ಹೊಸಕೋಟೆ: ಪ್ರತಿನಿತ್ಯ ಸಾವಿರಾರು ಜನರ ವ್ಯಾಯಾಮ, ಆಟೋಟ ಸೇರಿದಂತೆ ವಿವಿಧ ದೈಹಿಕ ಕಸರತ್ತಿನ ತಾಣವಾದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ.
ಮಳೆ ಸುರಿದರೆ ಕ್ರೀಡಾಂಗಣ ಸಂಪೂರ್ಣ ಒದ್ದೆಯಾತ್ತದೆ. ಕ್ರೀಡಾಂಗಣದಲ್ಲಿ ನೀರು ನಿಂತು ಕ್ರೀಡಾ ಚಟುವಟಿಕೆ ನಡೆಸಲು ದೈಹಿಕ ಅಡ್ಡಿಯಾಗುತ್ತಿದೆ. ಕ್ರೀಡಾಂಗಣದಲ್ಲಿ ನಿಂತ ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕೆರೆಯಾಗಿ ಮಾರ್ಪಡುತ್ತದೆ. ಆ ನೀರು ಕ್ರೀಡಾಂಗಣದ ಪಕ್ಕದಲ್ಲಿರುವ ರಸ್ತೆ ಮೂಲಕ ಪೊಲೀಸ್ ಠಾಣೆ ಮಾರ್ಗವಾಗಿ ದೊಡ್ಡಕೆರೆಯ ಭಾಗಕ್ಕೆ ಹರಿದು ಹೋಗುತ್ತದೆ. ಆ ಸಂದರ್ಭದಲ್ಲಿ ರಸ್ತೆಯಲ್ಲಿ ಸಾರ್ವಜನಿಕರಿಗೆ ಮತ್ತು ವಾಹನ ಸವಾರರು ಪರದಾಡಬೇಕಾಗುತ್ತದೆ.
ಉಳಿದಂತೆ ಕ್ರೀಡಾಂಗಣದ ಸುತ್ತಲೂ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇದೆಯಾದರೂ ಕೂತವರಿಗೆ ಮಳೆ, ಬಿಸಿಲಿನಿಂದ ರಕ್ಷಣೆ ಪಡೆಯಲು ಮಾತ್ರ ಮೇಲ್ಛಾವಣಿ ವ್ಯವಸ್ಥೆ ಇಲ್ಲ. ದಿನವಿಡೀ ಶಾಲಾ, ಕಾಲೇಜುಗಳ ಕ್ರೀಡೆ ನಡೆದಾಗ ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಪಡೆಯಲು ವಿದ್ಯಾರ್ಥಿಗಳು ಪರದಾಡುತ್ತಾರೆ.
ಕ್ರೀಡಾಂಗಣದಲ್ಲಿ ವೈಜ್ಞಾನಿಕವಾಗಿ ನೀರು ಇಂಗುವ ವ್ಯವಸ್ಥೆ, ಸೂಕ್ತ ಒಳಚರಂಡಿ ವ್ಯವಸ್ಥೆ ಮಾಡಬೇಕಿದೆ. ಕ್ರೀಡಾಂಗಣದಲ್ಲಿ ಶೌಚಾಲಯ ಇದೆಯಾದರೂ ಸ್ವಚ್ಛವಾಗಿರದ ಕಾರಣ ಎಲ್ಲರೂ ಪರ್ಯಾಯ ವ್ಯವಸ್ಥೆಗೆ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ. ಇತ್ತೀಚೆಗೆ ಕ್ರೀಡಾಂಗಣದ ಇರುವ ಶೌಚಾಲಯಕ್ಕೆ ಬೀಗ ಜಡಿದ ಪರಿಣಾಮ ಸಾರ್ವಜನಿಕರಿಗೆ ಮತ್ತಷ್ಟು ಸಮಸ್ಯೆಯಾಗಿದೆ.
ಹೊಸಕೋಟೆ ಚನ್ನಬೈರೇಗೌಡ ಕ್ರೀಡಾಂಗಣದ ಆಧುನೀಕರಣ, ಒಳಾಂಗಣ ಕ್ರೀಡಾಂಗಣ ನಿರ್ಮಾಣ ಹಾಗೂ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ₹3 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದ್ದಾರೆ. ಆದರೆ ಈವರೆಗೂ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ಆದಷ್ಟು ಬೇಗ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಿ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಸಮಸ್ಯೆಗಳಿಗೆ ಮುಕ್ತಿ ನೀಡಿ...
ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕ್ರೀಡಾಪಟುಗಳು ಹೊಸಕೋಟೆಯಲ್ಲಿ ಇದ್ದಾರೆ. ಅಲ್ಲದೆ ಹಿರಿಯ ಕ್ರೀಡಾಪಟುಗಳು ನಿರಂತರವಾಗಿ ಕ್ರೀಡಾಂಗಣದಲ್ಲಿ ವಿವಿಧ ಕಸರತ್ತು ಮಾಡುತ್ತಲೇ ಇರುತ್ತಾರೆ. ಅವರೆಲ್ಲರ ಹಿರದೃಷ್ಟಿಯಿಂದ ಆದಷ್ಟು ಬೇಗಾ ಕ್ರೀಡಾಂಗಣ ಸಮಸ್ಯೆ ರಹಿತವಾಗಿ ರೂಪಿಸುವ ಕೆಲಸ ಆಗಬೇಕಿದೆ.ಕಿರಣ್, ಕ್ರೀಡಾಪಟು.
ಮೂಲ ಸೌಕರ್ಯ ಕಲ್ಪಿಸಿ
ನಾವು ಆರೋಗ್ಯದ ದೃಷ್ಟಿಯಿಂದ ಪ್ರತಿನಿತ್ಯ ಇದೇ ಕ್ರೀಡಾಂಗಣಕ್ಕೆ ವ್ಯಾಯಾಮ ಮಾಡಲು ಬರುತ್ತೇವೆ. ದೈಹಿಕ ಕಸರತ್ತಿನ ವೇಳೆ ಶುದ್ಧ ಕುಡಿಯುವ ನೀರು, ಸ್ವಚ್ಚ ಶೌಚಾಲಯದ ವ್ಯವಸ್ಥೆ ಮಾಡಲಿಮುನಿಯಪ್ಪ,ನಾಗರಿಕ
ಅಧಿಕಾರಿಗಳಿಗೆ ಒತ್ತಡ ಹಾಕಿ
ನಗರದ ಶ್ರೀ ಚನ್ನಬೈರೇಗೌಡ ಕ್ರೀಡಾಂಗಣವನ್ನು ಅಭಿವೃದ್ಧಿಗೆ ₹3 ಕೋಟಿ ಅನುದಾನ ಬಂದಿದೆ. ಆದಷ್ಟು ಬೇಗ ಕ್ರೀಡಾಂಗಣದ ಕಾಮಗಾರಿಯನ್ನು ಪ್ರಾರಂಭಿಸುವಂತೆ ಶಾಸಕರು ಅಧಿಕಾರಿಗಳಿಗೆ ಒತ್ತಡ ಹೇರಲಿ.ಶ್ರೀನಿವಾಸ್, ನಾಗರಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.