ADVERTISEMENT

ದೇವನಹಳ್ಳಿ: ₹16 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 8:39 IST
Last Updated 11 ಫೆಬ್ರುವರಿ 2026, 8:39 IST
ಸೂಚಕ ಚಿತ್ರ (ಎಐ ರಚಿಸಿದ ಚಿತ್ರ)
ಸೂಚಕ ಚಿತ್ರ (ಎಐ ರಚಿಸಿದ ಚಿತ್ರ)   

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶಗಳಿಂದ ಅಕ್ರಮವಾಗಿ ಹೈಡ್ರೋಪೋನಿಕ್ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಫೆಬ್ರುವರಿ 9ರ ತಡರಾತ್ರಿ ನಡೆದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಬ್ಯಾಂಕಾಕ್‌ನಿಂದ ಆಗಮಿಸಿದ್ದ ಇಬ್ಬರು ಪ್ರಯಾಣಿಕರು ತಮ್ಮ ಲಗೇಜ್ ಬ್ಯಾಗ್‌ಗಳಲ್ಲಿ ₹8.31 ಕೋಟಿ ಮೌಲ್ಯದ 23.76 ಕೆ.ಜಿ ಹೈಡ್ರೋಪೋನಿಕ್ ಗಾಂಜಾವನ್ನು ಸಾಗಿಸುತ್ತಿದ್ದ ವೇಳೆ ಪತ್ತೆಯಾಗಿದೆ. 

ಇನ್ನೊಂದು ಪ್ರಕರಣದಲ್ಲಿ ಥೈಲ್ಯಾಂಡ್‌ನಿಂದ ಬಂದಿದ್ದ ಮತ್ತೊಬ್ಬ ಪ್ರಯಾಣಿಕನು ಆಹಾರ ಪದಾರ್ಥಗಳ ಪ್ಯಾಕೆಟ್‌ಗಳಲ್ಲಿ ಮರೆಮಾಚಿ ₹3.70 ಕೋಟಿ ಮೌಲ್ಯದ 10.58 ಕೆ.ಜಿ ಗಾಂಜಾವನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದಾಗ ತಪಾಸಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ.

ADVERTISEMENT

ಇದೇ ರೀತಿ, ಫೆಬ್ರುವರಿ 10ರಂದು ಬ್ಯಾಂಕಾಕ್‌ನಿಂದ ಬಂದಿದ್ದ ಇನ್ನೊಬ್ಬ ಪ್ರಯಾಣಿಕ ₹4.20 ಕೋಟಿ ಮೌಲ್ಯದ 12 ಕೆ.ಜಿ ಹೈಡ್ರೋಪೋನಿಕ್ ಗಾಂಜಾವನ್ನು ಸಾಗಿಸುತ್ತಿದ್ದ ವೇಳೆ ಬಂಧನಕ್ಕೊಳಗಾಗಿದ್ದಾನೆ.

ಬಂಧಿತರೆಲ್ಲರ ವಿರುದ್ಧ ಮಾದಕ ವಸ್ತುಗಳ ನಿಷೇಧ ಕಾಯ್ದೆ (ಎನ್‌ಡಿಪಿಎಸ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ವಿಚಾರಣೆ ಮುಂದುವರಿದಿದೆ ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.