ಕಡಿಮೆ ಕಾರ್ಮಿಕರಿರುವ ಯಾವುದೇ ಕಂಪನಿ ಮಾಲೀಕ ಸರ್ಕಾರದ ಪೂರ್ವಾನುಮತಿ ಇಲ್ಲದೆ ತನ್ನ ಕಂಪನಿ ಮುಚ್ಚಲು ಅವಕಾಶ ನೀಡುತ್ತದೆ. ಇದರಿಂದ ಕಂಪನಿ ಮಾಲೀಕರು ತಮಗೆ ಇಷ್ಟ ಬಂದಾಗ ನೇಮಿಸಿಕೊಳ್ಳುವ, ತೆಗೆದು ಹಾಕುವ ಸಂಸ್ಕೃತಿ ಸೃಷ್ಟಿಯಾಗಿ ಕಾರ್ಮಿಕರನ್ನು ಅವ್ಯಾಹತವಾಗಿ ಶೋಷಣೆ ಮಾಡಲು ಅವಕಾಶ ನೀಡುತ್ತದೆ ಎಂದು ವೊಲ್ವೋ ಕಂಪನಿಯ ಕಾರ್ಮಿಕ ಮುಖಂಡ ಆನಂದ್ ಆರೋಪಿಸಿದರು.
ಮಹಿಳಾ ಕಾರ್ಮಿಕರಿಗೆ ರಾತ್ರಿ ಪಾಳಿಗೆ ಕಡ್ಡಾಯ, ಶಿಶುವಿಹಾರ ವ್ಯವಸ್ಥೆಗೆ ಕನಿಷ್ಠ 50 ಜನ, ಗುತ್ತಿಗೆ ಕಾರ್ಮಿಕರು ಇ.ಎಸ್, ಐಪಿಎಫ್ ಪಡೆಯಲು ಕನಿಷ್ಠ ಒಂದು ಸಂಸ್ಥೆಯಲ್ಲಿ 50 ಜನ, 12 ಗಂಟೆಗಳ ಕೆಲಸ ಕಡ್ಡಾಯ, 12 ತಿಂಗಳ ಕೆಲಸ ಮಾಡದ ಕಾರ್ಮಿಕನಿಗೆ ಗ್ರಾಜುಟಿ ಇಲ್ಲ ಎಂಬ ಅವೈಜ್ಞಾನಿಕ ಕಾನೂನುಗಳು ಜಾರಿಯಾಗಲಿವೆ ಎಂದರು.
ಅಖಿಲ ಭಾರತ ವಕೀಲರ ಒಕ್ಕೂಟ ರಾಜ್ಯಾಧ್ಯಕ್ಷ ಹರಿಂದ್ರ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ತಾಲ್ಲೂಕು ಸಂಚಾಲಕ ಚಿನ್ನಸ್ವಾಮಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ನಾರಾಯಣಸ್ವಾಮಿ, ದಲಿತ ಹಕ್ಕುಗಳ ಸಮಿತಿ ಕಾರ್ಯದರ್ಶಿ ಎಂ.ಮುನಿರಾಜು, ಎಂಸಿಐಟಿಯು ಮುಖಂಡರಾದ ವೆಂಕಟರಾಜು, ಮಹಿಳಾ ಸಂಘಟನೆ ಮುಖಂಡ ಶೋಭಾ, ಡಿವೈಎಫ್‌ಐ ಮುಖಂಡ ಮೋಹನ್ ಬಾಬು,ರೈತ ಸಂಘದ ಕಾರ್ಯದರ್ಶಿ ಹೈದರ್ ಬೇಗ್, ಉಪಾಧ್ಯಕ್ಷ ರಾಜಣ್ಣ, ಕಲಾಂ ಶಾಲೆಯ ಸಂಸ್ಥಾಪಕ ಸಮೀರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.