
ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಮುಂದೆ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ 2ನೇ ದಿನಕ್ಕೆ ಕಾಲಿಟ್ಟಿದೆ
ದೊಡ್ಡಬಳ್ಳಾಪುರ: ಒಳಚರಂಡಿ ಕೊಳಚೆ ನೀರು ಶುದ್ಧೀಕರಣಕ್ಕೆ ಎಸ್‌ಟಿಪಿ ಘಟಕ ಸ್ಥಾಪಿಸಬೇಕೆಂದು ಒತ್ತಾಯಿಸಿ ಅರ್ಕಾವತಿ ನದಿ ಪಾತ್ರದ ಕೆರೆ ಸಂರಕ್ಷಣಾ ವೇದಿಕೆ ಹಾಗೂ ದೊಡ್ಡತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮ ಪಂಚಾಯ್ತಿ ಕೆರೆ ಹೋರಾಟ ಸಮಿತಿ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಆರಂಭವಾಗಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
2ನೇ ದಿನ ನಾಲ್ವರು ಹೋರಾಟಗಾರರು ಅಸ್ವಸ್ಥಗೊಂಡರು, ಸಂಜೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೃಷ್ಣಾ ರೆಡ್ಡಿ, ವೈದ್ಯಾಧಿಕಾರಿ ಡಾ. ಪರಮೇಶ್ವರ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ನಡೆಸಿಸಲಾಯಿತು. ಔಷಧಿ ನೀಡಿದ ಬಳಿಕ ಚೇತರಿಸಿಕೊಂಡರು.
‘ಅಧಿಕಾರಿಗಳ ಭರವಸೆ ಬೇಡ. ಎಸ್‌ಟಿಪಿ ಘಟಕಕ್ಕೆ ₹57 ಕೋಟಿ ರೂ ಮಂಜೂರು ಮಾಡುವ ಸರ್ಕಾರದ ಕಾರ್ಯದರ್ಶಿಗಳು ಇಲ್ಲಿಗೆ ಬಂದು ಉತ್ತರ ನೀಡುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ’ ಎಂದು ಉಪವಾಸ ಕೈಬಿಡಿ ಎಂದು ಭರವಸೆ ನೀಡಲು ಬಂದ ಅಧಿಕಾರಿಗಳಿಗೆ ಪ್ರತಿಭಟನಾಕಾರರು ಪ್ರತ್ಯುತ್ತರ ನೀಡಿದರು.
ರಾಜ್ಯ ಸರ್ಕಾರ ದೊಡ್ಡಬಳ್ಳಾಪುರದ ಕೊಳಚೆ ನೀರಿಗೆ ಎಸ್‌ಟಿಪಿ ಘಟಕ ಮಾಡಲು ಹಣ ಇಲ್ಲ ಎಂದು ಲಿಖಿತ ರೂಪದಲ್ಲಿ ಕೊಟ್ಟಿರುವುದು ನಾಚಿಕೆಗೇಡಿನ ಸಂಗತಿ. ನಾಯಿಗಳಿಗೆ ಕೋಳಿ ಮಾಂಸ ಹಾಕಲು ಕೋಟಿ ಕೋಟಿ ಹಣ ಇರುತ್ತದೆ. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕಾಪಿ ಕುಡಿಯಲು ಬಿಸ್ನತ್ ತಿನ್ನಲು ₹200 ಕೋಟಿಗೂ ಹೆಚ್ಚು ಹಣವಿರುತ್ತದೆ. ಆದರೆ ಸಾವಿರಾರು ಜನರು ಶುದ್ಧ ನೀರು ಕುಡಿಯಲು, ಕೊಳದ ನೀರನ್ನು ಶುದ್ಧ ಮಾಡಲು ₹50 ಕೋಟಿ ಹಣ ಇರುವುದಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ವ್ಯಾಪ್ತಿಯಿಂದ ಬರುತ್ತಿರುವ ಒಳಚರಂಡಿ ನೀರನ್ನು ಶುದ್ಧೀಕರಿಸಿ ಬಿಡುವಂತೆ ಏಳು ವರ್ಷಗಳಿಂದಲೂ ಹೋರಾಟ ಮಾಡಲಾಗುತ್ತಿದೆ. ನಮಗೆ ಯಾವುದೇ ಭರವಸೆ ಬೇಡ. ಕ್ಯಾನ್ಸರ್, ಕಿಡ್ನಿ ಮೊದಲಾದ ಸಮಸ್ಯೆಗಳಿವೆ. ನಮ್ಮ ಆರೋಗ್ಯಕ್ಕಿಂತ ನಮ್ಮ ಊರಿನ ಜನರ ಆರೋಗ್ಯ ಮುಖ್ಯ. ಸರ್ಕಾರ ಕಣ್ಣು ತೆರೆಯಲ್ಲ. ಹಿಂದೆ ದಯಾಮರಣ ಸಹ ನೀಡಿ ಎಂದಿದ್ದೆವು. ಈಗ ಕಾಮಗಾರಿ ಹಣವನ್ನು ಕಾರ್ಖಾನೆಗಳ ಬಳಿಯೇ ವಸೂಲಿ ಮಾಡಿ. ಸಧ್ಯಕ್ಕೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಗಣರಾಜ್ಯೋತ್ಸವ ದಿನದಂದು ಕಪ್ಪು ಬಾವುಟ ಹಾರಿಸುವುದು ನಿಶ್ವಿತ ಎಂದು ಹೋರಾಟಗಾರರು ತಮ್ಮ ಹೋರಾಟ ಮುಂದುವರೆಸಿದರು.
ಕೆರೆ ಹೋರಾಟ ಸಮಿತಿ ಮುಖಂಡರಾದ ರಮೇಶ್, ವಸಂತಕುಮಾರ್, ಸತೀಶ್, ಆದಿತ್ಯನಾಗೇಶ್, ಕಾಳೇಗೌಡ, ರಾಮಕೃಷ್ಣ, ಟಿ.ಕೆ.ಹನುಮಂತರಾಜು, ಟಿ.ಜಿ.ಮಂಜುನಾಥ್, ರೈತ ಸಂಘದ ಪ್ರಸನ್ನ, ಕರವೇ ಚಂದ್ರಶೇಖರ್ ಭಾಗವಹಿಸಿದ್ದರು.
ಧರಣಿ ಮುಂದುವರಿಕೆ: ಧರಣಿ ಮಾಡಿ ಆದರೆ ಉಪವಾಸ ಮಾಡಬೇಡಿ ಎಂದು ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ನವೀನ್ ಕುಮಾರ್ ಮನವಿ ಮಾಡಿದರೂ ಸತ್ಯಾಗ್ರಹ ನಿರತರು,ರಾತ್ರಿ 9 ಗಂಟೆಯಾದರೂ ಸಹ ಹೋರಾಟ ಮುಂದುವರೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.