ADVERTISEMENT

ಇನ್ನೋವಿಸ್ತ–2026 | ವಿದೇಶಿ ತಂತ್ರಜ್ಞಾನ ಅವಲಂಬನೆ ತಗ್ಗಲಿ: ಮಲ್ಲಿಕ್ ಪ್ರಸಾದ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 6:21 IST
Last Updated 4 ಜನವರಿ 2026, 6:21 IST
‘ಇನ್ನೋವಿಸ್ತ–2026’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಯಾರಿಸಿದ್ದ ಯೋಜನೆಗಳ ಕುರಿತು ವಿಷಯ ತಜ್ಞರು ಮಾಹಿತಿ ಪಡೆದುಕೊಂಡರು.
‘ಇನ್ನೋವಿಸ್ತ–2026’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಯಾರಿಸಿದ್ದ ಯೋಜನೆಗಳ ಕುರಿತು ವಿಷಯ ತಜ್ಞರು ಮಾಹಿತಿ ಪಡೆದುಕೊಂಡರು.   

ದೇವನಹಳ್ಳಿ:  ಪಟ್ಟಣದ ಸಮೀಪದ ಸರ್ ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ  ‘ಇನ್ನೋವಿಸ್ತ–2026’ ಕಾರ್ಯಕ್ರಮ ನಡೆಯಿತು.

ಸಂಸ್ಥೆಯ ಇನೊವೇಶನ್ ಕೌನ್ಸಿಲ್ (ಐಐಸಿ) ಆಶ್ರಯದಲ್ಲಿ ನಡೆದ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ವಿವಿಧ ತಾಂತ್ರಿಕ ವಿಭಾಗಗಳ ಅಂತಿಮ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆರೋಗ್ಯ, ಸುರಕ್ಷತೆ, ಪರಿಸರ ಸಂರಕ್ಷಣೆ, ಕೃಷಿ, ಇಂಧನ ಮತ್ತು ಡಿಜಿಟಲ್ ತಂತ್ರಜ್ಞಾನ ಸೇರಿದಂತೆ ಸಮಾಜ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ತಯಾರಿಸಲಾಗಿದ್ದ ಮಾದರಿಗಳು ಹಾಗೂ ತಂತ್ರಜ್ಞಾನ ಆಧಾರಿತ ನಾವೀನ್ಯ ಆಲೋಚನೆಗಳು ಗಮನ ಸೆಳೆದವು.

ಸಂಸ್ಥೆಯ ಹಳೆಯ ವಿದ್ಯಾರ್ಥಿ, ಅಮೆರಿಕದ ನ್ಯೂಯಾರ್ಕ್‌ನ ಎರಿಕ್ಸನ್ ಟೆಲಿಕಮ್ಯುನಿಕೇಶನ್ಸ್ ಇಂಕ್‌ನ ಲೀಡ್ ಸೆಕ್ಯುರಿಟಿ ಆರ್ಕಿಟೆಕ್ಟ್ ಮಲ್ಲಿಕ್ ಪ್ರಸಾದ್ ಮಾತನಾಡಿ, ‘ವಿದೇಶಿ ತಂತ್ರಜ್ಞಾನಕ್ಕೆ ಅವಲಂಬಿತರಾಗದೆ, ನಮ್ಮ ಸುತ್ತಲಿನ ಸಮಸ್ಯೆಗಳಿಗೆ ನಮ್ಮಲ್ಲಿಯೇ ಪರಿಹಾರ ಹುಡುಕುವ ಚಿಂತನೆ ಬೆಳೆಸಬೇಕು. ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಸುಸ್ಥಿರ ಮತ್ತು ಕಡಿಮೆ ವೆಚ್ಚದ ತಾಂತ್ರಿಕ ಪರಿಹಾರಗಳನ್ನು ರೂಪಿಸುವುದೇ ನಿಜವಾದ ನಾವೀನ್ಯತೆ’ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ADVERTISEMENT

‘ಆತ್ಮನಿರ್ಭರ ಭಾರತ’ ನಿರ್ಮಾಣದಲ್ಲಿ ಯುವ ನಾವೀನ್ಯಕಾರರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.

ಕೃಷ್ಣದೇವರಾಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಕೆ.ವಿ. ಶೇಖರ್, ಇಂತಹ ಪ್ರದರ್ಶನಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಉದ್ಯಮಶೀಲತೆ ಮತ್ತು ಸಂಶೋಧನೆ ಆಧಾರಿತ ವೃತ್ತಿಜೀವನಕ್ಕೆ ದಾರಿ ತೆರೆದುಕೊಳ್ಳುತ್ತವೆ. ಹೊಸ ಆಲೋಚನೆಗಳನ್ನು ಕೇವಲ ಪ್ರಾಜೆಕ್ಟ್‌ಗೆ ಸೀಮಿತಗೊಳಿಸದೆ ಮುಂದುವರಿಸಬೇಕು’ ಎಂದರು.

ಪ್ರಾಂಶುಪಾಲ ಡಾ. ಎಂ.ಎನ್. ತಿಪ್ಪೇಸ್ವಾಮಿ, ತರಗತಿಯಲ್ಲಿ ಕಲಿತ ತಾಂತ್ರಿಕ ಜ್ಞಾನವನ್ನು ವಾಸ್ತವ ಜಗತ್ತಿನಲ್ಲಿ ಪ್ರಯೋಗಿಸುವ ಅವಕಾಶವೇ ಇಂತಹ ವೇದಿಕೆಗಳ ಉದ್ದೇಶವಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಪರಸ್ಪರ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಾಗ ನಿಜವಾದ ನಾವೀನ್ಯತೆ ಮೂಡಿಬರುತ್ತದೆ ಎಂದರು.

ಕೃಷಿ ಕ್ಷೇತ್ರದಲ್ಲಿ ವಿವಿಧ ವ್ಯವಸಾಯ ಕೆಲಸಗಳಿಗೆ ಅನುಕೂಲವಾಗುವ ದ್ರೋಣ್‌ ಮಾದರಿಯನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಉಪಪ್ರಾಂಶುಪಾಲ ಡಾ. ಭಾರತಿ ಗಣೇಶ್, ಸಮಸ್ಯೆ ಗುರುತಿಸುವುದು, ತಂಡವಾಗಿ ಕೆಲಸ ಮಾಡುವುದು ಮತ್ತು ಪರಿಹಾರ ರೂಪಿಸುವ ಕೌಶಲ್ಯಗಳನ್ನು ಬೆಳೆಸಲು ‘ಇನ್ನೋವಿಸ್ತ’ ಸಹಕಾರಿಯಾಗಿದೆ ಎಂದರು.

ವಿವಿಧ ತಾಂತ್ರಿಕ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಹಾಗೂ ಹೆಚ್ಚಿನ ಸಂಖ್ಯೆಯ ಅಂತಿಮ ವರ್ಷದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಜನೆಗಳನ್ನು ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.